Supreme Court and Doctors  
ಸುದ್ದಿಗಳು

ಆರ್‌ ಜಿ ಕರ್ ಕಾಲೇಜು ಪ್ರಕರಣ: ವೈದ್ಯಕೀಯ ವೃತ್ತಿಪರರ ಸುರಕ್ಷತೆಗಾಗಿ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ

ಲಿಂಗ ಆಧಾರಿತ ಹಿಂಸಾಚಾರ ತಡೆಗಟ್ಟಲು ಮತ್ತು ಇಂಟರ್ನ್‌ಗಳು, ಸ್ಥಾನಿಕ ಹಾಗೂ ಸ್ಥಾನಿಕರಲ್ಲದ ವೈದ್ಯರಿಗೆ ಸುರಕ್ಷತೆ ಒದಗಿಸುವುದಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ನ್ಯಾಯಾಲಯ ಕಾರ್ಯಪಡೆಗೆ ಆದೇಶಿಸಿದೆ.

Bar & Bench

ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಘನತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು , ಲಿಂಗ ಆಧಾರಿತ ಹಿಂಸಾಚಾರ ತಡೆಗಟ್ಟಲು ಹಾಗೂ ಕೆಲಸದ ಸ್ಥಳದಲ್ಲಿ ವೈದ್ಯರು ಮತ್ತಿತರ ವೈದ್ಯಕೀಯ ವೃತ್ತಿಪರರು ಎದುರಿಸುತ್ತಿರುವ ಯೋಗಕ್ಷೇಮ ಮತ್ತು ಸುರಕ್ಷತೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ರಾಷ್ಟ್ರೀಯ ಕಾರ್ಯಪಡೆಯೊಂದನ್ನು (ಎನ್‌ಟಿಎಫ್‌)  ಸ್ಥಾಪಿಸಿದೆ [ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸ್ವಯಂ ಪ್ರೇರಿತ ವಿಚಾರಣೆ].

ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ 31 ವರ್ಷದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆಯನ್ನು ಮಂಗಳವಾರ ಆರಂಭಿಸಿದ  ಸಿಜೆಐ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

ಕಾರ್ಯಪಡೆಯಲ್ಲಿ ಈ ಕೆಳಗಿನ ಸದಸ್ಯರು ಇರಲಿದ್ದಾರೆ:

- ಸರ್ಜನ್ ವೈಸ್ ಅಡ್ಮಿರಲ್ ಆರ್ ಸರೀನ್;

- ಡಾ ಡಿ ನಾಗೇಶ್ವರ ರೆಡ್ಡಿ;

- ಡಾ ಎಂ ಶ್ರೀನಿವಾಸ್;

- ಡಾ ಪ್ರತಿಮಾ ಮೂರ್ತಿ;

- ಡಾ ಗೋವರ್ಧನ್ ದತ್ ಪುರಿ;

- ಡಾ ಸೌಮಿತ್ರಾ ರಾವತ್;

- ಪ್ರೊ ಅನಿತಾ ಸಕ್ಸೇನಾ, ಹೃದಯ ವಿಜ್ಞಾನ ವಿಭಾಗದ ಮುಖ್ಯಸ್ಥರು, ಏಮ್ಸ್ ದೆಹಲಿ;

- ಪ್ರೊ ಪಲ್ಲವಿ ಸಪ್ರೆ, ಗ್ರಾಂಟ್ ಮೆಡಿಕಲ್ ಕಾಲೇಜಿನ ಡೀನ್, ಮುಂಬೈ;

- ಡಾ ಪದ್ಮಾ ಶ್ರೀವಾಸ್ತವ, ನರವಿಜ್ಞಾನ ವಿಭಾಗ, ಏಮ್ಸ್.

ರಾಷ್ಟ್ರೀಯ ಕಾರ್ಯಪಡೆಯ ಪದನಿಮಿತ್ತ ಸದಸ್ಯರಾಗಿ ಭಾರತ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿ, ಭಾರತ ಸರ್ಕಾರದ ಗೃಹ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷರು ಕಾರ್ಯ ನಿರ್ವಹಿಸಲಿದ್ದಾರೆ.

ಕಾರ್ಯಪಡೆಯ ವ್ಯಾಪ್ತಿ

ಕಾರ್ಯಪಡೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆ, ಯೋಗಕ್ಷೇಮದಂತಹ ವಿಚಾರಗಳನ್ನು ಪರಿಶೀಲಿಸಿ ಅಗತ್ಯ ಶಿಫಾರಸು ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಲಿಂಗ ಆಧಾರಿತ ಹಿಂಸಾಚಾರ ತಡೆಗಟ್ಟಲು ಮತ್ತು ಇಂಟರ್ನ್‌ಗಳು,  ಸ್ಥಾನಿಕ ಹಾಗೂ ಸ್ಥಾನಿಕರಲ್ಲದ ವೈದ್ಯರಿಗೆ ಸುರಕ್ಷತೆ ಮತ್ತು ಘನತೆಯಿಂದ ಕೆಲಸ ನಿರ್ವಹಿಸಲು ಅಗತ್ಯವಾದ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ನ್ಯಾಯಾಲಯ ಕಾರ್ಯಪಡೆಗೆ ಆದೇಶಿಸಿದೆ.

