Rhea Chakraborty, Bombay HC
Rhea Chakraborty, Bombay HC 
ಸುದ್ದಿಗಳು

ಪ್ರಿಯಾಂಕಾ ಸೂಚನೆ ಮೇರೆಗೆ ಔಷಧ ಸೇವಿಸಿದ 5 ದಿನದ ಬಳಿಕ ಸುಶಾಂತ್‌ ನಿಧನ: ಬಾಂಬೆ ಹೈಕೋರ್ಟ್‌ಗೆ ರಿಯಾ ಪ್ರತಿಕ್ರಿಯೆ

Ramesh DK

ಡಾ. ತರುಣ್‌ ಕುಮಾರ್‌ ಶಿಫಾರಸು ಮಾಡಿದ ಔಷಧಗಳನ್ನು ತಮ್ಮ ತಂಗಿ ಪ್ರಿಯಾಂಕಾ ಸಿಂಗ್‌ ಅವರ ಸೂಚನೆಯಂತೆ ಸೇವಿಸಿದ ಕೆಲ ದಿನಗಳ ನಂತರ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವನ್ನಪ್ಪಿದರು ಎನ್ನುವ ಮಾಹಿತಿಯನ್ನು ನಟಿ ರಿಯಾ ಚಕ್ರವರ್ತಿ ಬಾಂಬೆ ಹೈಕೋರ್ಟಿಗೆ ತಿಳಿಸಿದ್ದಾರೆ. ಅಂತೆಯೇ ಸುಶಾಂತ್‌ ಅವರ ಅಸಹಜ ಸಾವಿಗೆ ಸಂಬಂಧಿಸಿದಂತೆ ಪ್ರಿಯಾಂಕಾ, ಮೀತು ಸಿಂಗ್ (ಇಬ್ಬರೂ ರಜಪೂತ ಸಹೋದರಿಯರು) ಮತ್ತು ಡಾ. ಕುಮಾರ್‌ ಅವರ ವಿರುದ್ಧ ತಾವು ದಾಖಲಿಸಿರುವ ಎಫ್‌ಐಆರ್‌ ಅನ್ನು ರದ್ದುಪಡಿಸದಂತೆ ರಿಯಾ ಮನವಿ ಮಾಡಿದ್ದಾರೆ.

ಎನ್‌ಡಿಪಿಎಸ್‌ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ಕೆಲವು ಮಾದಕವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಕೆಲವು ಸುಳ್ಳು ಔಷಧಗಳನ್ನು ಸುಶಾಂತ್‌ ಪಡೆಯುವಂತೆ ಸೋದರಿಯರು ಡಾ. ಕುಮಾರ್‌ ಅವರೊಡನೆ ಸೇರಿ ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರಜಪೂತ್‌ ಅವರೊಂದಿಗಿನ ಸಂಬಂಧ ಮತ್ತು ಅವರ ಕುಟುಂಬದೊಂದಿಗೆ ಇದ್ದ ಒತ್ತಡಮಯ ನಂಟನ್ನು ಕೂಡ ಅವರು ವಿವರಿಸಿದ್ದು ಸುಶಾಂತ್‌ ಖಿನ್ನತೆಯಿಂದ (ಬೈಪೋಲಾರ್ ಡಿಸಾರ್ಡರ್)‌ ಬಳಲುತ್ತಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ತಮ್ಮ ಪ್ರತಿಕ್ರಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೂನ್ 8 ರಂದು, ಪ್ರಿಯಾಂಕಾ ಸಿಂಗ್ ಅವರು ಸುಶಾಂತ್‌ಗೆ ಔಷಧಗಳ ಪಟ್ಟಿಯೊಂದನ್ನು ನೀಡಿದರು. ಆದರೆ ಅದು ವೈದ್ಯರು ಎಂದಿನಂತೆ ಶಿಫಾರಸು ಮಾಡಿದ್ದ ಔಷಧದ ವಿವರವಾಗಿರಲಿಲ್ಲ. ವೈದ್ಯಕೀಯ ಅರ್ಹತೆಗಳಿಲ್ಲದ ಸಹೋದರಿ ಶಿಫಾರಸು ಮಾಡಿದ ಔಷಧಗಳನ್ನು ಸೇವಿಸದಂತೆ ಸುಶಾಂತ್‌ಗೆ ತಾವು ಹೇಳಿದ್ದಾಗಿ ರಿಯಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಅದಾಗಿ ಕೆಲ ದಿನಗಳ ನಂತರ ಅಂದರೆ ಜೂನ್‌ 14ರಂದು ರಜಪೂತ್‌ ನಿಗೂಢವಾಗಿ ಮರಣವನ್ನಪ್ಪಿದ್ದರು. ಕಾನೂನಿನ ಪ್ರಕಾರ ಸಮಾಲೋಚನೆ ನಡೆಸದೆ ಡಾ. ತರುಣ್‌ ಕುಮಾರ್‌ ಅವರು ಸುಶಾಂತ್‌ ಸಾವಿಗೂ ಮುನ್ನ ಕೆಲವು ಔಷಧಗಳನ್ನು ಸೇವಿಸುವಂತೆ ಶಿಫಾರಸು ಮಾಡಿದ್ದರು ಎಂದು ಅವರು ಹೇಳಿದ್ದಾರೆ.

