Pregnant woman and supreme court 
ಸುದ್ದಿಗಳು

ಹೆರಿಗೆ ರಜೆ ಜೀವಿಸುವ ಹಕ್ಕಿನ ಭಾಗ: ಸುಪ್ರೀಂ ಕೋರ್ಟ್

ಮಗುವನ್ನು ಎರಡನೇ ಮದುವೆಯಿಂದ ಪಡೆದಿದ್ದರೂ ಮೊದಲನೇ ವಿವಾಹದಿಂದ ಜನಿಸಿದ ಮಕ್ಕಳು ಮಾಜಿ ಸಂಗಾತಿಯೊಂದಿಗೆ ವಾಸಿಸುತ್ತಿದ್ದರೂ ಸಹ ಮಹಿಳೆಗೆ ಮಾತೃತ್ವ ರಜೆ ಪಡೆಯುವ ಅರ್ಹತೆ ಇದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Bar & Bench

ಹೆರಿಗೆ ರಜೆ ಎಂಬುದು ಮಹಿಳಾ ಉದ್ಯೋಗಿಯ ಸಂತಾನೋತ್ಪತ್ತಿ ಹಕ್ಕು ಮತ್ತು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ ಭಾಗವಾಗಿದ್ದು ಮಹಿಳೆಗೆ ಜನಿಸಿದ ಮಗು ಮೂರನೇ ಮಗುವಾಗಿದ್ದು ಎರಡನೇ ಮದುವೆಯಿಂದ ಪಡೆದದ್ದು ಎಂಬ ಕಾರಣಕ್ಕೆ ಆಕೆಗೆ ಹೆರಿಗೆ ರಜೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿದೆ.

ಮಹಿಳಾ ಉದ್ಯೋಗಿ ಮೂರನೇ ಮಗುವಿಗೆ ಜನ್ಮ ನೀಡುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಹೆರಿಗೆ ರಜೆ ನಿರಾಕರಿಸುವುದು ಸಂವಿಧಾನದ 21ನೇ ವಿಧಿಯಡಿ ಆಕೆಗೆ ದೊರೆಯಬೇಕಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿದೆ.

ತಮಿಳುನಾಡು ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು 2021 ರಲ್ಲಿ ತಮ್ಮ ಎರಡನೇ ಮದುವೆಯ ಫಲವಾಗಿ ಗರ್ಭ ಧರಿಸಿದ ಹಿನ್ನೆಲೆಯಲ್ಲಿ ಹೆರಿಗೆ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ತಮ್ಮ ಮೊದಲ ಮದುವೆಯಿಂದ ಆಕೆಗೆ ಇಬ್ಬರು ಮಕ್ಕಳು ಜನಸಿದ್ದರು. ವಿಚ್ಛೇದನ ಪಡೆದಿದ್ದ ಹಿನ್ನೆಲೆಯಲ್ಲಿ ಮೊದಲ ಮದುವೆಯ ಫಲವಾಗಿ ಜನಿಸಿದ ಮಕ್ಕಳು ಮಾಜಿ ಪತಿಯ ಸುಪರ್ದಿಯಲ್ಲೇ ಇದ್ದರು.

