ವೈವಾಹಿಕ ವ್ಯಾಜ್ಯಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದ ದಾಖಲೆಗಳಿಂದ ವಿಚ್ಛೇದಿತ ದಂಪತಿಯ ಹೆಸರು ತೆಗೆದುಹಾಕುವಂತೆ ತನ್ನ ರಿಜಿಸ್ಟ್ರಿಗೆ ದೆಹಲಿ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಅಂತೆಯೇ ತಮ್ಮ ಗುರುತನ್ನು ಮರೆಮಾಚುವುದಕ್ಕಾಗಿ ಸಂಬಂಧಪಟ್ಟ ಎಲ್ಲಾ ಜಾಲತಾಣಗಳು ಮತ್ತು ಸಾರ್ವಜನಿಕ ಸರ್ಚ್ ಎಂಜಿನ್‌ಗಳನ್ನು ಸಂಪರ್ಕಿಸಲು ವಿಚ್ಛೇದಿತ ಪತಿಗೆ ನ್ಯಾಯಮೂರ್ತಿ ಅಮಿತ್ ಮಹಾಜನ್ ಅನುಮತಿಸಿದರು. ಪೋರ್ಟಲ್‌ಗಳು ಮತ್ತು ಸರ್ಚ್ ಎಂಜಿನ್‌ಗಳು ಗೌಪ್ಯತೆಯ ಹಕ್ಕು ಮತ್ತು ಮರೆಯಾಗುವ ಹಕ್ಕನ್ನು (ಸಾರ್ವಜನಿಕ ದೃಷ್ಟಿಯಿಂದ ವೈಯಕ್ತಿಕ ವಿವರ, ದತ್ತಾಂಶಗಳನ್ನು ತೆಗೆದುಹಾಕುವುದು) ಪಾಲಿಸುವುದನ್ನು ನಿರೀಕ್ಷಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಯಾವುದೇ ಅಪರಾಧದಿಂದ ಖುಲಾಸೆಗೊಂಡಾಗ ಇಲ್ಲವೇ ಕ್ರಿಮಿನಲ್ ಮೊಕದ್ದಮೆ ರದ್ದಾದಾಗ, ವ್ಯಕ್ತಿಗಳ ಹೆಸರನ್ನು ಮರೆಮಾಚಲು ಅನುಮತಿಸಬೇಕಾಗಿರುವುದು ಪ್ರಮಾಣಾನುಗುಣತೆ ಮತ್ತು ನ್ಯಾಯೋಚಿತತೆಯ ಮೂಲಭೂತ ಪರಿಕಲ್ಪನೆಯಾಗಿದೆ ಎಂದು ಅದು ವಿವರಿಸಿದೆ.
ಅಲ್ಲದೆ 'ಗೌಪ್ಯತೆ ಹಕ್ಕು' ಎಂಬುದು ಮರೆಯಾಗುವ ಹಕ್ಕನ್ನು ಒಳಗೊಂಡಿರುತ್ತದೆ ಎಂದು ಕೂಡ ಅದು ಹೇಳಿದೆ.
ಮಾಹಿತಿಯ ಲಭ್ಯತೆಯು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದ್ದರೂ ಸಾರ್ವಜನಿಕರ ಮಾಹಿತಿಯ ಹಕ್ಕನ್ನು ವ್ಯಕ್ತಿಯ ಖಾಸಗಿತನದ ಹಕ್ಕಿನೊಂದಿಗೆ ಸಮತೋಲಿತವಾಗಿ ಪರಿಗಣಿಸುವ ಅಗತ್ಯದಿಂದ ದೂರವಾಗುವಂತಿಲ್ಲ. ಅದರಲ್ಲಿಯೂ ವಿಚಾರಣೆ ರದ್ದಾದ ಬಳಿಕ ಅಂತರ್ಜಾಲದಲ್ಲಿನ ಮಾಹಿತಿಯನ್ನು ಹಾಗೆಯೇ ಇರಿಸುವುದರಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಈಡೇರದು ಎಂದು ನ್ಯಾಯಾಲಯ ಕಿವಿ ಹಿಂಡಿದೆ.
ಆರೋಪದಿಂದ ಮುಕ್ತವಾದ ವ್ಯಕ್ತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತಹ ಆರೋಪಗಳ ಕುರಿತಾದ ಮಾಹಿತಿಯ "ಪಳೆಯುಳಿಕೆಗಳಿಂದ ಭೀತರನ್ನಾಗಿಸುವುದು" ಸಲ್ಲದು ಆರೋಪಗಳ ಕುರಿತಾದ ವಿವರದ ಅವಶೇಷದಡಿ ಸಿಲುಕುವಂತೆ ಮಾಡಲು ಸಕಾರಣವಿಲ್ಲ ಎಂದು ಅದು ಹೇಳಿದೆ.
ಈ ರೀತಿ ವಿವರಗಳನ್ನು ಬಹಿರಂಗವಾಗಿಯೇ ಇಡುವುದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕು, ಮರೆಯುವ ಹಕ್ಕು ಹಾಗೂ ಘನತೆಯಿಂದ ಬದುಕುವ ಹಕ್ಕಿಗೆ ವ್ಯತಿರಿಕ್ತವಾಗಿರುತ್ತದೆ ಎಂದು ಅದು ಹೇಳಿದೆ.
ಈ ಹಿನ್ನೆಲೆಯಲ್ಲಿ ತಮ್ಮ ವಿವರಗಳನ್ನು ತೆಗೆಯುವಂತೆ ಕೋರಿದ್ದ ಮನವಿ ಪುರಸ್ಕರಿಸಿದ ಪೀಠ ಭವಿಷ್ಯದಲ್ಲಿ ಹೈಕೋರ್ಟ್ ರಿಜಿಸ್ಟ್ರಿ ಕಕ್ಷಿದಾರನ ಹೆಸರನ್ನು ನೇರವಾಗಿ ಬಳಸುವ ಬದಲು ಪುರುಷನ ಹೆಸರನ್ನು ʼಎಬಿಸಿʼ ಎಂತಲೂ ಆತನ ಮಾಜಿ ಹೆಂಡತಿಯ ಹೆಸರನ್ನು ʼಎಕ್ಸ್‌ವೈಜಡ್ʼ ಎಂತಲೂ ನಮೂದಿಸಬೇಕು ಎಂದು ತಾಕೀತು ಮಾಡಿತು.