Footpath 
ಸುದ್ದಿಗಳು

ಉತ್ತಮ ಸ್ಥಿತಿಯ ಪಾದಚಾರಿ ಮಾರ್ಗ ಹೊಂದುವುದು ಮೂಲಭೂತ ಹಕ್ಕು: ಕರ್ನಾಟಕ ಹೈಕೋರ್ಟ್

ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

Bar & Bench

ಉತ್ತಮ ಸ್ಥಿತಿಯ ಪಾದಚಾರಿ ಮಾರ್ಗಗಳನ್ನು ಹೊಂದುವುದು ಸಂವಿಧಾನದ 21ನೇ ಪರಿಚ್ಛೇದದಡಿ ಮೂಲಭೂತ ಹಕ್ಕು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಪುನರುಚ್ಚರಿಸಿದೆ. ಲೆಟ್ಜ್‌ಕಿಟ್‌ ಪ್ರತಿಷ್ಠಾನ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೋಟಿಸ್ ನೀಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

"ಈ ನ್ಯಾಯಾಲಯದ ಹಿಂದಿನ ಆದೇಶದಲ್ಲಿ ಸಾರ್ವಜನಿಕ ರಸ್ತೆ / ಪಾದಚಾರಿ ಮಾರ್ಗಗಳನ್ನು ಸಮಂಜಸವಾದ ಸ್ಥಿತಿಯಲ್ಲಿ ಹೊಂದುವ ಹಕ್ಕನ್ನು ಭಾರತದ ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಲಾಗಿದೆ. ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ನಾಗರಿಕರು ಸೂಕ್ತ ರೀತಿಯಲ್ಲಿ ಬಳಸದಂತೆ ತಡೆ ಒಡ್ಡುತ್ತಿದ್ದರೆ ಅದು ಸಂವಿಧಾನದ 21ನೇ ಪರಿಚ್ಛೇದದ ಉಲ್ಲಂಘನೆ ಆಗುತ್ತದೆ ಎಂದು ಹೇಳಲಾಗಿತ್ತು "ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಬಿಬಿಎಂಪಿಗೆ ಸೂಚಿಸಿತು.

ಅರ್ಜಿದಾರರು ಸೂಚಿಸುವ ವಿವಿಧ ಸ್ಥಳಗಳಿಗೆ ಸಂಬಂಧಪಟ್ಟ ಅಧಿಕಾರಿ ಭೇಟಿ ನೀಡುವಂತೆ ಬಿಬಿಎಂಪಿ ನೋಡಿಕೊಳ್ಳಬೇಕು. ಪಾದಚಾರಿ ಮಾರ್ಗಗಳಲ್ಲಿ ಯಾವುದಾದರೂ ಒತ್ತುವರಿ ಕಂಡುಬಂದರೆ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿಗೆ ಪ್ರತ್ಯೇಕವಾಗಿ ಸೂಚಿಸುವ ಅಗತ್ಯವಿರುವುದಿಲ್ಲ ಎಂದು ಹೇಳಿದೆ.

2019ರಲ್ಲಿ ನ್ಯಾಯಾಲಯ ನೀಡಿರುವ ಆದೇಶವನ್ನು ಗಮನಿಸುವಂತೆ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್‌ ಅವರಿಗೆ ಪೀಠ ಈ ಸಂದರ್ಭದಲ್ಲಿ ಸೂಚಿಸಿತು. ಕೆಟ್ಟ ಸ್ಥಿತಿಯಲ್ಲಿರುವ ರಸ್ತೆ ಮತ್ತು ಪಾದಚಾರಿ ಮಾರ್ಗಗಳು, ಗುಂಡಿ ಬಿದ್ದ ರಸ್ತೆಗಳು ಸಂವಿಧಾನದ 21ನೇ ಪರಿಚ್ಛೇದದಡಿ ಒದಗಿಸಲಾದ ನಾಗರಿಕರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು 2019ರ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕೆಲ ಪ್ರಮುಖ ವಾಣಿಜ್ಯ ಪ್ರದೇಶಗಳನ್ನು (ಸೆಂಟ್ರಲ್‌ ಬ್ಯುಸಿನೆಸ್‌ ಡಿಸ್ಟ್ರಿಕ್ಟ್‌- ಸಿಬಿಡಿ) ಹೊರತುಪಡಿಸಿ ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳು ಸಂಚಾರ ಯೋಗ್ಯವಾಗಿಲ್ಲ. ಅವುಗಳನ್ನು ಒತ್ತುವರಿ ಮಾಡಲಾಗಿದೆ. ಸಾರ್ವಜನಿಕರು ಮಾತ್ರವಲ್ಲದೆ ಪೊಲೀಸರು, ಅಧಿಕಾರಿಗಳು ಕೂಡ ಒತ್ತುವರಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 15 ರಂದು ನಡೆಯಲಿದೆ.