<div class="paragraphs"><p>Supreme Court</p></div>

Supreme Court

 
ಸುದ್ದಿಗಳು

[ರಷ್ಯಾ- ಯುಕ್ರೇನ್ ಸಮರ] ದೇಶಕ್ಕೆ ಮರಳಿದ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರದಿಂದ ಪರಿಶೀಲನೆ: ಸುಪ್ರೀಂಗೆ ಎಜಿ

Bar & Bench

ಯುಕ್ರೇನ್‌ನಿಂದ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಗಿದೆ ಎಂಬ ಅಂಶವನ್ನು ಗಮನಿಸಿದ ಸುಪ್ರೀಂ ಕೋರ್ಟ್‌ ಯುದ್ಧ ಪೀಡಿತ ದೇಶದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಕೋರಿದ್ದ ಮನವಿಯನ್ನು ಸೋಮವಾರ ವಿಲೇವಾರಿ ಮಾಡಿದೆ.

ಇದೇ ವೇಳೆ ದೇಶಕ್ಕೆ ಮರಳಿದ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಪರಿಶೀಲನೆ ನಡೆಸುತ್ತಿದೆ ಎಂದು ಅಡ್ವೊಕೇಟ್‌ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ತಿಳಿಸಿದರು.

"ಅಧ್ಯಯನಗಳಿಗೆ ಧಕ್ಕೆಯಾಗದಂತೆಮಾಡಿರುವ ಮನವಿಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಎಜಿ ಭರವಸೆ ನೀಡಿದ್ದಾರೆ. ಈ ಕಾರಣಕ್ಕೆ ಮನವಿಯಲ್ಲಿ ಏನೂ ಉಳಿದಿಲ್ಲ ಹೀಗಾಗಿ ಅರ್ಜಿಯನ್ನು ವಿಲೇವಾರಿ ಮಾಡಲಾಗುತ್ತಿದೆ" ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಖುದ್ದು ಅರ್ಜಿ ಸಲ್ಲಿಸಿದ್ದ ವಕೀಲ ವಿಶಾಲ್‌ ತಿವಾರಿ ಅವರು ವಿಚಾರಣೆ ವೇಳೆ ಯುಕ್ರೇನ್‌ನಿಂದ ಸ್ಥಳಾಂತರಗೊಂಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಅಡ್ಡಿಯಾಗಬಾರದು ಮತ್ತು ಅವರ ವಿದ್ಯಾಭ್ಯಾಸ ಭಾರತದಲ್ಲಿ ಮುಂದುವರೆಯಬೇಕು ಎಂದು ಕೋರಿದರು. ಆಗ ಎಜಿ ಅವರು ದೇಶಕ್ಕೆ ಮರಳಿದ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಪರಿಶೀಲಿಸುತ್ತಿದೆ ಎಂದರು. "ದೇಶೀಯರು ಹಾಗೂ ಇತರ ದೇಶಗಳ 22,500 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಆ ಮೂಲಕ ಒಂದು ಬೃಹತ್ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ" ಎಂದು ಅವರು ಇದೇ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಈ ಹಿಂದಿನ ವಿಚಾರಣೆ ವೇಳೆ ಯುದ್ಧವನ್ನು ತಡೆಯುವ ಬಗ್ಗೆ ತಾನು ಹೇಗೆ ನಿರ್ದೇಶನ ನೀಡಬಹುದು ಎನ್ನುವ ಬಗ್ಗೆ ಆಲೋಚನೆಗೀಡಾಗಿದ್ದ ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಅಟಾರ್ನಿ ಜನರಲ್‌ ಅವರ ನೆರವು ಕೇಳಿತ್ತು.

ನಂತರ ಪ್ರಕರಣವನ್ನು ಕೈಗೆತ್ತಿಕೊಂಡಾಗ ಎಜಿ ವೇಣುಗೋಪಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಯುಕ್ರೇನ್‌ ಮತ್ತು ರಷ್ಯಾದೊಂದಿಗೆ ಮಾತನಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಯುಕ್ರೇನ್‌ ಗಡಿ ದಾಟಿದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಸಚಿವರನ್ನು ಕಳುಹಿಸಿದೆ ಎಂದು ಅವರು ಹೇಳಿದ್ದರು.