Prof Anand Pawar, RGNUL 
ಸುದ್ದಿಗಳು

ಲೈಂಗಿಕ ಕಿರುಕುಳ, ದುರ್ನಡತೆ: ಆರ್‌ಜಿಎನ್‌ಯುಎಲ್‌ ರಿಜಿಸ್ಟ್ರಾರ್ ಆನಂದ್ ಪವಾರ್ ಅಮಾನತು

ಪವಾರ್ ಎರಡನೇ ಮದುವೆಯಾಗಿದ್ದು ಮೊದಲ ಹೆಂಡತಿಯೊಂದಿಗೆ ಕ್ರೌರ್ಯದಿಂದ ವರ್ತಿಸಿರುವುದು, ಡಾಕ್ಟರೇಟ್ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಮುಂತಾದ ಆರೋಪಗಳು ಆರ್‌ಜಿಎನ್‌ಯುಎಲ್‌ ಉಪಕುಲಪತಿಗಳು ಹೊರಡಿಸಿದ ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Bar & Bench

ಲೈಂಗಿಕ ಕಿರುಕುಳ, ಶೈಕ್ಷಣಿಕ , ಆಡಳಿತಾತ್ಮಕ ದುರ್ನಡತೆ ಹಾಗೂ ಹಣಕಾಸು ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಪಟಿಯಾಲದ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಆರ್‌ಜಿಎನ್‌ಯುಎಲ್‌)  ರಿಜಿಸ್ಟ್ರಾರ್ ಡಾ. ಆನಂದ್ ಪವಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಆರ್‌ಜಿಎನ್‌ಯುಎಲ್‌ನ ಉಪಕುಲಪತಿ ಪ್ರೊ.ಜೈ ಶಂಕರ್ ಸಿಂಗ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಪವಾರ್‌ ಎರಡನೇ ಮದುವೆಯಾಗಿದ್ದು ಮೊದಲ ಹೆಂಡತಿಯೊಂದಿಗೆ ಕ್ರೌರ್ಯದಿಂದ ವರ್ತಿಸಿರುವುದು, ಡಾಕ್ಟರೇಟ್‌ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಹಾಗೂ ರಿಜಿಸ್ಟ್ರಾರ್ ಹುದ್ದೆಯ ದುರುಪಯೋಗ ಪಡಿಸಿಕೊಂಡಿರುವುದು ಮುಂತಾದ ಆರೋಪಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪವಾರ್ ಅವರು ಕ್ರೌರ್ಯ ಎಸಗಿದ್ದಾರೆ ಎಂದು ಆರೋಪಿಸಿ ಅವರ ಮೊದಲ ಪತ್ನಿ ಐಪಿಸಿ ಸೆಕ್ಷನ್‌ 498 ಎ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. 2023 ರಲ್ಲಿ ಮಧ್ಯಪ್ರದೇಶದ ಹೈಕೋರ್ಟ್ ನೀಡಿದ ಆದೇಶದಂತೆ ಸರ್ಕಾರಿ ಉದ್ಯೋಗದಲ್ಲಿರುವವರು ಎರಡನೇ ವಿವಾಹವಾಗುವಂತಿಲ್ಲವಾದರೂ ರಿಜಿಸ್ಟ್ರಾರ್‌ ಅವರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರನ್ನು ಎರಡನೇ ವಿವಾಹವಾಗಿದ್ದಾರೆ.

ಪವಾರ್ ಅವರು 2020-21 ಮತ್ತು 2023-24ರಲ್ಲಿ ರಿಜಿಸ್ಟ್ರಾರ್‌ ಮತ್ತು ಉಪಕುಲಪತಿ ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ.

ಅಲ್ಲದೆ ರಿಜಿಸ್ಟ್ರಾರ್ ಆಗಿರುವಾಗ, ಪವಾರ್ ಅವರು ಆರ್‌ಜಿಎನ್‌ಯುಎಲ್‌ ಪಿಎಚ್‌ಡಿ ನಿಯಮಾವಳಿಗಳನ್ನು ಉಲ್ಲಂಘಿಸಿ ಪಿಎಚ್‌ಡಿ ಅಭ್ಯರ್ಥಿಗಳ ಮೇಲ್ವಿಚಾರಣೆಯನ್ನು ಕೈಗೊಂಡರು. ಆದರೆ ನಿಯಮಾವಳಿ ಪ್ರಕಾರ ಸಾಮಾನ್ಯ ಪ್ರಾಧ್ಯಾಪಕ ಅಥವಾ ಪೂರ್ಣ ಸಮಯದ ನಿಯಮಿತ ಶಿಕ್ಷಕರಿಗೆ ಮಾತ್ರ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ಅವಕಾಶ ಇರುತ್ತದೆ.

ಅಲ್ಲದೆ ಪವಾರ್ ಅವರು ಸಂಶೋಧನಾ ಅಭ್ಯರ್ಥಿಗಳನ್ನು ಅವರ ಹಿಂದಿನ ಮೇಲ್ವಿಚಾರಕರ ಒಪ್ಪಿಗೆಯಿಲ್ಲದೆ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ತಮ್ಮ ಎರಡನೇ ಪತ್ನಿಯ ಮೇಲ್ವಿಚಾರಣೆಗೆ ವರ್ಗಾಯಿಸಿದ್ದಾರೆ.

ಪವಾರ್ ಅವರು ಸಾಕ್ಷ್ಯಾಧಾರಗಳನ್ನು ತಿರುಚುವುದನ್ನು ತಡೆಯಲು ತಕ್ಷಣದಿಂದಲೇ ಅವರ ಅಮಾನತು ಜಾರಿಯಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪವಾರ್ ಅವರು ಯಾವುದೇ ಉದ್ಯೋಗ, ವ್ಯಾಪಾರ, ವೃತ್ತಿಯಲ್ಲಿ ತೊಡಗಿಸಿಕೊಳ್ಳದಂತೆ ಅಥವಾ ಪೂರ್ವ ಲಿಖಿತ ಅನುಮತಿಯಿಲ್ಲದೆ ಕಾರ್ಯ ನಿರ್ವಹಣಾ ಸ್ಥಳ ತೊರೆಯದಂತೆ ನಿರ್ಬಂಧಿಸಲಾಗಿದೆ.