ಸುದ್ದಿಗಳು

ಅನುಕಂಪ ಆಧಾರಿತ ಉದ್ಯೋಗಿಗಳು ಸಮಾನ ವೇತನಕ್ಕೆ ಅರ್ಹರು: ಸುಪ್ರೀಂಕೋರ್ಟ್

Bar & Bench

ಅನುಕಂಪದ ಆಧಾರದ ಮೇಲೆ ನಿರ್ದಿಷ್ಟ ಹುದ್ದೆಗೆ ನೇಮಕಗೊಂಡ ವ್ಯಕ್ತಿಯು ಆ ಹುದ್ದೆಗೆ ನೇಮಕಗೊಳ್ಳುವ ಯಾವುದೇ ಸಾಮಾನ್ಯ ಉದ್ಯೋಗಿಯಂತೆ ಸಮಾನ ವೇತನ ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತಿಳಿಸಿದೆ (ಉತ್ತರ ಪ್ರದೇಶ ಸರ್ಕಾರ ಹಾಗೂ ಇನ್ನಿತರರು ಮತ್ತು ಐಶ್ವರ್ಯ ಪಾಂಡೆ ನಡುವಣ ಪ್ರಕರಣ).

ಸಾಮಾನ್ಯ ನೌಕರರು ಮತ್ತು ಅನುಕಂಪದ ಆಧಾರದ ಮೇಲೆ ನೇಮಕಗೊಂಡ ನೌಕರರ ವೇತನ ಶ್ರೇಣಿಯಲ್ಲಿ ಯಾವುದೇ ವ್ಯತ್ಯಾಸ ಇರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿದೆ.

“ಅನುಕಂಪದ ಆಧಾರದ ಮೇಲೆ ನೇಮಕಾತಿಯಾಗಿದ್ದರೂ ಕೂಡ ಒಬ್ಬ ವ್ಯಕ್ತಿಯನ್ನು ನಿರ್ದಿಷ್ಟ ಹುದ್ದೆಗೆ ಒಮ್ಮೆ ನೇಮಿಸಿದರೆ, ಆ ಹುದ್ದೆಯ ವೇತನ ಶ್ರೇಣಿಗೆ ಆ ವ್ಯಕ್ತಿ ಅರ್ಹ” ಎಂದು ನ್ಯಾಯಾಲಯ ಹೇಳಿದೆ.

ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಪ್ರತಿವಾದಿ ಐಶ್ವರ್ಯ ಪಾಂಡೆ ಅವರ ಅರ್ಜಿಯನ್ನು ಪುರಸ್ಕರಿಸಿ ಅವರಿಗೆ ನಿಯಮಿತ ರೀತಿಯಲ್ಲಿ ವೇತನ ನೀಡುವಂತೆ ಅಲಾಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಪ್ರತಿವಾದಿಯನ್ನು ಹೆಚ್ಚುವರಿ ಹುದ್ದೆಗೆ ನೇಮಕ ಮಾಡಲಾಗಿದ್ದು, ಅನುಕಂಪದ ಆಧಾರದ ಮೇಲೆ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಲು ಸಾಧ್ಯವಿಲ್ಲ. ಅದನ್ನು ಮಾಡಬೇಕಿರುವುದು ಲೋಕಸೇವಾ ಆಯೋಗ ಎಂದು ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಎಸ್‌ ಆರ್‌ ಸಿಂಗ್‌ ವಾದ ಮಂಡಿಸಿದರು. ಈ ವಾದವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್‌ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಗೆ ಪ್ರತಿವಾದಿಯನ್ನು ನೇಮಕ ಮಾಡಿರುವುದು ಸರ್ಕಾರವೇ ಆಗಿದೆ ಎಂದು ಹೇಳಿತು.

ಅಂತಹ ಉದ್ಯೋಗಿಗಳಿಗೆ ಈ ಹಿಂದೆಯೂ ಇದೇ ರೀತಿಯ ಪ್ರಯೋಜನಗಳನ್ನು ನೀಡಲಾಗಿದೆ ಎಂದು ತಿಳಿಸಿದ ನ್ಯಾಯಾಲಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿತಲ್ಲದೆ ಇನ್ನೆರಡು ವಾರಗಳ ಒಳಗೆ ತನ್ನ ಆದೇಶ ಜಾರಿಗೊಳಿಸುವಂತೆ ಸೂಚಿಸಿತು.

ಆದೇಶವನ್ನು ಇಲ್ಲಿ ಓದಿ:

State_of_Uttar_Pradesh_and_Another_v__Aishwarya_Pandey.pdf
Preview