ರಾಜ್ಯ ಸರ್ಕಾರದ ನಿರ್ಮಾಣ ಯೋಜನೆಗಳಿಂದ ಜೀವನೋಪಾಯಕ್ಕಾಗಿ ಸಾಂಪ್ರದಾಯಿಕವಾಗಿ ನಡೆಸುತ್ತಿದ್ದ ಚಟುವಟಿಕೆಗಳಿಗೆ ಧಕ್ಕೆಯಾಗಿರುವ ಸಮುದಾಯಗಳಿಗೆ ಪರಿಹಾರ ನೀಡಲು ರಾಜ್ಯವ್ಯಾಪಿ ನೀತಿ ರೂಪಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಥಾಣೆ ಕೊಲ್ಲಿ ಸೇತುವೆ ನಿರ್ಮಾಣ ಯೋಜನೆಯಿಂದ ಜೀವನೋಪಾಯಕ್ಕೆ ಸಮಸ್ಯೆ ಎದುರಿಸುವ ಮೀನುಗಾರರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿ ಮರಿಯಾಯಿ ಮಚ್ಚಿಮಾರ್ ಸಹಕಾರಿ ಸಂಸ್ಥಾ ಮರ್ಯಾದಿತ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಜೆ ಕಥಾವಲ್ಲಾ ಮತ್ತು ಮಿಲಿಂದ್ ಜಾಧವ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.
“ಜೀವನೋಪಾಯಕ್ಕಾಗಿ ಕೈಗೊಳ್ಳುವ ಸಾಂಪ್ರದಾಯಿಕ ಉದ್ಯೋಗದ ಹಕ್ಕಿಗೆ ಧಕ್ಕೆಯಾದಾಗ ಸಂವಿಧಾನದ 21ನೇ ವಿಧಿಯಡಿಯ ತತ್ವಗಳನ್ನು ಉದ್ಧರಿಸಲಾಗುತ್ತದೆ. ಇದುವೇ ಇಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವ ರಾಜ್ಯ ಸರ್ಕಾರದ ಕರ್ತವ್ಯದ ಹಿಂದಿನ ಆಧಾರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯದ ಸಾಂಪ್ರದಾಯಿಕ ಮೀನುಗಾರರ ಸಾಮಾಜಿಕ, ಪರಿಸರಾತ್ಮಕ ಹಿತಾಸಕ್ತಿಗಳನ್ನು ರಕ್ಷಿಸಲು ಪರಿಹಾರ ಯೋಜನೆಯನ್ನು ರೂಪಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಸಾರ್ವಜನಿಕರ ಹಿತಾಸಕ್ತಿಯಿಂದ ಯೋಜನೆ ಕೈಗೆತ್ತುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆ (ಎಂಎಸ್‌ಆರ್‌ಡಿಸಿ) ನ್ಯಾಯಾಲಯಕ್ಕೆ ತಿಳಿಸಿದೆ. ಯೋಜನೆಯಿಂದ ಜೀವವೈವಿಧ್ಯಕ್ಕೆ ಎರವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಎಂಎಸ್‌ಆರ್‌ಡಿಸಿ ಹೇಳಿದೆ.
ಸಮಗ್ರ ಪರಿಹಾರ ನೀತಿ ರೂಪಿಸುವಾಗ ವಿಸ್ತೃತ ಚೌಕಟ್ಟು ಹೊಂದುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಶಿಫಾರಸ್ಸು ಮಾಡಿದ್ದು, ಯೋಜನೆಗೆ ಅನುಮತಿಸಿದೆ.
ಯೋಜನೆ ಜಾರಿಗೊಳಿಸುತ್ತಿರುವ ಸುತ್ತಮುತ್ತಲಿನ ಪ್ರದೇಶದಲ್ಲಿರುವ ವ್ಯಕ್ತಿಗಳ ಮೇಲೆ ಈ ಯೋಜನೆ ಪ್ರಭಾವ ಬೀರಬಹುದೇ ಎಂಬುದನ್ನು ಗುರುತಿಸಿಬೇಕು.
ಯೋಜನೆಯ ಬಾಧಿತರು ನಿರ್ದಿಷ್ಟ ಅವಧಿಯವರೆಗೆ ಜೀವನೋಪಾಯಕ್ಕಾಗಿ ಚಟುವಟಿಕೆಯನ್ನು ಕೈಗೊಳ್ಳುವ ಸಾಂಪ್ರದಾಯಿಕ ಹಕ್ಕನ್ನು ಹೊಂದಿರಲಿದ್ದಾರೆಯೇ ಎಂಬುದನ್ನು ನಿರ್ಧರಿಸಬೇಕು.
ಒಮ್ಮೆ ಈ ವಿಚಾರಗಳನ್ನು ನಿರ್ಧರಿಸಿದ ನಂತರ ಪರಿಹಾರ ಸಮಿತಿಯು ಬಾಧಿತ ಕುಟುಂಬಗಳ ವಿವರ, ವೃತ್ತಿಯ ವಿಧ, ಪರಿಹಾರ ಹಣದ ಪ್ರಮಾಣವನ್ನು ಲೆಕ್ಕಾಚಾರ ಮಾಡಲು ಲೆಕ್ಕಾಚಾರ ಮಾಡುವ ವಿಧಾನವನ್ನು ಪರಿಗಣಿಸಬಹುದಾಗಿದೆ.
ರಾಜ್ಯ ಅಥವಾ ಸಾರ್ವಜನಿಕ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯು ಯೋಜನೆಯಿಂದ ತೊಂದರೆಗೊಳಗಾದವರಿಗೆ ಪರಿಹಾರ ನೀಡಲು ವೆಚ್ಚಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ರೂಪಿಸಬೇಕು.
ಸಾರ್ವಜನಿಕ ಯೋಜನೆಗಾಗಿ ಮಹಾರಾಷ್ಟ್ರ ಸರ್ಕಾರ ಅಥವಾ ಅನುಷ್ಠಾನ ಸಂಸ್ಥೆಯು ಸಾಂಪ್ರದಾಯಿಕ ಹಕ್ಕನ್ನು ಗುರುತಿಸಿ, ಒಪ್ಪಿದ ಬಳಿಕ ಪರಿಹಾರ ಸಮಿತಿಯು ಯೋಜನೆಯ ನೇರ, ಪರೋಕ್ಷ, ಶಾಶ್ವತ ಮತ್ತು ತಾತ್ಕಾಲಿಕ ಪರಿಣಾಮಗಳನ್ನು ನಿರ್ಧರಿಸಬೇಕಾಗುತ್ತದೆ ಎಂದಿರುವ ನ್ಯಾಯಾಲಯವು ಆರು ವಾರಗಳಲ್ಲಿ ತನ್ನ ನಿರ್ದೇಶನದ ಪಾಲನಾ ವರದಿ ಸಲ್ಲಿಸುವಂತೆ ಆದೇಶಿಸಿದೆ.