ರಾಜಸ್ಥಾನದಲ್ಲಿ 2007ರಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಹಾಲಿವುಡ್ ನಟ ರಿಚರ್ಡ್ ಗೇರ್ ತಮ್ಮನ್ನು ಸಾರ್ವಜನಿಕವಾಗಿ ಚುಂಬಿಸಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸಾರ್ವಜನಿಕವಾಗಿ ಅಶ್ಲೀಲ ವರ್ತನೆ ತೋರಿದ ಆರೋಪದ ಮೇಲೆ ದಾಖಲಿಸಲಾಗಿದ್ದ ದೂರನ್ನು ರದ್ದುಗೊಳಿಸುವಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಶನಿವಾರ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.
ಜೈಪುರದಲ್ಲಿ ದೂರು ದಾಖಲಿಸಿರುವ ವಕೀಲ ಕೂಡ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಮೂರ್ತಿ ಆರ್ ಜಿ ಅವಾಚತ್ ಅವರಿದ್ದ ಏಕಸದಸ್ಯ ಪೀಠ ಸೂಚಿಸಿದೆ. ಪ್ರಕರಣವನ್ನು 4 ವಾರಗಳ ಬಳಿಕ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.
ಘಟನೆಯ ವಿಡಿಯೋ ನೋಡಿದರೆ, ಶಿಲ್ಪಾ ಅವರ ವಿರುದ್ಧ ಗೇರ್ ಅವರಿಗೆ ಯಾವುದೇ ಅಶ್ಲೀಲ ಕೃತ್ಯ ಎಸಗುವ ಉದ್ದೇಶವಿತ್ತು ಎಂದು ಊಹಿಸಲು ಸಾಧ್ಯವಿಲ್ಲ ಎಂಬುದಾಗಿ ಶನಿವಾರ ನಡೆದ ವಿಚಾರಣೆಯಲ್ಲಿ ವಕೀಲ ಮಧುಕರ್ ದಳವಿ ತಿಳಿಸಿದ್ದಾರೆ.
ದತ್ತಿನಿಧಿ ಸಂಗ್ರಹ ಮತ್ತು ಏಡ್ಸ್ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಖ್ಯಾತನಾಮರು ಭಾಗವಹಿಸಿದ್ದರಿಂದ ಅನಗತ್ಯ ಪ್ರಚಾರ ಪಡೆಯಲು ಕೆಲ ಅತೃಪ್ತರು ಈ ಘಟನೆಯನ್ನು ದೊಡ್ಡದು ಮಾಡಿದ್ದಾರೆ ಎಂದರು.
ವಾದ ಆಲಿಸಿದ ನ್ಯಾ. ಅವಾಚತ್ ಅವರು ಪ್ರತಿವಾದಿಗಳಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಸಿದರು. ಮಹಾರಾಷ್ಟ್ರ ಸರ್ಕಾರದ ಹೊರತಾಗಿ, ಜೈಪುರದಲ್ಲಿ ದೂರುದಾರರಾಗಿದ್ದ ವಕೀಲ ಪೂನಂ ಚಂದ್ ಭಂಡಾರಿ ಕೂಡ ನಾಲ್ಕು ವಾರಗಳಲ್ಲಿ ಉತ್ತರವನ್ನು ಸಲ್ಲಿಸಬೇಕಿದೆ.
ಪ್ರಕರಣದಿಂದ ತನ್ನನ್ನು ಮುಕ್ತಗೊಳಿಸಲು ಕೋರಿ ಸಲ್ಲಿಸಿದ್ದ ಬಿಡುಗಡೆ ಅರ್ಜಿಗಳಲ್ಲಿ ಒಂದನ್ನು ತಿರಸ್ಕರಿಸಿದ್ದ ಕೆಳ ನ್ಯಾಯಾಲಯವೊಂದರ ಆದೇಶ ಪ್ರಶ್ನಿಸಿ ಶಿಲ್ಪಾ ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿದ್ದರು.