Sabarimala Temple
Sabarimala Temple 
ಸುದ್ದಿಗಳು

ಶಬರಿಮಲೆಯಲ್ಲಿ ಹಲಾಲ್‌ ಬೆಲ್ಲ ಬಳಕೆ ಪ್ರಕರಣ: ಆಹಾರ ಮತ್ತು ಭದ್ರತಾ ಇಲಾಖೆ ಪ್ರತಿಕ್ರಿಯೆ ಬಯಸಿದ ಕೇರಳ ಹೈಕೋರ್ಟ್‌

Bar & Bench

ಶಬರಿಮಲೆ ದೇವಸ್ಥಾನದಲ್ಲಿ ಅವಧಿ ಮುಗಿದ ಮತ್ತು ಇಸ್ಲಾಂ ಧರ್ಮಕ್ಕನುಗುಣವಾಗಿ ಹಲಾಲ್‌ ಮಾಡಲಾದ ಬೆಲ್ಲ ಬಳಸಿ ನೈವೇದ್ಯ ಅಥವಾ ಪ್ರಸಾದ ತಯಾರಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಭದ್ರತಾ ಇಲಾಖೆಯ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೋಮವಾರ ಕೇರಳ ಹೈಕೋರ್ಟ್‌ ನಿರ್ದೇಶಿಸಿದೆ.

ಶಬರಿಮಲೆ ಕರ್ಮ ಸಮಿತಿಯ ಸಂಚಾಲಕರು ಅಶುದ್ಧವಾದ ಹಲಾಲ್‌ ಬೆಲ್ಲ ಬಳಕೆ ನಿಷಿದ್ಧಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನಿಲ್‌ ಕೆ ನರೇಂದ್ರನ್‌ ಮತ್ತು ಪಿ ಜಿ ಅಜಿತ್‌ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಕೊಳೆತ ಮತ್ತು ಹಲಾಲ್‌ ಪ್ರಮಾಣಿತ ಬೆಲ್ಲ ಬಳಸಿ ನೈವೇದ್ಯ ಅಥವಾ ಪ್ರಸಾದ ತಯಾರಿಸುವುದಕ್ಕೆ ಸಂಬಂಧಿಸಿದಂತೆ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರ (ತಂತ್ರಿ) ಅಭಿಪ್ರಾಯ ಪಡೆಯುವ ಕುರಿತು ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲಾಗುವುದು ಎಂದು ಪೀಠ ಹೇಳಿದೆ. ಅವಧಿ ಮುಗಿದ ಬೆಲ್ಲ ಬಳಕೆಯು ಎರಡು ರೀತಿಯಲ್ಲಿ ಕಾನೂನುಬಾಹಿರ ಎಂದು ಮನವಿಯಲ್ಲಿ ಹೇಳಲಾಗಿದೆ.

  • ಪ್ರಸಾದ ತಯಾರಿಸಲು ಕಲುಷಿತ ಪದಾರ್ಥ ಬಳಕೆಯು ಮುಗ್ಧ ಭಕ್ತರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

  • ಹಲಾಲ್ ಪ್ರಮಾಣೀಕೃತ ಬೆಲ್ಲವನ್ನು ಮತ್ತೊಂದು ಧರ್ಮದ ಧಾರ್ಮಿಕ ಆಚರಣೆಗಳ ಪ್ರಕಾರ ತಯಾರಿಸಲಾಗುತ್ತದೆ. ಅದನ್ನು ದೇವರಿಗೆ ಅರ್ಪಿಸುವುದು ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ಅನುಸರಿಸುತ್ತಿರುವ ಧಾರ್ಮಿಕ ಪದ್ಧತಿ ಮತ್ತು ಆಚರಣೆಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

ಕಳೆದ ವಿಚಾರಣೆಯ ಸಂದರ್ಭದಲ್ಲಿ 2019-2020ರಲ್ಲಿ ಕೋವಿಡ್‌ನಿಂದ ಬಳಕೆಯಾಗದ ಬೆಲ್ಲವನ್ನು ಜಾನುವಾರಗಳಿಗೆ ಆಹಾರ ತಯಾರಿಕೆಗಾಗಿ ಹರಾಜು ಹಾಕಲಾಗಿದೆ ಎಂದು ಸರ್ಕಾರವು ತಿಳಿಸಿತ್ತು. ನೈವೇದ್ಯ ತಯಾರಿಸುವುದಕ್ಕೂ ಮುನ್ನ ಮತ್ತು ಆನಂತರ ದೇವಸ್ಥಾನದಲ್ಲಿ ಅನುಸರಿಸಲಾಗುತ್ತಿರುವ ಗುಣಾತ್ಮಕ ನಿಯಂತ್ರಣ ವ್ಯವಸ್ಥೆಯನ್ನು ರಾಜ್ಯ ಸರ್ಕಾರವು ಅಫಿಡವಿಟ್‌ನಲ್ಲಿ ವಿವರಿಸಿತ್ತು.

ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ರಫ್ತು ಮಾಡಲು ಹಲಾಲ್‌ ಪ್ರಮಾಣೀಕೃತ ಸರ್ಟಿಫಿಕೇಟ್‌ ಅಗತ್ಯವಾಗಿದೆ. ಅಂತಹ ಪ್ರಮಾಣೀಕೃತ ಸರ್ಟಿಫಿಕೇಟ್‌ ಅನ್ನು ಬೆಲ್ಲ ಉತ್ಪಾದಿಸುವ ಕಂಪೆನಿಯು ತನ್ನ ಬೆಲ್ಲದ ಪ್ಯಾಕೇಜ್‌ಗಳಲ್ಲಿ ಪ್ರದರ್ಶಿಸಿದ್ದು ಇದೇ ಕಂಪೆನಿಯು ದೇವಸ್ಥಾನಕ್ಕೂ ಬೆಲ್ಲವನ್ನು ಪೂರೈಸುತ್ತದೆ ಎಂದು ಸರ್ಕಾರವು ಹೇಳಿದೆ.

ಹಳೆಯ ಮತ್ತು ಅಶುದ್ಧ ಬೆಲ್ಲವನ್ನು ಜಾನುವಾರುಗಳ ಮೇವು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಗೆ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ ಎಂಬ ವಾದವು ವಿಶ್ವಾಸಾರ್ಹವಲ್ಲ. ಏಕೆಂದರೆ ಅದನ್ನು ಹರಾಜು ಮಾಡಿದ ಕಂಪೆನಿಯು ಹೋಟೆಲ್ ಮತ್ತು ರೆಸ್ಟೋರೆಂಟ್ ವ್ಯವಹಾರದಲ್ಲಿದೆ ಎಂದು ಅರ್ಜಿದಾರರು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

“ಅರಬ್ ರಾಷ್ಟ್ರಗಳಿಗೆ ರಫ್ತು ಮಾಡಲು ಹಲಾಲ್ ಪ್ರಮಾಣ ಪತ್ರದ ಅವಶ್ಯಕತೆಯಿದೆ. ಇದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ ಅಡಿಯಲ್ಲಿ ಗುಣಮಟ್ಟದ ಮಾನದಂಡಗಳಿಂದ ಪ್ರತ್ಯೇಕಿಸುವ ಕೆಲವು ಗುಣಲಕ್ಷಣಗಳನ್ನು ತೋರಿಸುತ್ತದೆ” ಎಂದು ಹೇಳಲಾಗಿದೆ.

ಪ್ರಧಾನ ಅರ್ಚಕರ ಬಗ್ಗೆ ವಿಶ್ವಾಸ ಹೆಚ್ಚಿರುವ ಹಿನ್ನೆಲೆಯಲ್ಲಿ “ಅಯ್ಯಪ್ಪ ದೇವರಿಗೆ ನೈವೇದ್ಯ ತಯಾರಿಸಲು ಹಲಾಲ್ ಬೆಲ್ಲವನ್ನು ಬಳಸುವ ಔಚಿತ್ಯ ಮತ್ತು ದೇವಾಲಯದಲ್ಲಿ ಅಗತ್ಯವಿರುವ ಪರಿಹಾರ ಕ್ರಮಗಳ ಕುರಿತು ಅವರನ್ನು ಕೇಳಬೇಕು. ಇಲ್ಲವಾದಲ್ಲಿ ಇದು ಅರ್ಜಿದಾರರು ಮತ್ತು ಅಯ್ಯಪ್ಪನ ಭಕ್ತರಲ್ಲಿ ಗಂಭೀರ ಪೂರ್ವಾಗ್ರಹಕ್ಕೆ ಕಾರಣವಾಗಲಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪ್ರಕರಣದ ವಿಚಾರಣೆಯನ್ನು ನವೆಂಬರ್‌ 24ಕ್ಕೆ ಮುಂದೂಡಲಾಗಿದೆ.