Karnataka HC and RTE Act

 
ಸುದ್ದಿಗಳು

ಕಡ್ಡಾಯ ಶಿಕ್ಷಣ ಹಕ್ಕು: ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ಕೋರಿಕೆ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳ ಜಾರಿಗಾಗಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿ ವಿಚಾರಣೆ ನಡೆಸಿದ ಪೀಠ.

Bar & Bench

ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೊಳಿಸುವ ನಿಟ್ಟಿನಲ್ಲಿ ಅಮಿಕಸ್ ಕ್ಯೂರಿ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಉಲ್ಲೇಖಿಸಿರುವ ಶಿಫಾರಸ್ಸು ಜಾರಿಗೆ ಸಂಬಂಧಿಸಿದಂತೆ ಉನ್ನತಾಧಿಕಾರ ಸಮಿತಿ ಸಭೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಕೋರಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಖಾಲಿಯಿರುವ ಶೈಕ್ಷಣಿಕ ಸಮನ್ವಯಕಾರರ ಹುದ್ದೆಗಳನ್ನು ಆದಷ್ಟು ಬೇಗ ಅಂದರೆ ಒಂದು ತಿಂಗಳಲ್ಲಿ ತುಂಬುವುದಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಇದು ಸೇರಿದಂತೆ ಹಲವು ವಿಚಾರಗಳ ಕುರಿತು ಉನ್ನತಾಧಿಕಾರಿ ಸಭೆಯಲ್ಲಿ ಚರ್ಚೆ ನಡೆಸಬೇಕಿದೆ. ಈ ಕುರಿತು ಸಭೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಅಮಿಕಸ್‌ ಕ್ಯೂರಿ ಮತ್ತು ಹಿರಿಯ ವಕೀಲರಾದ ಕೆ ಎನ್‌ ಫಣೀಂದ್ರ ಕೋರಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಮೆಮೊ ಜತೆಗೆ ಸಲ್ಲಿಸಲಾದ‌ ಸರ್ವೆ ವರದಿಯಲ್ಲಿ ಎದ್ದುಕಾಣುವ ದೋಷಗಳಿದ್ದು, ಅವುಗಳನ್ನು ಸರಿಪಡಿಸಬೇಕಿದೆ. ಇದಕ್ಕಾಗಿ ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಪೀಠಕ್ಕೆ ಕೋರಿದರು. ಶಾಲೆ ತೊರೆದಿರುವ 6-14 ವಯೋಮಾನದ ಮಕ್ಕಳ ದತ್ತಾಂಶ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಮನೆಮನೆ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಿದೆ.

“ಅಮಿಕಸ್‌ ಕ್ಯೂರಿ ಮತ್ತು ಹಿರಿಯ ವಕೀಲರಾದ ಕೆ ಎನ್‌ ಫಣೀಂದ್ರ ಅವರಿಗೆ ನಗರಾಭಿವೃದ್ಧಿ ಇಲಾಖೆ ಅಗತ್ಯವಾದ ದತ್ತಾಂಶವನ್ನು ಪೂರೈಸುವುದನ್ನು ಸರ್ಕಾರದ ವಕೀಲರು ಖಾತರಿಪಡಿಸಬೇಕು” ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಮಾರ್ಚ್‌ 21ಕ್ಕೆ ಮುಂದೂಡಿದೆ. ವಿಚಾರಣೆಯಲ್ಲಿ ಪಾರ್ಟಿ ಇನ್‌ ಪರ್ಸನ್‌ ಕಾತ್ಯಾಯಿನಿ ಚಾಮರಾಜ್‌ ಮತ್ತು ಹಿರಿಯ ವಕೀಲೆ ಜಯ್ನಾ ಕೊಠಾರಿ ಇದ್ದರು.

ಕಳೆದ ವಿಚಾರಣೆಯಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಗ್ರಾಮೀಣ ಪ್ರದೇಶದಲ್ಲಿ ಶಾಲೆ ತೊರೆದಿರುವ ಮಕ್ಕಳ ಪತ್ತೆಗೆ ಸಂಬಂಧಿಸಿದಂತೆ ಮನೆ ಮನೆ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂದು ಪೀಠಕ್ಕೆ ಅಮಿಕಸ್‌ ಕ್ಯೂರಿ ಮಾಹಿತಿ ನೀಡಿದ್ದರು. ಬಿಬಿಎಂಪಿ ವಕೀಲರು ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದರು.