Calcutta High Court 
ಸುದ್ದಿಗಳು

ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ಆದೇಶ

Bar & Bench

ಕೋಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ 31 ವರ್ಷದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಆದ್ಯತೆಯ ಆಧಾರದ ಮೇಲೆ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ  ಮತ್ತು ನ್ಯಾಯಮೂರ್ತಿ  ಹಿರಣ್ಮಯ್ ಭಟ್ಟಾಚಾರ್ಯ ಅವರನ್ನೊಳಗೊಂಡ ಪೀಠ ಸಿಬಿಐಗೆ ಸೂಚಿಸಿದೆ. ಸಿಬ್ಬಂದಿ ಕೊರತೆಯಿದ್ದರೆ, ತನಿಖೆಗೆ ಸಹಾಯ ಮಾಡಲು ನೆರೆಯ ರಾಜ್ಯಗಳ ಕೆಲವು ಅಧಿಕಾರಿಗಳನ್ನು ಕೋರಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ಇದೊಂದು ವಿಚಿತ್ರ ಪ್ರಕರಣ. ಐದು ದಿನ ಕಳೆದರೂ ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿಯಾಗಿಲ್ಲವಾದ್ದರಿಂದ ಸೂಕ್ತ ಆದೇಶ ನೀಡಬೇಕಿದೆ ಎಂದ ಪೀಠ ಸಮಯ ಕಳೆದುಹೋದರೆ ಸಾಕ್ಷ್ಯ ನಾಶವಾಗುವಂತಹ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಹ ಎಲ್ಲಾ ಸಾಧ್ಯತೆಗಳಿವೆ ಎಂಬ ಸಂತ್ರಸ್ತೆಯ ಪೋಷಕರ ಮನವಿಯನ್ನು ಪುರಸ್ಕರಿಸಿ ಸಿಬಿಐಗೆ ಪ್ರಕರಣ ವರ್ಗಾಯಿಸಿತು.

ನಾಳೆ ಬೆಳಗ್ಗೆ 10 ಗಂಟೆಯೊಳಗೆ ಪ್ರಕರಣದ ಡೈರಿ ಹಾಗೂ ಇತರೆ ದಾಖಲೆಗಳನ್ನು ಸಿಬಿಐಗೆ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಈ ಉದ್ದೇಶಕ್ಕಾಗಿ ಸಿಬಿಐನ ಅಧಿಕಾರಿಯೊಬ್ಬರು ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಮೂರು ವಾರಗಳೊಳಗೆ ಸಿಬಿಐ ವರದಿ ಸಲ್ಲಿಸಬೇಕು ನಂತರ ಮತ್ತೆ ವಿಚಾರಣೆ ನಡೆಸುವುದಾಗಿ  ಅದು ಹೇಳಿದೆ.

ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ಅತ್ಯಾಚಾರ ಮತ್ತು ಕೊಲೆ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಕಾಲೇಜಿನ ಪ್ರಾಂಶುಪಾಲ ಡಾ. ಸಂದೀಪ್‌ ಘೋಷ್‌ ರಾಜೀನಾಮೆ ನೀಡಿದ್ದರು. ಸಂತ್ರಸ್ತೆಯನ್ನೇ ಅವರು ದೂಷಿಸಿದ್ದನ್ನು ವಿರೋಧಿಸಿ ವೈದ್ಯ ಸಂಘಟನೆಗಳು ಸೇರಿದಂತೆ ಅನೇಕ ಗುಂಪುಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೆ ಹುದ್ದೆಗೆ ರಾಜೀನಾಮೆ ನೀಡಿದ್ದ ಪ್ರಾಂಶುಪಾಲರಿಗೆ ಬೇರೊಂದು ಹುದ್ದೆ ನೀಡಿದ್ದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.

ಇತ್ತ ಕಲ್ಕತ್ತಾ ಹೈಕೋರ್ಟ್‌ ಕೂಡ ಪ್ರಾಂಶುಪಾಲರಿಗೆ ಅಷ್ಟು ತುರ್ತಾಗಿ ಬೇರೊಂದು ಹುದ್ದೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಹಾಗೆ ಹುದ್ದೆ ನೀಡುವ ಮೂಲಕ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಜರೆಯಿತು.

ಪ್ರಾಂಶುಪಾಲರು, ಕಾಲೇಜು ಆಡಳಿತ ಮಂಡಳಿ ದೂರು ದಾಖಲಿಸದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಲ್ಕತ್ತಾ ಹೈಕೋರ್ಟ್

ಸಿಬಿಐ ತನಿಖೆ ನಡೆಸುವಂತೆ ಕೋರಿರುವ ಪಿಐಎಲ್‌ಗಳ ಜೊತೆಗೆ ಇತ್ತ ಸಂತ್ರಸ್ತೆಯ ಪೋಷಕರು ನ್ಯಾಯಾಂಗ ತನಿಖೆ ಕೋರಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.  ಕಾಲೇಜು ಆಡಳಿತ ಮಂಡಳಿ ಅಪರಾಧ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.

ಈ ಹಂತದಲ್ಲಿ ನ್ಯಾಯಾಲಯವು ಸರ್ಕಾರ ಇದನ್ನೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದೇಕೆ? ಪ್ರಾಂಶುಪಾಲರು ಏಕೆ ದೂರು ನೀಡಲಿಲ್ಲ. ಇದೊಂದು ಅಚ್ಚರಿದಾಯಕ ಮತ್ತು ಅನುಮಾನಕ್ಕೆ ಅವಕಾಶ ನೀಡುವ ಗಂಭೀರ ಲೋಪ ಎಂದು ತರಾಟೆಗೆ ತೆಗೆದುಕೊಂಡಿತು.

ಇದೇ ವೇಳೆ ಪ್ರತಿಭಟನಾ ನಿರತ ವೈದ್ಯರು ಕರ್ತವ್ಯಕ್ಕೆ ಮರಳದಿದ್ದರೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡಜನ ತೊಂದರೆ ಅನುಭವಿಸುತ್ತಾರೆ ಎಂದ ನ್ಯಾಯಾಲಯ ಪ್ರತಿಭಟನೆ ಕೈಬಿಡುವಂತೆ ಕೇಳಿತು.