ಪ್ರಧಾನಿ ಮೋದಿ ಬಳಸುವ ಟೆಲಿಪ್ರಾಂಪ್ಟರ್ ವಿವರ ಬಹಿರಂಗಪಡಿಸಿದ ಬೆಳಗಾವಿ ಮೂಲದ ವಕೀಲರ ಆರ್‌ಟಿಐ ಅರ್ಜಿ

ಪ್ರಧಾನಿ ಮೋದಿ ಬಳಸುವ ಟೆಲಿಪ್ರಾಂಪ್ಟರ್ ವಿವರ ಬಹಿರಂಗಪಡಿಸಿದ ಬೆಳಗಾವಿ ಮೂಲದ ವಕೀಲರ ಆರ್‌ಟಿಐ ಅರ್ಜಿ

ಇದಕ್ಕೆ ಪ್ರತಿಕ್ರಿಯಿಸಿರುವ ʼದೂರದರ್ಶನʼ ಮುಖ್ಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಅಖಿಲೇಶ್ ಕುಮಾರ್ ಶರ್ಮಾ ಪ್ರಧಾನಿ ಮೋದಿ ಅವರು ʼಆಟೊ ಸ್ಕ್ರಿಪ್ಟ್ʼ ಕಂಪೆನಿಯ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುವುದಾಗಿ ತಿಳಿಸಿದ್ದಾರೆ.
Published on

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಾರ್ವಜನಿಕ ಭಾಷಣದ ವೇಳೆ ಬಳಸುವ ಟೆಲಿಪ್ರಾಂಪ್ಟರ್‌ (ಭಾಷಣ ಓದಲು ಬಳಸುವ ಸಾಧನ) ಬಗ್ಗೆ ಬೆಳಗಾವಿಯ ವಕೀಲರೊಬ್ಬರು ಮಾಹಿತಿ ಹಕ್ಕು ಕಾಯಿದೆಯಡಿ ವಿವರ ಕೋರಿದ್ದು ಇದಕ್ಕೆ ದೂರದರ್ಶನದ ಅಧಿಕಾರಿಗಳಿಂದ ಉತ್ತರ ದೊರೆತಿದೆ.

ನವದೆಹಲಿಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ 21-10-2021ರಂದು ಪತ್ರ ಬರೆದಿದ್ದ ವಕೀಲ ಸುರೇಂದ್ರ ಉಗಾರೆ ಅವರು ಪ್ರಧಾನಿ ಮೋದಿಯವರ ಸಾರ್ವಜನಿಕ ಭಾಷಣಗಳಲ್ಲಿ ಬಳಸಲಾಗುವ ಟೆಲಿಪ್ರಾಂಪ್ಟರ್‌ ಸಾಧನ ತಯಾರಿಸಿರುವ ಕಂಪೆನಿಯ ಹೆಸರು, ಅದರ ನಿರ್ವಹಣಾ ವೆಚ್ಚದ ವಿವರವನ್ನು ಕೋರಿದ್ದರು. ಅಲ್ಲದೆ ಅದನ್ನು ಬಳಸಲು ನಿಯೋಜಿಸಲಾಗಿರುವ ಸಿಬ್ಬಂದಿ ಹಾಗೂ ಅವರ ಸಂಬಳ ಇತರೆ ವೆಚ್ಚಗಳ ಬಗ್ಗೆ ಮಾಹಿತಿ ನೀಡುವಂತೆಯೂ ಮನವಿ ಮಾಡಿದ್ದರು. ಸಾರ್ವಜನಿಕ ಹಿತಾಸಕ್ತಿ ಉದ್ದೇಶದಡಿ ವಿವರ ಕೇಳಿರುವುದಾಗಿ ವಕೀಲ ಉಗಾರೆ ಅರ್ಜಿಯಲ್ಲಿ ಹೇಳಿದ್ದರು. 2014ರಿಂದ ಈವರೆಗೆ ಬಳಸಲಾದ ಟೆಲಿಪ್ರಾಂಪ್ಟರ್‌ನ ವಿವರವನ್ನು ಒದಗಿಸುವಂತೆ ಅವರು ಕೋರಿದ್ದರು.

Also Read
ವರ್ಚುವಲ್, ಹೈಬ್ರಿಡ್ ವಿಧಾನದಲ್ಲಿ ಕಲಾಪ: ಸಿಜೆಐ, ಸುಪ್ರೀಂಕೋರ್ಟ್ ಇ- ಸಮಿತಿ ಅಧ್ಯಕ್ಷರಿಗೆ ಯುವ ವಕೀಲರ ಪತ್ರ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಸಾರ ಭಾರತಿ ʼದೂರದರ್ಶನʼ ವಿಭಾಗದ ಮುಖ್ಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಅಖಿಲೇಶ್‌ ಕುಮಾರ್‌ ಶರ್ಮಾ ಪ್ರಧಾನಿ ಮೋದಿ ಅವರು ʼಆಟೊ ಸ್ಕ್ರಿಪ್ಟ್‌ʼ ಕಂಪೆನಿಯ ಟೆಲಿಪ್ರಾಂಪ್ಟರ್‌ ಉಪಯೋಗಿಸುತ್ತಿರುವುದಾಗಿ ತಿಳಿಸಿದ್ದಾರೆ. “ದೆಹಲಿ ದೂರದರ್ಶನ ಕೇಂದ್ರದ ಮಾಹಿತಿ ತಂತ್ರಜ್ಞಾನ ನಿರ್ವಹಣಾ ವಿಭಾಗದ ಸಿಬ್ಬಂದಿಯನ್ನೇ ಟೆಲಿಪ್ರಾಂಪ್ಟರ್‌ ಸೇವೆ ಒದಗಿಸಲು ಬಳಸಿಕೊಳ್ಳಲಾಗುತ್ತಿದೆ. 7ನೇ ವೇತನ ಆಯೋಗದ ಪ್ರಕಾರ ಅವರಿಗೆ ವೇತನ ನೀಡಲಾಗುತ್ತಿದೆ” ಎಂದು ವಿವರಿಸಿದ್ದಾರೆ.

ಮಾಹಿತಿ ತೃಪ್ತಿಕರವಾಗಿಲ್ಲದೇ ಇದ್ದರೆ ಮಾಹಿತಿ ದೊರೆತ ಮೂವತ್ತು ದಿನಗಳ ಒಳಗಾಗಿ ಉಗಾರೆ ಅವರು ಮೇಲ್ಮನವಿ ಪ್ರಾಧಿಕಾರ/ ದೂರದರ್ಶನ ಸುದ್ದಿ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರಿಗೆ ಪ್ರಥಮ ಮೇಲ್ಮನವಿ ಸಲ್ಲಿಸಬಹುದು ಎಂದು ಕೂಡ ಶರ್ಮಾ ವಿವರಿಸಿದ್ದಾರೆ.

ಅರ್ಜಿ ಮತ್ತು ಅದಕ್ಕೆ ದೊರೆತ ಪ್ರತಿಕ್ರಿಯೆಯ ವಿವರಗಳನ್ನು ಇಲ್ಲಿ ಓದಿ:

Attachment
PDF
PM Modi RTI .pdf
Preview
Kannada Bar & Bench
kannada.barandbench.com