ಸುಶಾಂತ್‌ಗೆ ಹೇಗೆ ಬೋಗಸ್‌ ಮತ್ತು ಅಕ್ರಮ ಔಷಧಗಳನ್ನು ನೀಡಲಾಯಿತು ಎಂಬ ಹಿನ್ನೆಲೆಯಲ್ಲಿ ಪ್ರಿಯಾಂಕಾ, ಮೀತು ಹಾಗೂ ಡಾ. ಕುಮಾರ್‌ ಅವರ ನಡೆಯನ್ನು ತನಿಖೆಗೊಳಪಡಿಸಬೇಕು ಎಂದು ರಿಯಾ ಕೋರಿದ್ದಾರೆ.

"ಪ್ರಿಯಾಂಕಾ ಸಿಂಗ್ ಮತ್ತು ಡಾ. ಕುಮಾರ್ ಅವರ ಅಣತಿಯ ಮೇರೆಗೆ ಶಿಫಾರಸು ಮಾಡಲಾದ ಕಾನೂನುಬಾಹಿರ ಅಮಲು ಪದಾರ್ಥಗಳನ್ನು ಸೇವಿಸಿದ 5 ದಿನಗಳ ನಂತರ ಸುಶಾಂತ್ ನಿಧನರಾದರು."
ರಿಯಾ ಚಕ್ರವರ್ತಿ

"ಡಾ. ಕುಮಾರ್, ಪ್ರಿಯಾಂಕಾ ಮತ್ತು ಮೀತು ಸಿಂಗ್‌ ವಿರುದ್ಧ ಮೇಲ್ನೋಟಕ್ಕೆ ಗಂಭೀರ ಪ್ರಕರಣ ಕಂಡುಬಂದಿದೆ. ಅವರ ವಿರುದ್ಧದ ತನಿಖೆ ಆರಂಭಿಕ ಹಂತದಲ್ಲಿದ್ದು ಎಫ್‌ಐಆರ್‌ನಲ್ಲಿ ಮಾಡಲಾಗಿರುವ ಗಂಭೀರ ಸ್ವರೂಪದ ಆರೋಪಗಳ ಕುರಿತು ತನಿಖೆ ನಡೆಸಲು ಸಿಬಿಐಗೆ ಸೂಕ್ತ ಅವಕಾಶ ನೀಡಬೇಕಿದೆ” ಎಂದು ಅವರು ಹೇಳಿದ್ದಾರೆ. ತಮ್ಮೆಲ್ಲಾ ವಾದಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ ಎಫ್‌ಐಆರ್‌ ರದ್ದುಗೊಳಿಸಬಾರದು ಮತ್ತು ಎಫ್‌ಐಆರ್‌ ರದ್ದುಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ರಿಯಾ ಕೋರಿದ್ದಾರೆ.