Calcutta High Court with RG Kar hospital 
ಸುದ್ದಿಗಳು

ಆರ್‌ ಜಿ ಕರ್ ಪ್ರಕರಣ: ಗಲ್ಲುಶಿಕ್ಷೆ ಕೋರಿದ್ದ ಮನವಿಯ ನಿರ್ವಹಣೆ ಕುರಿತು ತೀರ್ಪು ಕಾಯ್ದಿರಿಸಿದ ಕಲ್ಕತ್ತಾ ಹೈಕೋರ್ಟ್

ಈ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಿರುವ ಸಿಬಿಐ, ಪ್ರಕರಣವನ್ನು ತಾನು ತನಿಖೆ ನಡೆಸಿರುವುದರಿಂದ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬಹುದೇ ಎಂದು ಪ್ರಶ್ನಿಸಿದೆ.

Bar & Bench

ಕೊಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ  ಮೇಲ್ಮನವಿ ಸಲ್ಲಿಸಬಹುದೇ ಎಂಬ ಕುರಿತಂತೆ ಕಲ್ಕತ್ತಾ ಹೈಕೋರ್ಟ್‌ ಸೋಮವಾರ ತೀರ್ಪು ಕಾಯ್ದಿರಿಸಿದೆ.

ಸಿಬಿಐ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಿರೋಧಿಸಿದ್ದು ತಾನು ಪ್ರಕರಣದ ತನಿಖೆ ನಡೆಸುತ್ತಿದ್ದೇನೆಯೇ ವಿನಾ ರಾಜ್ಯ ಸರ್ಕಾರವಲ್ಲ ಎಂದಿದೆ. ರಾಯ್‌ಗೆ ಮರಣದಂಡನೆ ವಿಧಿಸುವಂತೆ ರಾಜ್ಯ ಸರ್ಕಾರದಂತೆಯೇ ಸಿಬಿಐ ಕೂಡ ಮೇಲ್ಮನವಿ ಸಲ್ಲಿಸಿದೆ .

ಇಂದು ಸಿಬಿಐನ ಆಕ್ಷೇಪಣೆಗಳ ಕುರಿತು ಮತ್ತು ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಅರ್ಹತೆಗಳ ಮೇಲೆ ವಿಚಾರಣೆಗೆ ಮುಂದುವರಿಸಬೇಕೆ ಎಂಬುದರ ಕುರಿತು ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್  ಮತ್ತು  ಎಂ ಡಿ ಶಬ್ಬರ್ ರಶೀದಿ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತು.

ಸಿಬಿಐಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಪ್ರತಿನಿಧಿಸಿದ್ದರು . ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ವಾದ ಮಂಡಿಸಿದ್ದರು.

ಕೊಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಜನವರಿ 20ರಂದು ಅಪರಾಧಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ  ಅಪರಾಧ ಕ್ರೂರ ಮತ್ತು ಪೈಶಾಚಿಕವಾಗಿದ್ದರೂ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂಬ ವರ್ಗಕ್ಕೆ ಸೇರದೇ ಇರುವುದರಿಂದ ಮರಣ ದಂಡನೆ ವಿಧಿಸಲಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರ ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಕೋರಿತ್ತು. ಕೂಡಲೇ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಸಿಬಿಐ ರಾಜ್ಯ ಸರ್ಕಾರದ ಮನವಿಯನ್ನು ನಿರ್ವಹಿಸುವಂತಿಲ್ಲ ಎಂದು ವಾದಿಸಿತ್ತು.  

ಇಂದು ರಾಜ್ಯ ಸರ್ಕಾರದ ಪರ ವಾದಿಸಿದ ಅಡ್ವೊಕೇಟ್‌ ಜನರಲ್‌ ಅವರು, ರಾಜ್ಯದ ಪೊಲೀಸರು ದಾಖಲಿಸಿರುವ ಪ್ರಥಮ ವರ್ತಮಾನ ವರದಿಯು ಈಗಲೂ ಅಸ್ತಿತ್ವದಲ್ಲಿದೆ. ಹಾಗಾಗಿ, ರಾಜ್ಯ ಸರ್ಕಾರವು ಪ್ರಕರಣದಲ್ಲಿ ಅರ್ಜಿಯನ್ನು ಸಲ್ಲಿಸುವ ಅಧಿಕಾರವನ್ನು ಹೊಂದಿದೆ ಎಂದು ವಾದಿಸಿದರು.