 ಕಾರ್ಯಪಡೆಯು ಈ ಕೆಳಗಿನ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ:

1. ತುರ್ತು ಕೋಣೆಯ ಪ್ರದೇಶಗಳಿಗೆ ಹೆಚ್ಚುವರಿ ಭದ್ರತೆ ಬೇಕಾಗಬಹುದು;

2. ಶಸ್ತ್ರಾಸ್ತ್ರಗೊಂದಿಗೆ ನುಗ್ಗುವುದನ್ನು ತಡೆಯಲು ಸರಕು ತಪಾಸಣೆ ಘಟಕಗಳ ಅಗತ್ಯತೆ;

3. ರೋಗಿಗಳಲ್ಲದವರಿಗೆ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನಿರ್ಬಂಧಿಸುವುದು;

4. ಜನರನ್ನು ನಿರ್ವಹಿಸಲು ಭದ್ರತಾ ವ್ಯವಸ್ಥೆ;

5. ವೈದ್ಯರಿಗೆ ವಿಶ್ರಾಂತಿ ಕೊಠಡಿಗಳು ಮತ್ತು ವೈದ್ಯರು, ದಾದಿಯರ ವಿಶ್ರಾಂತಿಗಾಗಿ ಲಿಂಗ ತಟಸ್ಥ ಸ್ಥಳಗಳ ನಿರ್ಮಾಣ;

6. ಅಂತಹ ಪ್ರದೇಶಗಳಲ್ಲಿ ಬಯೋಮೆಟ್ರಿಕ್ಸ್ ಮತ್ತು ಮುಖಚರ್ಯೆ ಗುರುತಿಸುವಿಕೆ ಸಾಧನಗಳ ಅಳವಡಿಕೆ;

7. ಎಲ್ಲಾ ಪ್ರದೇಶಗಳಲ್ಲಿ ಸರಿಯಾದ ಬೆಳಕು, ಸಿಸಿಟಿವಿ ಅಳವಡಿಕೆ;

8. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಸಾರಿಗೆ ಸೌಲಭ್ಯ;

9. ದುಃಖ ಮತ್ತು ಬಿಕ್ಕಟ್ಟನ್ನು ನಿಭಾಯಿಸಲು ವೈದ್ಯ ವೃತ್ತಿಪರರಿಗೆ ಕಾರ್ಯಾಗಾರ ನಡೆಸುವುದು;

10. ಸಾಂಸ್ಥಿಕ ಸುರಕ್ಷತಾ ಕ್ರಮಗಳ ತ್ರೈಮಾಸಿಕ ಪರಿಶೀಲನೆ;

11. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಪಡೆ ರಚನೆ;

12. POSH ಕಾಯಿದೆಯು ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯಿಸುವುದರಿಂದ ಐಸಿಸಿಗಳ ಸ್ಥಾಪನೆ;

13. ವೈದ್ಯಕೀಯ ವೃತ್ತಿಪರರಿಗಾಗಿ ಸಹಾಯವಾಣಿ;

ಈ ಸಂಬಂಧ ಮೂರು ವಾರಗಳಲ್ಲಿ ಮಧ್ಯಂತರ ವರದಿ ಮತ್ತು ಎರಡು ತಿಂಗಳೊಳಗೆ ಅಂತಿಮ ವರದಿಯನ್ನು ನೀಡುವಂತೆ ಎನ್‌ಟಿಎಫ್‌ಗೆ ಸೂಚಿಸಲಾಗಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದಿಂದ ನಡೆಸಲಾಗುವ ಎಲ್ಲಾ ಆಸ್ಪತ್ರೆಗಳ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರ ಒಂದು ತಿಂಗಳೊಳಗೆ ತನಗೆ ಸಲ್ಲಿಸಬೇಕು ಎಂದು ಅದು ಸೂಚಿಸಿದೆ.

ಅತ್ಯಾಚಾರ ಮತ್ತು ಹತ್ಯೆ ಘಟನೆ ಬಳಿಕ ಸ್ಥಳವನ್ನು ಧ್ವಂಸಗೊಳಿಸಿದವರನ್ನು ಪತ್ತೆ ಹಚ್ಚಲು ವಿಫಲವಾಗಿರುವುದಕ್ಕೆ ಪ. ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಬಿಹಾರ ತೆಲಂಗಾಣ ಸೇರಿದಂತೆ ದೇಶದೆಲ್ಲೆಡೆ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಮೇಲೆ ದಾಳಿಗಳು ನಡೆಯುತ್ತಿವೆ. ವೈದ್ಯಕೀಯ ವೃತ್ತಿಪರರನ್ನು ರಕ್ಷಿಸಲು ರಾಜ್ಯಗಳಲ್ಲಿ ಕಾನೂನುಗಳು ಜಾರಿಯಲ್ಲಿದ್ದರೂ, ಅವು ವ್ಯವಸ್ಥಿತವಾಗಿ ಸಮಸ್ಯೆ  ಪರಿಹರಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ ವೈದ್ಯರನ್ನು ರಕ್ಷಿಸುವುದು ರಾಷ್ಟ್ರೀಯ ಹಿತಾಸಕ್ತಿ ವಿಚಾರ ಎಂದಿತು.

ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆಗಸ್ಟ್ 22 ರೊಳಗೆ ಸ್ಥಿತಿಗತಿ ವರದಿ  ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಘಟನೆಯ ನಂತರ ಆಸ್ಪತ್ರೆಯನ್ನು ಧ್ವಂಸಗೊಳಿಸಿರುವುದರ ತನಿಖೆಯ ಪ್ರಗತಿ ಕುರಿತು ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಪ. ಬಂಗಾಳ ಸರ್ಕಾರಕ್ಕೆ ತಾಕೀತು ಮಾಡಿತು.

ಇದೇ ವೇಳೆ ಪ್ರತಿಭಟನಾ ನಿರತ ವೈದ್ಯರು ಕೆಲಸ ಪುನರಾರಂಭಿಸುವಂತೆ ನ್ಯಾಯಾಲಯವು ಕೇಳಿಕೊಂಡಿದೆ. ಆಗಸ್ಟ್ 22ರಂದು (ಗುರುವಾರ) ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.