ಎರಡನೇ ಮದುವೆಯ ಫಲವಾಗಿ ಜನಿಸಿದ ಮಗುವಿಗೆ ಆಕೆ ಜನ್ಮ ನೀಡಿದ್ದರೂ  ಜಿಲ್ಲಾ ಶಿಕ್ಷಣ ಕಚೇರಿ ಆಕೆಗೆ ಹೆರಿಗೆ ರಜೆ ನಿರಾಕರಿಸಿತ್ತು. ತಮಿಳುನಾಡು ಮೂಲಭೂತ ನಿಯಮಾವಳಿಯ ನಿಯಮ 101(ಎ) ಪ್ರಕಾರ ಎರಡು ಮಕ್ಕಳು ಪಡೆಯುವವರೆಗೆ ಮಾತ್ರ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ಪಡೆಯಲು ಅವಕಾಶ ಇರುತ್ತದೆ. ಆದರೆ ಅರ್ಜಿದಾರೆ ಮೂರನೇ ಮಗು ಪಡೆಯುತ್ತಿರುವುದರಿಂದ ಆಕೆ ಹೆರಿಗೆ ರಜೆ ಪಡೆಯಲು ಅರ್ಹರಲ್ಲ ಎಂದು ಅದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಏಕ ಸದಸ್ಯ ಪೀಠ ಆಕೆಯ ಪರವಾಗಿ ತೀರ್ಪು ನೀಡಿತ್ತು. ಆಕೆಯ ಮೊದಲ ಇಬ್ಬರು ಮಕ್ಕಳು ಆಕೆ ಸೇವೆಗೆ ಸೇರುವ ಮುನ್ನ ಜನಿಸಿದ್ದರಿಂದ ಈ ಪ್ರಕರಣದಲ್ಲಿ ಇಬ್ಬರು ಮಕ್ಕಳಿಗಷ್ಟೇ ಹೆರಿಗೆ ರಜೆ ಅನ್ವಯ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತಿಲ್ಲ ಎಂದು ಅದು ಹೇಳಿತ್ತು. ಈ ಆದೇಶವನ್ನು ಸರ್ಕಾರ ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು. ಮಾತೃತ್ವ ರಜೆ ಮೂಲಭೂತ ಹಕ್ಕಲ್ಲ ಬದಲಿಗೆ ಸೇವಾ ಷರತ್ತಿನನ್ವಯ ದೊರೆಯುವ ಹಕ್ಕು ಎಂದ ವಿಭಾಗೀಯ ಪೀಠ ಆಕೆಗೆ ಪರಿಹಾರ ನಿರಾಕರಿಸಿತ್ತು. ಹೀಗಾಗಿ ಆಕೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನ ತಾರ್ಕಿಕತೆಯನ್ನು ಒಪ್ಪದ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಮೂಲಭೂತ ಹಕ್ಕು ಸಂತಾನೋತ್ಪತ್ತಿಯನ್ನೂ ಒಳಗೊಂಡಿದೆ ಮತ್ತು ಜನಸಂಖ್ಯಾ ನಿಯಂತ್ರಣವನ್ನು ಜಾರಿಗೊಳಿಸಲು ಉದ್ದೇಶಿಸಲಾದ ನೀತಿಗಳು ದುಡಿಯುವ ಮಹಿಳೆಯರ ಘನತೆ ಮತ್ತು ಕಲ್ಯಾಣಕ್ಕೆ ಅನುಗುಣವಾಗಿರಬೇಕು ಎಂದಿತು.

ಪ್ರಸಕ್ತ ಪ್ರಕರಣಗಳಂತಹ ಸಂದರ್ಭಗಳಲ್ಲಿ ಎರಡು ಮಕ್ಕಳ ನಿಯಮವನ್ನು ಯಾಂತ್ರಿಕ ರೀತಿಯಲ್ಲಿ ಅನ್ವಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು. ಮಹಿಳೆಯ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ರದ್ದುಗೊಳಿಸಿತು ಮತ್ತು ಎಫ್‌ಆರ್ 101(ಎ) ಅಡಿಯಲ್ಲಿ ಅವರಿಗೆ ಹೆರಿಗೆ ರಜೆ ನೀಡಬೇಕೆಂದು ನಿರ್ದೇಶಿಸಿತು. ಜೊತೆಗೆ ಎರಡು ತಿಂಗಳೊಳಗೆ ಎಲ್ಲಾ ಸವಲತ್ತುಗಳನ್ನು ಒದಗಿಸುವಂತೆ ಆದೇಶಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

K__Umadevi_vs__Government_of_Tamil_Nadu___Ors_.pdf
Preview