ಮಾದಕವಸ್ತು ಪ್ರಕರಣ: ನಟಿ ರಿಯಾ ಮತ್ತಿಬ್ಬರಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್- ಸಹೋದರ ಇನ್ನೂ ಜೈಲಿನಲ್ಲಿ

ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ದೀಪೇಶ್ ಸಾವಂತ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರಿಗೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ವಿ ಕೋತ್ವಾಲ್ ಅವರು ಜಾಮೀನು ನೀಡಿದ್ದಾರೆ.
ಬಾಂಬೆ ಹೈಕೋರ್ಟ್, ರಿಯಾ ಚಕ್ರವರ್ತಿ
ಬಾಂಬೆ ಹೈಕೋರ್ಟ್, ರಿಯಾ ಚಕ್ರವರ್ತಿ
Published on

ಮಾದಕವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ ಎನ್‌ಸಿಬಿ ಬಂಧಿಸಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ, ದೀಪೇಶ್ ಸಾವಂತ್ ಹಾಗೂ ಸ್ಯಾಮ್ಯುಯೆಲ್ ಮಿರಾಂಡಾ ಅವರಿಗೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ವಿ ಕೋತ್ವಾಲ್ ಜಾಮೀನು ನೀಡಿದ್ದಾರೆ.

ಆದರೆ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಅಬ್ದುಲ್ ಪರಿಹಾರ್ ಅವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

ರೂ 1 ಲಕ್ಷ ಮೊತ್ತದ ಬಾಂಡ್ ಮತ್ತಿತರ ಷರತ್ತುಗಳನ್ನು ವಿಧಿಸಿ ರಿಯಾ ಅವರಿಗೆ ಜಾಮೀನು ನೀಡಲಾಗಿದೆ

Also Read
ರಿಯಾ ಚಕ್ರವರ್ತಿ ಪ್ರಕರಣ: ತೀರ್ಪು ವ್ಯಾಪಕ ಪರಿಣಾಮ ಬೀರಲಿದೆ ಎನ್ನುತ್ತ ಆದೇಶ ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಹತ್ತ ದಿನಗಳ ಕಾಲ ರಿಯಾ ಪ್ರತಿದಿನ ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಅನಮತಿ ಇಲ್ಲದೆ ದೇಶ ತೊರೆಯುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ದೀಪೇಶ್ ಸಾವಂತ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರಿಗೆ ರೂ. 50,000 ಮೊತ್ತದ ಬಾಂಡ್ ಆಧರಿಸಿ ಜಾಮೀನು ನೀಡಲಾಗಿದ್ದು ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ.

Also Read
ಸುಶಾಂತ್ ಸಿಂಗ್‌ ರಜಪೂತ್‌ ಪ್ರಕರಣ: ರಿಯಾ ಚಕ್ರವರ್ತಿ ಅರ್ಜಿ ವಿಚಾರಣೆ ವೇಳೆ ಕೇಳಿ ಬಂದ ಪ್ರಮುಖ ವಾದಗಳು

ಎನ್‌ಸಿಬಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಆದೇಶದ ಕಾರ್ಯಾಚರಣೆಗೆ ತಡೆ ನೀಡಬೇಕೆಂದು ವಿನಂತಿಸಿದರು. ಆದರೆ ಇದನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ರಿಯಾ ಪರ ಹಾಜರಾದ ವಕೀಲ ಸತೀಶ್ ಮಾನೆಶಿಂಧೆ ಜಾಮೀನು ಬಾಂಡ್ ನೀಡಲು 1 ತಿಂಗಳು ಕಾಲಾವಕಾಶ ಕೋರಿದ್ದು ಅದಕ್ಕೆ ಕೋರ್ಟ್ ಸಮ್ಮತಿ ಸೂಚಿಸಿದೆ.

ಮುಂಬೈನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ, ಅಬ್ದುಲ್ ಬಸಿತ್ ಪರಿಹಾರ್, ಸ್ಯಾಮ್ಯುಯೆಲ್ ಮಿರಾಂಡಾ ಹಾಗೂ ದೀಪೇಶ್ ಸಾವಂತ್ ಅವರು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ರಿಯಾ ಚಕ್ರವರ್ತಿ ಮತ್ತಿತರರು ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಬಳಕೆಗಾಗಿ ಮಾದಕ ವಸ್ತುಗಳನ್ನು ಖರೀದಿಸಲು ಅನುಕೂಲ ಕಲ್ಪಿಸಿದ್ದರು ಎಂದು ಆರೋಪಿಸಲಾಗಿತ್ತು.

Also Read
ಸುಶಾಂತ್‌ ಸಹೋದರಿ, ವೈದ್ಯರ ವಿರುದ್ಧ ರಿಯಾ ದೂರು; ಮಾನದಂಡಗಳಿಗೆ ಹೊರತಾಗಿ ಅಕ್ರಮವಾಗಿ ಔಷಧ ನೀಡಿದ ಆರೋಪ

ವಕೀಲರಾದ ಸತೀಶ್ ಮಾನೆಶಿಂಧೆ, ತಾರಿಕ್ ಸಯೀದ್, ಸುಬೋಧ್ ದೇಸಾಯಿ ಹಾಗೂ ರಾಜೇಂದ್ರ ರಾಥೋಡ್ ಅವರು ಆರೋಪಿಗಳ ಪರವಾಗಿ ವಾದಿಸಿದರು, ಈ ಕೆಳಗಿನ ಕಾರಣಗಳಿಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಅವರು ಕೋರ್ಟಿಗೆ ಮನವಿ ಮಾಡಿದರು:

  1. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಎಲ್ಲಾ ತನಿಖೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ \ ಸುಪ್ರೀಂ ಕೋರ್ಟ್ ಆಗಸ್ಟ್ ತಿಂಗಳಲ್ಲಿ ಆದೇಶ ನೀಡಿರುವ ಕಾರಣ ಮಾದಕವಸ್ತು ನಿಯಂತ್ರಣ ಸಂಸ್ಥೆಗೆ (ಎನ್‌ಸಿಬಿ) ಈ ವಿಷಯದಲ್ಲಿ ತನಿಖೆ ನಡೆಸಲು ಯಾವುದೇ ನ್ಯಾಯವ್ಯಾಪ್ತಿ ಇರುವುದಿಲ್ಲ.

  2. ಎನ್‌ಸಿಬಿಗೆ ನ್ಯಾಯವ್ಯಾಪ್ತಿ ಇದ್ದರೂ ಕೂಡ, ನಟಿ ಮತ್ತಿತರರ ವಿರುದ್ಧದ ಆರೋಪಗಳು ಜಾಮೀನಿಗೆ ಅರ್ಹವಾದವುಗಳಾಗಿವೆ. ಅವರು ಬಳಸಿದ ಮಾದಕವಸ್ತುಗಳು ಸಣ್ಣ ಪ್ರಮಾಣದ್ದಾಗಿದ್ದು ವಾಣಿಜ್ಯ ಉದ್ದೇಶದಿಂದ ಅವುಗಳನ್ನು ಇರಿಸಿಕೊಂಡಿರಲಿಲ್ಲ.

  3. ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಎ ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ಪೂರಕ ಸಾಕ್ಷ್ಯಗಳು ಇಲ್ಲ.

Kannada Bar & Bench
kannada.barandbench.com