ಭಾರತದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಅವರಿಗೆ ಹೊಸ ಪಾಸ್‌ಪೋರ್ಟ್ ನೀಡಲು ನಿರಾಕರಿಸಬಹುದು. ಆದರೆ, ಇದೇ ನಿಯಮ ಪಾಸ್‌ಪೋರ್ಟ್ ನವೀಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ಪಾಸ್‌ಪೋರ್ಟ್ ಕಾಯಿದೆಯ ಸೆಕ್ಷನ್ 6(2)(f) ಅನ್ನು ವ್ಯಾಖ್ಯಾನಿಸಿರುವ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಹೀಗೆ ಹೇಳಿದ್ದಾರೆ.
“ನೂತನ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಅಂಥವರಿಗೆ ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆ ನೀಡಲು ನಿರಾಕರಿಸಬಹುದು ಎಂದು ಪಾಸ್‌ಪೋರ್ಟ್ ಕಾಯಿದೆಯ ಸೆಕ್ಷನ್ 6(2)(f) ಹೇಳುತ್ತದೆ. ಆದರೆ, ಮೇಲೆ ಹೇಳಿರುವ ನಿಬಂಧನೆಯು ಭಾರತಕ್ಕೆ ಮರಳಲು ಬಯಸುತ್ತಿರುವವರಿಗೆ ಪಾಸ್‌ಪೋರ್ಟ್ ನಿರಾಕರಿಸುವಂತೆ ಹೇಳುವುದಿಲ್ಲ. ಈ ನೆಲೆಯಲ್ಲಿ ಈ ನಿಬಂಧನೆಯು ಹೊಸ ಪಾಸ್‌ಪೋರ್ಟ್ ನೀಡುವುದಕ್ಕೆ ಅನ್ವಯಿಸುತ್ತದೆಯೇ ವಿನಾ ಪಾಸ್‌ಪೋರ್ಟ್ ನವೀಕರಣಕ್ಕೆ ಅನ್ವಯಿಸುವುದಿಲ್ಲ.”ಕರ್ನಾಟಕ ಹೈಕೋರ್ಟ್
ಸಹಾಯಕ ಸಾಲಿಸಿಟರ್ ಜನರಲ್ ಸಿ ಶಶಿಕಾಂತ್ ಅವರು ವಿದೇಶಾಂಗ ಇಲಾಖೆಯ 1993ರ ಅಧಿಸೂಚನೆಯ ಪ್ರಕಾರ ಪಾಸ್‌ಪೋರ್ಟ್ ನವೀಕರಿಸಲು ಜ್ಯುರಿಸ್ಡಿಕ್ಷನಲ್ ಮ್ಯಾಜಿಸ್ಟ್ರೇಟ್ (ಸಂಬಂಧಪಟ್ಟ ನ್ಯಾಯಿಕ ವ್ಯಾಪ್ತಿಯ ನ್ಯಾಯಾಧೀಶರ) ಅವರ ಅನುಮತಿ ಅಗತ್ಯ ಎಂದು ವಾದಿಸಿದ್ದರು. ತುರ್ತು ಸರ್ಟಿಫಿಕೇಟ್ ಪಡೆದು ಭಾರತಕ್ಕೆ ಪ್ರವಾಸ ಕೈಗೊಳ್ಳಬಹುದು ಎಂದು ಹೇಳಿದ್ದರು. ನ್ಯಾಯಾಲಯವು ಅವರ ವಾದವನ್ನು ತಿರಸ್ಕರಿಸಿತು.
“ಅರ್ಜಿದಾರರಿಗೆ ಪಾಸ್‌ಪೋರ್ಟ್ ಅನ್ನು ನಿರಾಕರಿಸಲಾಗಿಲ್ಲ, ವಶಕ್ಕೆಪಡೆಯಲಾಗಿಲ್ಲ ಅಥವಾ ರದ್ದುಪಡಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ತುರ್ತು ಸರ್ಟಿಫಿಕೇಟ್ ಪಡೆಯಲು ಇರುವ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ” ಎಂದು ಹೇಳಿದೆ.
