Mamata Banerjee and Supreme Court  Facebook
ಸುದ್ದಿಗಳು

ಆರ್ ಜಿ ಕರ್ ಪ್ರಕರಣ: ಮಮತಾ ಬ್ಯಾನರ್ಜಿ ರಾಜೀನಾಮೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಅರ್ಜಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ರಾಜಕೀಯ ವೇದಿಕೆಯಾಗಿ ತನ್ನನ್ನು ಪರಿಗಣಿಸುವುದನ್ನು ಮುಂದುವರೆಸಿದರೆ ನ್ಯಾಯಾಲಯದಿಂದ ತೆಗೆದುಹಾಕಲಾಗುವುದು ಎಂದು ಸಂಬಂಧಪಟ್ಟ ವಕೀಲರಿಗೆ ಎಚ್ಚರಿಕೆ ನೀಡಿತು.

Bar & Bench

ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹುದ್ದೆಯಿಂದ ವಜಾಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ [ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ಪ್ರಕರಣಗಳ ಸ್ವಯಂ ಪ್ರೇರಿತ ವಿಚಾರಣೆ].

ಅರ್ಜಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ರಾಜಕೀಯ ವೇದಿಕೆಯಾಗಿ ತನ್ನನ್ನು ಪರಿಗಣಿಸುವುದನ್ನು ಮುಂದುವರೆಸಿದರೆ ನ್ಯಾಯಾಲಯದಿಂದ ತೆಗೆದುಹಾಕಲಾಗುವುದು ಎಂದು ಸಂಬಂಧಪಟ್ಟ ವಕೀಲರಿಗೆ ಎಚ್ಚರಿಕೆ ನೀಡಿತು.

“ಇದು ರಾಜಕೀಯ ವೇದಿಕೆಯಲ್ಲ. ನೀವು ವಕೀಲರ ಪರಿಷತ್ತಿನ ಸದಸ್ಯರು. ನಾವು ಹೇಳುವ ವಿಚಾರಗಳಿಗೆ ನಿಮ್ಮ ದೃಢೀಕರಣ ನಮಗೆ ಬೇಕಿಲ್ಲ. ನೀವು ಏನು ಹೇಳುವಿರೋ ಅದು ಕಾನೂನು ಶಿಸ್ತಿನ ನಿಯಮಕ್ಕನುಗುಣವಾಗಿ ಇರಬೇಕು. ರಾಜಕೀಯ ಆಡಳಿತಗಾರರ ಬಗ್ಗೆ ನಿಮಗೇನನ್ನಿಸುತ್ತದೆ ಎಂಬುದನ್ನು ತಿಳಿಯಲು ನಾವಿಲ್ಲಿ ಇಲ್ಲ. ಕ್ಷಮಿಸಿ, ನಿಮ್ಮನ್ನು ನ್ಯಾಯಾಲಯದಿಂದ ತೆಗೆದುಹಾಕಬೇಕಾದೀತು” ಎಂದು ನ್ಯಾ. ಚಂದ್ರಚೂಡ್‌ ಅರ್ಜಿದಾರ ವಕೀಲರಿಗೆ ಎಚ್ಚರಿಸಿತು.

ಇದಕ್ಕೆ ದನಿಗೂಡಿಸಿದ ಭಾರತದ ಸಾಲಿಸಿಟರಲ್‌ ಜನರಲ್‌ ತುಷಾರ್‌ ಮೆಹ್ತಾ ಇಂತಹ ಅರ್ಜಿಗಳಿಗೆ ಇದು ವೇದಿಕೆಯಲ್ಲ ಎಂದರು.

ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಇಂದು ಆಲಿಸಿದ ನ್ಯಾಯಾಲಯ ರಾಜ್ಯದ ವೈದ್ಯಕೀಯ ಕಾಲೇಜುಗಳು/ಆಸ್ಪತ್ರೆಗಳಲ್ಲಿ ಭದ್ರತಾ ಕ್ರಮಗಳನ್ನು ನಿಧಾನಗತಿಯಲ್ಲಿ ಜಾರಿಗೊಳಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಎರಡು ವಾರಗಳಲ್ಲಿ ಭದ್ರತೆಗೆ ಸಂಬಂಧಿಸಿದ ಕ್ರಮಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ವೈದ್ಯಕೀಯ ಕಾಲೇಜುಗಳಲ್ಲಿನ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಮೇಲ್ದರ್ಜೆಗೇರಿಸುವಂತೆ ನ್ಯಾಯಾಲಯ  ನಂತರ ನಿರ್ದೇಶನ ನೀಡಿತು. ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಮೇಲ್ದರ್ಜೆಗೇರಿಸಲು ಸಮಾಲೋಚನಾ ಪ್ರಕ್ರಿಯೆ ನಡೆಸಿ ಸಂಬಂಧಪಟ್ಟ ಕಾಲೇಜು ಇಲ್ಲವೇ ಆಸ್ಪತ್ರೆಗಳ ಪ್ರಾಂಶುಪಾಲರನ್ನು ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಅದು ಸೂಚಿಸಿತು.