ಮೂರು ದಶಕಗಳ ಹಿಂದೆ ನಡೆದ ರಸ್ತೆ ರಂಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಶಿಕ್ಷೆಯ ಪ್ರಮಾಣ ತಗ್ಗಿಸಿ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿರುವ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವಂತೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ [ಮೃತ ಜಸ್ವಿಂದರ್ ಸಿಂಗ್ ಕಾನೂನು ಪ್ರತಿನಿಧಿ ಮತ್ತು ನವಜೋತ್ ಸಿಂಗ್ ಸಿಧು ಇನ್ನಿತರರ ನಡುವಣ ಪ್ರಕರಣ].
1988ರಲ್ಲಿ ನಡೆದಿದ್ದ ರಸ್ತೆ ರಂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ಅವರಿಗೆ ವಿಧಿಸಲಾಗಿದ್ದ 3 ವರ್ಷಗಳ ಜೈಲು ಶಿಕ್ಷೆಯ ಪ್ರಮಾಣವನ್ನು ಸುಪ್ರೀಂಕೋರ್ಟ್ ₹ 1,000 ಜುಲ್ಮಾನೆಯಾಗಿ ಪರಿವರ್ತಿಸಿತ್ತು. ಇದನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು.
ಸಿಧು ತಮ್ಮ ಅಫಿಡವಿಟ್‌ನಲ್ಲಿ “ಅಪರಾಧ ಘಟಿಸಿದ ದಿನದಿಂದ ಹೆಚ್ಚು ಕಾಲ ವಿಳಂಬವಾಗಿದ್ದರೆ ಜುಲ್ಮಾನೆ ವಿಧಿಸುವುದು ಸೂಕ್ತ ಶಿಕ್ಷೆಯಾಗುತ್ತದೆ” ಎಂದು ವಾದಿಸಿದ್ದಾರೆ. ಸಂಸದರಾಗಿ ತಾವು ದೋಷರಹಿತವಾಗಿ ಸಕ್ರಿಯ ಸಾರ್ವಜನಿಕ ಜೀವನದಲ್ಲಿ ತೊಡಗಿದ್ದು ತಮ್ಮ ಲೋಕಸಭಾ ಕ್ಷೇತ್ರದ ಜನರ ಬಗ್ಗೆ ಮಾತ್ರವಲ್ಲದೆ ಸಾರ್ವಜನಿಕರ ಕಲ್ಯಾಣಕ್ಕಾಗಿ ದೊಡ್ಡಮಟ್ಟದಲ್ಲಿ ಕೆಲಸ ಮಾಡಿರುವುದಾಗಿ ಸಿಧು ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಕ್ರೀಡಾ ಬದುಕಿನ ಕೊಡುಗೆಗಳನ್ನೂ ಅವರು ವಿವರಿಸಿದ್ದಾರೆ. ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರ ಪೀಠ ಇಂದು ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಲಿದೆ.
ಏನಿದು ಘಟನೆ?
ಸಿಧು ಅವರು 1988ರಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಲಿಸಿದ್ದು ರಂಪಾಟಕ್ಕೆ ಕಾರಣವಾಗಿತ್ತು. ಸಿಧು ಅವರು ಗೌತಂ ಸಿಂಗ್ ಎಂಬ 65 ವರ್ಷದ ವೃದ್ಧನಿಗೆ ಥಳಿಸಿದ್ದರು. ಇದರಿಂದ ವೃದ್ಧ ಕುಸಿದು ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಅಪರಾಧ ನಡೆದ ಸ್ಥಳದಿಂದ ಸಿಧು ಕಾಲ್ಕಿತ್ತಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಅವರ ವಿರುದ್ಧ ಮೃತ ವೃದ್ಧರ ಮಗ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಹೃದಯಾಘಾತದಿಂದ ವೃದ್ಧ ಸಾವನ್ನಪಿದ್ದಾರೆಯೇ ವಿನಾ ಅವರ ಮೇಲೆ ನಡೆದ ದಾಳಿಯಿಂದಲ್ಲ ಎಂದು ವಿಚಾರಣಾ ನ್ಯಾಯಾಲಯ 1999ರಲ್ಲಿ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು 2006ರಲ್ಲಿ ಬದಿಗೆ ಸರಿಸಿದ್ದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಇದು ಉದ್ದೇಶಪೂರ್ವಕವಲ್ಲದ ಕೊಲೆ ಎಂದಿತ್ತು. ಸಿಧು ಹಾಗೂ ಇನ್ನೊಬ್ಬ ಆರೋಪಿಗೆ ಮೂರು ವರ್ಷ ಜೈಲು ಹಾಗೂ ತಲಾ ರೂ ಒಂದು ಲಕ್ಷ ದಂಡ ವಿಧಿಸಿತ್ತು. ಈ ತೀರ್ಪನ್ನು ಮೇ 2018 ರಲ್ಲಿ ತಳ್ಳಿಹಾಕಿದ್ದ ಸುಪ್ರೀಂಕೋರ್ಟ್ ಐಪಿಸಿ ಸೆಕ್ಷನ್ 323 ರ ಅಡಿಯಲ್ಲಿ ರೂ. 1000 ದಂಡ ವಿಧಿಸಿ ಬಿಡುಗಡೆ ಮಾಡಿತ್ತು. ತೀರ್ಪನ್ನು ಮರುಪರಿಶೀಲಿಸುವಂತೆ ಮೃತ ವೃದ್ಧನ ಕಡೆಯವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.