“ಸತ್ವಂತ್ ಸಿಂಗ್ ಸಾಹ್ನಿ ಸುಪ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ 21ನೇ ವಿಧಿಯ ಅನ್ವಯ ಕಾನೂನು ವಿರುದ್ಧವಾಗಿರುವುದನ್ನು ಹೊರತುಪಡಿಸಿ ಪ್ರವಾಸ ಕೈಗೊಳ್ಳುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂದು ಅವರ ಪಾಸ್‌ಪೋರ್ಟ್ ನವೀಕರಿಸಲು ನಿರಾಕರಿಸುವ ಮೂಲಕ ಅವರ ಪ್ರವಾಸದ ಹಕ್ಕನ್ನು ಮೊಟಕುಗೊಳಿಸಲಾಗದು.”ಕರ್ನಾಟಕ ಹೈಕೋರ್ಟ್
ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂದು ಸಾಬೀತುಪಡಿಸಲು ನಿರ್ದಿಷ್ಟ ನ್ಯಾಯಾಲಯದಿಂದ ಅವರಿಗೆ ಯಾವುದೇ ತೆರನಾದ ಸಮನ್ಸ್ ಜಾರಿಯಾಗಿಲ್ಲ ಎಂದಿರುವ ನ್ಯಾಯಾಲಯವು ಒಂಭತ್ತು ತಿಂಗಳ ಅವಧಿಗೆ ಅರ್ಜಿದಾರರ ಪಾಸ್‌ಪೋರ್ಟ್ ನವೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಅರ್ಜಿದಾರರು 2006ರಲ್ಲಿ ಎಚ್1ಬಿ ವೀಸಾದಿಂದ ಅಮೆರಿಕಾಕ್ಕೆ ತೆರಳಿ ಅಲ್ಲಿ ಕುಟುಂಬದೊಂದಿಗೆ ನೆಲೆಸಿದ್ದು, ಭಾರತಕ್ಕೆ ಮರಳಬೇಕಿರುವುದರಿಂದ ತನ್ನ ಪಾಸ್‌ಪೋರ್ಟ್ ನವೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಜನವರಿ 22ರಂದು ರಿಟ್ ಮನವಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಅವರು ಜನವರಿ 1ರಂದು ತಮ್ಮ ಟ್ರಾವೆಲ್ ಏಜೆಂಟ್ ಮೂಲಕ ನ್ಯೂಯಾರ್ಕ್‌ನ ದೂತವಾಸದಲ್ಲಿ ಪಾಸ್‌ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ಪಾಸ್‌ಪೋರ್ಟ್ ಅವಧಿ ಶೀಘ್ರದಲ್ಲೇ ಪೂರ್ಣಗೊಳ್ಳುವುದರಿಂದ ಅದನ್ನು ನವೀಕರಿಸುವಂತೆ ಕೋರಿದ್ದ ಅವರು ಈ ಸಂಬಂಧ ಹಲವು ಇಮೇಲ್ ಗಳನ್ನು ಅಧಿಕಾರಿಗಳಿಗೆ ಕಳುಹಿಸಿದ್ದರು.
ಜುಲೈ 17ರಂದು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇರುವುದಾಗಿ ಕೇಂದ್ರೀಯ ತನಿಖಾ ದಳ ಪತ್ರ ಬರೆದಿದೆ ಎಂದು ಮಾಹಿತಿ ನೀಡಿದ್ದರು. 2002ರಿಂದಲೂ ವಿದೇಶದಲ್ಲಿ ನೆಲೆಸಿರುವುದರಿಂದ ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಅಲ್ಲದೇ ತಾತ್ಕಾಲಿಕ ಪಾಸ್‌ಪೋರ್ಟ್ ನೀಡುವಂತೆ ಅವರು ಕೋರಿದ್ದು, ಭಾರತಕ್ಕೆ ಬಂದು ಪ್ರಕರಣ ಬಗ್ಗೆ ಮಾಹಿತಿ ಪಡೆಯುವುದಾಗಿ ಮನವಿ ಮಾಡಿದ್ದರು. ಇದಕ್ಕೆ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.