ಪ್ರೌಢ ವಯಸ್ಸು ತಲುಪಿದ ಮಹಿಳೆಗೆ ತನ್ನದೇ ಆದ ಜೀವನ ನಡೆಸುವ ಹಕ್ಕು ಇದೆ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಘೋಷಿಸಿದೆ. ಮಹಿಳೆ ತನ್ನ ಗಂಡ ಸಲ್ಮಾನ್ ಜೊತೆ ವಾಸಿಸುವ ಬಯಕೆ ವ್ಯಕ್ತಪಡಿಸಿದ್ದನ್ನು ಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಪಂಕಜ್ ನಖ್ವಿ ಮತ್ತು ವಿವೇಕ್ ಅಗರ್ವಾಲ್ ಅವರಿದ್ದ ಪೀಠ ದಂಪತಿಯ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಪೊಲೀಸ್ ರಕ್ಷಣೆ ನೀಡಬೇಕೆಂದು ನಿರ್ದೇಶನ ನೀಡಿತು.
"ಕಾರ್ಪಸ್ (ಮಹಿಳೆ) ಪ್ರೌಢ ವಯಸ್ಸು ತಲುಪಿರುವುದರಿಂದ ತನ್ನ ಬದುಕನ್ನು ತನ್ನದೇ ಆದ ರೀತಿಯಲ್ಲಿ ಬದುಕಲು ಆಕೆ ಆಯ್ಕೆ ಮಾಡಿಕೊಂಡಿದ್ದಾಳೆ. ಪತಿ ಸಲ್ಮಾನ್ ಅಲಿಯಾಸ್ ಕರಣ್ ಅವರೊಂದಿಗೆ ಬದುಕಲು ಬಯಸುವೆ ಎಂದು ಹೇಳಿದ್ದಾಳೆ. ಮೂರನೇ ವ್ಯಕ್ತಿಗಳು ಸೃಷ್ಟಿಸುವ ಯಾವುದೇ ನಿರ್ಬಂಧ ಅಥವಾ ಅಡೆತಡೆಗಳಿಗೆ ಒಳಗಾಗದೇ ತನ್ನದೇ ಆದ ರೀತಿಯಲ್ಲಿ ಬದುಕಲು ಆಕೆ ಸ್ವತಂತ್ರಳು” ಎಂದು ನ್ಯಾಯಾಲಯ ತಿಳಿಸಿದೆ.
ಮಹಿಳೆಯನ್ನು ಎಟಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ಹಸ್ತಾಂತರಿಸಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೆಟ್ (ಸಿಜೆಎಂ) ಅವರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿದೆ. ಅದೇ ರೀತಿ, ಮಹಿಳೆಯನ್ನು ಪೋಷಕರಿಗೆ ಒಪ್ಪಿಸಿದ ಸಿಡಬ್ಲ್ಯುಸಿಯ ನಡೆಯ ಬಗ್ಗೆಯೂ ಅಸಮಾಧಾನ ಸೂಚಿಸಿದೆ. ದಂಪತಿ ಸ್ವಗೃಹಕ್ಕೆ ಮರಳುವವರೆಗೆ ಸೂಕ್ತ ರಕ್ಷಣೆ ನೀಡುವಂತೆ ನ್ಯಾಯಾಲಯ ತನಿಖಾಧಿಕಾರಿಗೆ (ಐಒ) ನಿರ್ದೇಶನ ನೀಡಿದೆ.
ಶಾಲಾ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾದ ಜನ್ಮ ದಿನಾಂಕವನ್ನು ನ್ಯಾಯಾಲಯವು ಆಧರಿಸಿ ತೀರ್ಪು ನೀಡಿದೆ. ಅದರಲ್ಲಿ ಮಹಿಳೆಯ ಜನ್ಮ ದಿನಾಂಕ ಅಕ್ಟೋಬರ್ 4, 1999 ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ 2019ರಲ್ಲಿ ನೋಂದಾಯಿಸಲಾದ ಮಹಿಳೆಯ ಜನನ ಪ್ರಮಾಣಪತ್ರವನ್ನು ಆಧರಿಸಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಆದೇಶ ನೀಡಿದ್ದರು. ಎಟಾ ನಗರದ ಸಿಜೆಎಂ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯದ ಕುರಿತಂತೆಯೂ ಅದು ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಐಪಿಸಿ ಸೆಕ್ಷನ್ 366ರ ಅಡಿ (ಮಹಿಳೆ ಅಪಹರಣ ಮತ್ತು ಆಕೆಯ ಇಚ್ಛೆಗೆ ವಿರುದ್ಧವಾಗಿ ಒಬ್ಬ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಾಯಿಸುವುದು) ಮಹಿಳೆಯ ಪತಿ ವಿರುದ್ಧ ಹೂಡಲಾಗಿದ್ದ ಮೊಕದ್ದಮೆಯನ್ನು ನ್ಯಾಯಾಲಯ ರದ್ದುಪಡಿಸಿದೆ.