High Court of Jammu & Kashmir, Srinagar
High Court of Jammu & Kashmir, Srinagar  
ಸುದ್ದಿಗಳು

ಪರಿಹಾರ ಪಾವತಿಸದೆ ಖಾಸಗಿ ಆಸ್ತಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆ: ತೆರವಿಗೆ ಕಾಶ್ಮೀರ ಹೈಕೋರ್ಟ್ ಆದೇಶ

Bar & Bench

ಪರಿಹಾರ ಪಾವತಿಸದೇ, ಬಾಡಿಗೆಯನ್ನೂ ನೀಡದೆ ಖಾಸಗಿ ಜಮೀನಿನಲ್ಲಿ ಸ್ಥಾಪಿಸಲಾಗಿದ್ದ ಪೊಲೀಸ್‌ ಠಾಣೆಯನ್ನು ತೆರವುಗೊಳಿಸುವಂತೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ. [ಅಬ್ದುಲ್ ಅಹದ್ ಶೆರ್ಗೋಜ್ರಿ ಮತ್ತು ಜಮ್ಮು ಕಾಶ್ಮೀರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ರಾಜ್ಯ ಸರ್ಕಾರ ಪರಿಹಾರ ನೀಡಿ ಸ್ವಾಧೀನ ಪಡಿಸಿಕೊಳ್ಳದೆ ಖಾಸಗಿ ವ್ಯಕ್ತಿಗಳಿಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂವಿಧಾನದ 300 ಎ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ನ್ಯಾಯಮೂರ್ತಿ ಮೋಕ್ಷಾ ಖಜುರಿಯಾ ಕಜ್ಮಿ ಅವರಿದ್ದ ಪೀಠ ತಿಳಿಸಿದೆ.

ಕಾಶ್ಮೀರದ ಅಚಾಬಲ್‌ನಲ್ಲಿರುವ ಆಸ್ತಿಯೊಂದರ ಕಾನೂನುಬದ್ಧ ತಾವು ಒಡೆಯ. ಆದರೆ 2003ರಿಂದ ಈ ಜಮೀನು ರಾಜ್ಯ ಪೊಲೀಸರ ವಶದಲ್ಲಿದ್ದು ತಮಗೆ ಯಾವುದೇ ಬಾಡಿಗೆ ಅಥವಾ ಪರಿಹಾರ ನೀಡಿಲ್ಲ ಎಂದು ಅಬ್ದುಲ್ ಅಹದ್ ಶೇರ್ಗಿಜ್ರಿ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಪರಿಹಾರ ಅಥವಾ ಬಾಡಿಗೆ ಪಾವತಿಸುವಂತೆ ನ್ಯಾಯಾಲಯ ಈ ಹಿಂದೆಯೇ ಸೂಚಿಸಿದ್ದರೂ ಸರ್ಕಾರ ಸ್ಪಂದಿಸದಿದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆ ತೆರವುಗೊಳಿಸುವಂತೆ ಹೈಕೋರ್ಟ್‌ ಸೂಚಿಸಿದೆ. ಅಲ್ಲದೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು, ಇಲ್ಲವೇ ಸಕ್ಷಮ ಪ್ರಾಧಿಕಾರ ನಿಗದಿಪಡಿಸಿರುವ ಪರಿಹಾರ ಪಡೆಯಲು ಅರ್ಜಿದಾರರು ಪ್ರಕ್ರಿಯೆ ಆರಂಭಿಸಬಹುದು ಎಂದು ಕೂಡ ಅದು ಹೇಳಿದೆ.