Karnataka High Court 
ಸುದ್ದಿಗಳು

ಸಿಡಬ್ಲ್ಯುಸಿಗೆ ಮಕ್ಕಳನ್ನು ಒಪ್ಪಿಸುವುದಕ್ಕೆ ಸಂಬಂಧಿಸಿದ ನಿಯಮ ಸಿದ್ಧ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಲಿವ್‌-ಇನ್‌ ಸಂಬಂಧ ಹೊಂದಿದ್ದ ಜೋಡಿಯು 12 ದಿನಗಳ ಹಸುಗೂಸನ್ನು ಸಿಡಬ್ಲುಸಿಗೆ ಒಪ್ಪಿಸಿದ್ದರ ಕುರಿತಾದ ಮನವಿ ವಿಚಾರಣೆ ವೇಳೆ ನಿಯಮದ ಕುರಿತು ನಾಲ್ಕು ವಾರಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೀಠಕ್ಕೆ ತಿಳಿಸಲಾಗಿದೆ.

Bar & Bench

ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲುಸಿ) ಪೋಷಕರು ಮಕ್ಕಳನ್ನು ಒಪ್ಪಿಸುವುದಕ್ಕೆ ಸಂಬಂಧಿಸಿದಂತೆ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಅಡಿ ಸಮಿತಿಯು ತನಿಖೆ ಮತ್ತು ಕೌನ್ಸೆಲಿಂಗ್‌ಗೆ ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಲಿವ್‌-ಇನ್‌ ಸಂಬಂಧ ಹೊಂದಿದ್ದ ಜೋಡಿ ತಮ್ಮ 12 ದಿನಗಳ ಹಸುಗೂಸನ್ನು ಸಿಡಬ್ಲುಸಿಗೆ ಒಪ್ಪಿಸಿದ್ದರ ಕುರಿತಾದ ಮಾಧ್ಯಮ ವರದಿ ಆಧರಿಸಿ ಸರ್ಕಾರೇತರ ಸಂಸ್ಥೆ ಲೆಟ್ಜ್‌ಕಿಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ನಿಯಮದ ಕುರಿತು ಇನ್ನು ನಾಲ್ಕು ವಾರಗಳಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದಲ್ಲದೇ, ನ್ಯಾಯಾಲಯದ ಆದೇಶವನ್ನು ಎಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಪೀಠಕ್ಕೆ ಸರ್ಕಾರ ತಿಳಿಸಿತು.

ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಸೆಕ್ಷನ್‌ 110(2) ರ ಅಡಿ ನಿಯಮ ರೂಪಿಸುವ ಅಧಿಕಾರ ಚಲಾಯಿಸಿ ನಿಯಮ ರೂಪಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಆಗಸ್ಟ್‌ 19ರ ಆದೇಶದಲ್ಲಿ ನಿರ್ದೇಶಿಸಿತ್ತು.

“ಪೋಷಕರ ಗುರುತು ಮತ್ತು ಪೋಷಕರು ಮಗುವಿನ ಜೈವಿಕ ಪೋಷಕರಾಗಿದ್ದಾರೆಯೇ ಎಂದು ಕಂಡುಹಿಡಿಯಲು ಸಿಡಬ್ಲುಸಿ ವಿಚಾರಣೆ ನಡೆಸಬೇಕು. ಪೋಷಕರು ಮಕ್ಕಳನ್ನು ಒಪ್ಪಿಸಲು ದೈಹಿಕ, ಭಾವನಾತ್ಮಕ ಅಥವಾ ಸಾಮಾಜಿಕ ಅಂಶ ಕಾರಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಡಬ್ಲುಸಿ ಎರಡನೇ ವಿಚಾರಣೆ ನಡೆಸಬೇಕು” ಎಂದು ನ್ಯಾಯಾಲಯ ಹೇಳಿತ್ತು.

“ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಂಶಗಳನ್ನು ನೇರವಾದ ರೀತಿಯಲ್ಲಿ ಕಾಣಲಾಗದು. ಈ ಅಂಶಗಳು ಒಂದು ಪ್ರಕರಣದಿಂದ ಮತ್ತೊಂದು ಪ್ರಕರಣಕ್ಕೆ ಭಿನ್ನವಾಗಿರುತ್ತವೆ. ಪೋಷಕರು ಮಕ್ಕಳನ್ನು ಒಪ್ಪಿಸುವ ಕ್ರಮವು ಗಂಭೀರವಾಗಿದ್ದು, ಇದು ಮಗುವಿನ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಅತ್ಯಂತ ಸೂಕ್ಷ್ಮವಾಗಿ ಸಿಡಬ್ಲುಸಿ ವಿಚಾರಣೆ ನಡೆಸಬೇಕಿದೆ” ಎಂದಿತ್ತು.

ಲಿವ್‌-ಇನ್‌ ಸಂಬಂಧದಲ್ಲಿದ್ದ ಜೋಡಿಯು 12 ದಿನಗಳ ಹಸುಗೂಸನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದೆ ಎಂಬ ಮಾಧ್ಯಮ ವರದಿಯ ಕುರಿತು ಲೆಟ್ಜ್‌ಕಿಟ್‌ ಫೌಂಡೇಶನ್‌ ನ್ಯಾಯಾಲಯದ ಗಮನ ಸೆಳೆದಿತ್ತು. ಲಿವ್‌ ಇನ್‌ ಸಂಬಂಧದಲ್ಲಿದ್ದ ಜೋಡಿಯು ಮಗುವನ್ನು ಬಿಟ್ಟು ಹೋಗುತ್ತಿರುವ ವಿಚಾರವನ್ನು ನೆರೆಹೊರೆಯವರು ಮಕ್ಕಳ ಕಲ್ಯಾಣ ಸಮಿತಿ ಮತ್ತು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದರು. ಅರ್ಜಿದಾರರಿಗೆ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಬಗ್ಗೆ ತಿಳಿದಿರಲಿಲ್ಲ. ಮಗುವನ್ನು ತ್ಯಜಿಸಿದ್ದ ಜೋಡಿಗೆ ಹಸುಗೂಸನ್ನು ಮರಳಿಸುವ ಸಂಬಂಧ ಎರಡನೇ ಪ್ರತಿವಾದಿಯಾದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿತ್ತು.

ಮಗುವಿನ ಪೋಷಕರು ಸೆಕ್ಷನ್‌ 35(1) ರ ಅಡಿ ಮನವಿ ಸಲ್ಲಿಸಿದ್ದು, ಮೇ 19ರಂದು ಮಗುವನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಬಾಲ ನ್ಯಾಯ ಕಾಯಿದೆ ಉಪ ಸೆಕ್ಷನ್ 1 ಮತ್ತು 2ರ ಅಡಿ ದೊರೆತಿರುವ ಅಧಿಕಾರದ ಅಡಿ ಮಕ್ಕಳ ಕಲ್ಯಾಣ ಸಮಿತಿ ಆದೇಶ ಮಾಡಿತ್ತು ಎಂಬುದು ನ್ಯಾಯಾಲಯ ನೋಟಿಸ್‌ ನೀಡಿದ್ದ ಬಳಿಕ ತಿಳಿದು ಬಂದಿತ್ತು.