ಸುದ್ದಿಗಳು

ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ಮಾಹಿತಿ: ಜಾರಿ ನಿರ್ದೇಶನಾಲಯಕ್ಕೂ ಆರ್‌ಟಿಐ ಅನ್ವಯ: ದೆಹಲಿ ಹೈಕೋರ್ಟ್

Bar & Bench

ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ಕುರಿತ ಮಾಹಿತಿ ಕೇಳಿದರೆ ಜಾರಿ ನಿರ್ದೇಶನಾಲಯಕ್ಕೂ (ಇ ಡಿ) ಮಾಹಿತಿ ಹಕ್ಕು ಕಾಯಿದೆ ಅನ್ವಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ [ಭಾರತ ಒಕ್ಕೂಟ ಮತ್ತು ಕೇಂದ್ರ ಮಾಹಿತಿ ಆಯೋಗ ಇನ್ನಿತರರ ನಡುವಣ ಪ್ರಕರಣ].

ಮಾನವ ಹಕ್ಕುಗಳು ಎನ್ನುವುದನ್ನು ಸಂಕುಚಿತ ಅಥವಾ ಸೂಕ್ಷ್ಮ ದೃಷ್ಟಿಕೋನದಿಂದ ನೋಡಬಾರದು. ವ್ಯಕ್ತಿಯ ಬಡ್ತಿಗೆ ಸಂಬಂಧಿಸಿದ ದಾಖಲೆ ಒದಗಿಸದಿರುವುದು ಸಹ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಸುಧೀರ್ ಕುಮಾರ್ ಜೈನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

“ಗುಪ್ತಚರ ಮತ್ತು ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಭದ್ರತಾ ಸಂಸ್ಥೆಯ ನೌಕರರು ಮೂಲಭೂತ ಮತ್ತು ಕಾನೂನು ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಈ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರಿಗೆ ಯಾವುದೇ ಮಾನವ ಹಕ್ಕುಗಳು ಅನ್ವಯಿಸುವುದಿಲ್ಲ ಎಂದು ಹೇಳಿದಂತಾಗುತ್ತದೆ” ಎಂದು ತೀರ್ಪು ನುಡಿದಿದೆ.

ನೌಕರರು ಮತ್ತು ಅಧಿಕಾರಿಗಳು ತಮ್ಮ ಕುಂದುಕೊರತೆಗಳನ್ನು ವ್ಯವಸ್ಥಿತವಾಗಿ ತಿಳಿಸಲು ಅನುವು ಮಾಡಿಕೊಡುವ ಸಾಧನ ಆರ್‌ಟಿಐ ಕಾಯಿದೆ. ಪ್ರತಿ ಸಾರ್ವಜನಿಕ ಸಂಸ್ಥೆಯ ಕೆಲಸದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವ ಸಲುವಾಗಿ ಮಾಹಿತಿ ದೊರೆಯುವಂತೆ ಮಾಡುವುದು ಇದರ ಉದ್ದೇಶ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

“ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ ಎನ್ನಲಾಗುತ್ತದೆ. ಆರ್‌ಟಿಐ ಕಾಯಿದೆ ಈ ಪರಿಕಲ್ಪನೆಗೆ ಇಂಬು ನೀಡುತ್ತದೆ. ಪರಿಣಾಮವಾಗಿ ಸೇವೆ ಮತ್ತು ಆರ್‌ಟಿಐ ಕಾನೂನುಗಳೆರಡೂ ಸಮಾಜದಲ್ಲಿ ಸುರಕ್ಷಾ ಕವಾಟದಂತೆ ಕೆಲಸ ಮಾಡುತ್ತವೆ” ಎಂದು ನ್ಯಾಯಾಲಯ ವಿವರಿಸಿತು. ಅರ್ಜಿದಾರರು ಯಾವುದೇ ಗೌಪ್ಯ ಮಾಹಿತಿಯನ್ನು ಕೋರಿಲ್ಲ ಎನ್ನುವುದನ್ನು ನ್ಯಾಯಾಲಯ ಪರಿಗಣಿಸಿತು.

ಈ ಅವಲೋಕನಗಳೊಂದಿಗೆ ಆರ್‌ಟಿಐ ಕಾಯಿದೆಯಡಿ ಮಾಹಿತಿಗಾಗಿ ಬೇಡಿಕೆ ಸಲ್ಲಿಸಿರುವ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಅರ್ಜಿದಾರರಿಗೆ ಒದಗಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

1991ರಿಂದ ಇಲ್ಲಿಯವರೆಗೆ ಜಾರಿ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ ಕೆಳಹಂತದ ವಿಭಾಗೀಯ ಗುಮಾಸ್ತರ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದ ಮಾಹಿತಿ ಒದಗಿಸಲು ಇ ಡಿಗೆ ನಿರ್ದೇಶಿಸಿದ್ದ ಕೇಂದ್ರ ಮಾಹಿತಿ ಆಯೋಗದ ಆದೇಶ ತಡೆಯಲು ಹೈಕೋರ್ಟ್‌ ಏಕಸದಸ್ಯ ಪೀಠ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಇ ಡಿ ವಿಭಾಗೀಯ ಪೀಠದ ಮೊರೆ ಹೋಗಿತ್ತು.