ಬೆಂಗಳೂರಿನ ಐಟಿ ಉದ್ಯೋಗಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ಮೂವತ್ತ ವರ್ಷ ಸೆರೆವಾಸ ಪೂರ್ಣಗೊಳಿಸುವವರೆಗೆ ಅಪರಾಧಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂಬ ವಿಶೇಷ ಮಾರ್ಪಾಡುಗೊಂಡ ಶಿಕ್ಷೆ ವಿಧಿಸಿದ ಪೀಠ.
Justices Abhay S Oka and Rajesh Bindal
Justices Abhay S Oka and Rajesh Bindal

ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ [ಶಿವಕುಮಾರ್‌ ಅಲಿಯಾಸ್‌ ಶಿವ ಯಾನೆ ಶಿವಮೂರ್ತಿ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

“ಅಪರಾಧಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದೊಂದೇ ಪ್ರಕರಣವೊಂದು ಅಪರೂಪದಲ್ಲೇ ಅಪರೂಪ ಎಂಬುದನ್ನು ನಿರ್ಧರಿಸುವ ಮಾನದಂಡವಾಗದು. ಇದು ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಆರೋಪಿಯ ಸ್ವಭಾವದಲ್ಲಿ ಸುಧಾರಣೆಯಾಗಿದೆ ಎಂಬ ಕಾರಣಕ್ಕೆ ಇಂತಹ ಕ್ರೂರ ಪ್ರಕರಣದಲ್ಲಿ ಅನುಚಿತ ಮೃದುತ್ವ ತೋರುವುದು ಕಾನೂನು ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಂತ್ರಸ್ತೆಯ ಹಕ್ಕುಗಳನ್ನು ನ್ಯಾಯಾಲಯ ಪರಿಗಣಿಸಬೇಕು” ಎಂದು  ನ್ಯಾಯಮೂರ್ತಿಗಳಾದ ಅಭಯ್‌ ಎಸ್‌ ಓಕಾ ಮತ್ತು ರಾಜೇಶ್‌ ಬಿಂದಾಲ್‌ ಅವರನ್ನೊಳಗೊಂಡ ಪೀಠ ನುಡಿಯಿತು.

ಅಲ್ಲದೆ ಶಿಕ್ಷೆಯನ್ನು ತಗ್ಗಿಸುವ ಮತ್ತು ಹೆಚ್ಚಿಸುವ ಸಂದರ್ಭಗಳ ಹೊರತಾಗಿ ನ್ಯಾಯಾಲಯಗಳ ಇತರೆ ಸಂದರ್ಭಗಳನ್ನು ಕೂಡ ಪರಿಗಣಿಸಬೇಕು. ಹೇಯ ಪ್ರಕರಣದಲ್ಲಿ ಮರಣದಂಡನೆ ವಿಧಿಸುವಂತೆ ಮಾಡುವ ಯತ್ನದಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಆರೋಪಿಯು ಕನಿಷ್ಠ 30 ವರ್ಷಗಳ ಜೀವಾವಧಿ ಸೆರೆವಾಸ ಪೂರ್ಣಗೊಳಿಸುವವರೆಗೆ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂಬ ವಿಶೇಷ ಮಾರ್ಪಾಡುಗೊಂಡ ಶಿಕ್ಷೆ ವಿಧಿಸಿತು.

ರಾತ್ರಿ ಪಾಳಿ ಮುಗಿಸಿ ಬೆಳಗಿನ ಜಾವ 2 ಗಂಟೆಗೆ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲ್ಮನವಿದಾರನ ವಾಹನ ಬಳಸಿದ್ದರು. ನಾಪತ್ತೆಯಾಗಿದ್ದ ಅವರ ಮೃತದೇಹವನ್ನು ಅಪರಾಧಿ ಮೇಲ್ಮನವಿದಾರನೇ ಪೊಲೀಸರಿಗೆ ತೋರಿಸಿದ್ದ. ವಿಚಾರಣಾ ನ್ಯಾಯಾಲಯದಲ್ಲಿ ಅತ್ಯಾಚಾರ ಮತ್ತು ಕೊಲೆಯ ಆರೋಪಗಳನ್ನು ಯಶಸ್ವಿಯಾಗಿ ಪ್ರಾಸಿಕ್ಯೂಷನ್‌ ಮಂಡಿಸಿತ್ತು. ಮೇಲ್ಮನವಿದಾರ ಅಪರಾಧಿ ಎಂದು ನಿರ್ಣಯಿಸಿದ್ದ ವಿಚಾರಣಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಸರ್ಕಾರ ಮತ್ತು ಮೇಲ್ಮನವಿದಾರರು ಹೈಕೋರ್ಟ್‌ನಲ್ಲಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು. ಎರಡನ್ನೂ ಹೈಕೋರ್ಟ್‌ ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತ್ತು.  ಶಿಕ್ಷೆಗೆ ಸೀಮಿತವಾಗಿ ಮಾತ್ರವೇ ಪ್ರಕರಣವನ್ನು ಪರಿಗಣಿಸಲು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿತು.

ಕೃತ್ಯ ನಡೆದ ಸಮಯದಲ್ಲಿ ಅಪರಾಧಿಗೆ ಕೇವಲ 22 ವರ್ಷ ವಯಸ್ಸಿನವನಾಗಿದ್ದ. ಈಗ ಅವನಿಗೆ ವಯಸ್ಸಾದ ಪೋಷಕರು ಹಾಗೂ ಚಿಕ್ಕ ವಯಸ್ಸಿನ ಪತ್ನಿ, ಮಗು ಇದೆ. ಆತ ಜೈಲಿನಲ್ಲೇ ಪದವಿ ಶಿಕ್ಷಣ ಪಡೆದಿದ್ದಾನೆ. ಜೈಲಿನಲ್ಲಿ ಅವನ ನಡವಳಿಕೆ ತೃಪ್ತಿಕರವಾಗಿದ, ಸಮಾಜಕ್ಕೆ ಆತ ಬೆದರಿಕೆಯೊಡ್ಡಿಲ್ಲ ಎಂದು ಮೇಲ್ಮನವಿದಾರರ ಪರ ವಕೀಲರು ವಾದ ಮಂಡಿಸಿದ್ದರು.

Also Read
ಛಾವಲಾ ಅತ್ಯಾಚಾರ ಪ್ರಕರಣ: ಮರಣದಂಡನೆಗೆ ಗುರಿಯಾದವರ ಖುಲಾಸೆ ಪ್ರಶಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ಇತ್ತ ಸರ್ಕಾರ ವಾದ ಮಂಡಿಸಿ “ಮರಣ ದಂಡನೆ ವಿಧಿಸದ ಪ್ರಕರಣಗಳಲ್ಲಿ ಕೂಡ ಪ್ರಕರಣದ ಗುರುತ್ವವನ್ನು ಪರಿಗಣಿಸಿ  ಶಿಕ್ಷೆ ಮಾರ್ಪಡಿಸಲು ಸಾಂವಿಧಾನಿಕ ನ್ಯಾಯಾಲಯಗಳಿಗೆ ಅಧಿಕಾರ ಇಲ್ಲ ಎಂದಲ್ಲ” ಎಂಬುದಾಗಿ ತಿಳಿಸಿತ್ತು.

ಈ ಹಂತದಲ್ಲಿ ಸುಪ್ರೀಂ ಕೋರ್ಟ್‌ “ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸದ ಪ್ರಕರಣಗಳಲ್ಲಿ ಕೂಡ ಸಾಂವಿಧಾನಿಕ ನ್ಯಾಯಾಲಯಗಳು ಜೀವಾವಧಿ ಶಿಕ್ಷೆಯನ್ನು ಕನಿಷ್ಠ 20 ಅಥವಾ 30 ವರ್ಷಗಳಂತೆ ಕಡ್ಡಾಯಗೊಳಿಸಿ ಮಾರ್ಪಡಿಸಬಹುದು" ಎಂದು ಅಭಿಪ್ರಾಯಪಟ್ಟಿತು.

 “ಮರಣದಂಡನೆ ವಿಧಿಸದ ಪ್ರಕರಣಗಳಲ್ಲಿಯೂ ಸಾಂವಿಧಾನಿಕ ನ್ಯಾಯಾಲಯಗಳು ಶಿಕ್ಷೆ ಮಾರ್ಪಡಿಸುವ ಅಧಿಕಾರವನ್ನು ನಿರ್ಬಂಧಿಸಲಾಗದು” ಎಂದು ಹಿಂದಿನ ತೀರ್ಪುಗಳನ್ನು ಅವಲಂಬಿಸಿ ನ್ಯಾಯಾಲಯ ಹೇಳಿತು.

ಬೆಂಗಳೂರನ್ನು ಭಾರತದ ಸಿಲಿಕಾನ್ ಕಣಿವೆ ಎಂದು ಕರೆಯಲಾಗುತ್ತದೆ. ಈ ಕಂಪನಿಗಳಲ್ಲಿ ಕೆಲವು ವಿದೇಶಗಳಲ್ಲಿ ಗ್ರಾಹಕರನ್ನು ಹೊಂದಿದ್ದು, ಇಂತಹ ಕಂಪೆನಿಗಳ ಬಹುತೇಕ ಸಿಬ್ಬಂದಿ ರಾತ್ರಿ ವೇಳೆಯೂ ಕೆಲಸ ಮಾಡುತ್ತಾರೆ. ಪ್ರಸ್ತುತ ಪ್ರಕರಣದಲ್ಲಿ ನಡೆದಿರುವ ಘಟನಾವಳಿಗಳು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟುಮಾಡುವಂತಹವಾಗಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಐಟಿ ಮಹಿಳಾ ಉದ್ಯೋಗಿಗಳ ಸುರಕ್ಷತೆಯ ಕುರಿತಾದ ವಿಚಾರ ಇದಾಗಿದೆ ಎಂದು ತಿಳಿಸಿದ ಪೀಠ ಮನವಿಯನ್ನು ಭಾಗಶಃ ಪುರಸ್ಕರಿಸಿತು.  

ಅರ್ಜಿದಾರರ ಪರ ವಕೀಲರಾದ ಶೇಖರ್ ಜಿ ದೇವಸಾ, ಕೆ ಪರಮೇಶ್ವರ್, ಮನೀಶ್ ತಿವಾರಿ, ತಶ್ಮಿತಾ ಮುತ್ತಣ್ಣ, ಪ್ರಶಾಂತ್ ದೀಕ್ಷಿತ್, ಅಜಯ್ ಮೆಲ್ರಿಕ್ ನೊರೊನ್ಹಾ, ವಿಶ್ವನಾಥ್ ಚತುರ್ವೇದಿ, ಶಶಿ ಭೂಷಣ್ ನಗರ್‌ ಮತ್ತು ಸುನೀಲ್ ಅಂಬಾವೆಲಿಲ್ ಅವರು ಅರ್ಜಿದಾರರ ಪರ ವಾದ ಮಂಡಿಸಿದರು.

ಕರ್ನಾಟಕ ಸರ್ಕಾರವನ್ನು ವಕೀಲರಾದ ಶುಭ್ರಾಂಶು ಪಾಧಿ, ವಿಶಾಲ್ ಬನ್ಶಾಲ್ ಮತ್ತು ರಾಜೇಶ್ವರಿ ಶಂಕರ್ ಮತ್ತು ನಿರೂಪ್ ಸುಕಿರಿತಿ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com