Justice Indu Malhotra, Supreme Court
Justice Indu Malhotra, Supreme Court 
ಸುದ್ದಿಗಳು

65 ವರ್ಷಕ್ಕೆ ನ್ಯಾಯಮೂರ್ತಿಗಳ ನಿವೃತ್ತಿ ಬೇಸರದ ಸಂಗತಿ: ನ್ಯಾ. ಮಲ್ಹೋತ್ರಾ ನಿವೃತ್ತಿಗೆ ವೇಣುಗೋಪಾಲ್‌ ಪ್ರತಿಕ್ರಿಯೆ

Bar & Bench

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರ ನಿವೃತ್ತಿಯ ಸಂದರ್ಭದಲ್ಲಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ನ್ಯಾಯಮೂರ್ತಿಗಳ ನಿವೃತ್ತಿಯ ಕುರಿತಾದ ಪುಟ್ಟ ಚರ್ಚೆಗೆ ನಾಂದಿ ಹಾಡಿದ್ದಾರೆ.

ಕಾನೂನು ಕ್ಷೇತ್ರದಲ್ಲಿನ ನ್ಯಾ. ಮಲ್ಹೋತ್ರಾ ತಿಳಿವಳಿಕೆಗೆ ಮೆಚ್ಚುಗೆ ಸೂಚಿಸಿರುವ ಅಟಾರ್ನಿ ಜನರಲ್‌ ಅವರು “ಇಂದೂ ಮಲ್ಹೋತ್ರಾ ಅವರು ಅತ್ಯುತ್ತಮ ನ್ಯಾಯಮೂರ್ತಿಗಳಲ್ಲಿ ಒಬ್ಬರು. 65 ವರ್ಷಕ್ಕೆ ನ್ಯಾಯಮೂರ್ತಿಗಳ ನಿವೃತ್ತಿ ಹೊಂದುವುದು ಬೇಸರದ ಸಂಗತಿಯಾಗಿದೆ. ಪರಿಷತ್ತಿನ (ವಕೀಲ) ಸದಸ್ಯರಾದ ನಮಗೆ ನ್ಯಾ. ಮಲ್ಹೋತ್ರಾ ಅವರು ನಿವೃತ್ತಿ ಹೊಂದುತ್ತಿರುವುದು ಬೇಸರ ತರಿಸುವಂಥದ್ದು” ಎಂದು ಸಾಂದರ್ಭಿಕವಾಗಿ ಹೇಳಿದರು.

ಇದಕ್ಕೆ ಸಹಮತ ಸೂಚಿಸಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ನಿವೃತ್ತಿ ಹೊಂದುವಷ್ಟು ವಯಸ್ಸು ಅವರಿಗೆ ಆಗಿಲ್ಲ. ಆಕೆ ಇನ್ನೂ ಚಿಕ್ಕವರು. ನ್ಯಾ. ಮಲ್ಹೋತ್ರಾ ಅವರನ್ನು ನಾನು ಮತ್ತೊಮ್ಮೆ ವಕೀಲರ ಪರಿಷತ್‌ಗೆ ಆಹ್ವಾನಿಸುತ್ತೇನೆ. ಇಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ನಡೆಸಬಹುದು” ಎಂದರು.

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ (ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು “65ನೇ ವಯಸ್ಸಿಗೆ ನ್ಯಾಯಮೂರ್ತಿಗಳು ತಮ್ಮ ವೃತ್ತಿ ಬದುಕಿನ ತುತ್ತತುದಿಯಲ್ಲಿರುತ್ತಾರೆ. ಹೀಗಿರುವಾಗ ನಿವೃತ್ತಿ ಹೊಂದುವುದರಲ್ಲಿ ಅರ್ಥವೇ ಇಲ್ಲ. ನಿವೃತ್ತಿ ವಯಸ್ಸನ್ನು 70ಕ್ಕೆ ಏರಿಸಬೇಕು. ಕೊನೆಯ ದಿನವೂ ಅವರು ಎಲ್ಲ ದಾಖಲೆಗಳನ್ನು ಓದಿದ್ದು, ಪ್ರಕರಣಗಳ ಕುರಿತು ಚರ್ಚಿಸಿದ್ದಾರೆ. ಮತ್ತೊಬ್ಬರು ಮಹಿಳಾ ನ್ಯಾಯಮೂರ್ತಿಯನ್ನು ನೇಮಿಸಬೇಕಿದ್ದು, ಮಲ್ಹೋತ್ರಾ ಅವರು ಮಾದರಿಯಾಗಿದ್ದಾರೆ‌” ಎಂದರು.

ಶಬರಿಮಲೈ ಪ್ರಕರಣದಲ್ಲಿ ನ್ಯಾ. ಮಲ್ಹೋತ್ರಾ ಅವರ ಭಿನ್ನಮತದ ತೀರ್ಪನ್ನು ಉಲ್ಲೇಖಿಸಿರುವ ಎ ಜಿ ವೇಣುಗೋಪಾಲ್‌ ಅವರು “ವಿಶೇಷವಾಗಿ ಶಬರಿಮಲೈ ಪ್ರಕರಣದಲ್ಲಿ ಅವರು ಸಾಂವಿಧಾನಿಕ ನೈತಿಕತೆಯ ಸ್ಥಾನವನ್ನು ಪ್ರತಿಪಾದಿಸಿದರು” ಎಂದರು.

ವೃತ್ತಿ ಬದುಕಿನ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಪೀಠದಲ್ಲಿ ನ್ಯಾ. ಮಲ್ಹೋತ್ರಾ ಕುಳಿತು ಪ್ರಕರಣಗಳ ವಿಚಾರಣೆ ನಡೆಸಿದರು. ನ್ಯಾ. ಮಲ್ಹೋತ್ರಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಜೆಐ ಬೊಬ್ಡೆ ಅವರು ತಾವು ಈ ರೀತಿಯ “ಶಿಷ್ಟಾಚಾರ ಪೀಠದ ಸಂಪ್ರದಾಯದ ಮೌಲ್ಯವನ್ನು ಅರ್ಥಮಾಡಿಕೊಂಡಿರುವುದಾಗಿ” ಹೇಳಿದರು.

“ಕೊನೆಯ ಬಾರಿಗೆ ನನ್ನ ನೇತೃತ್ವದ ಪೀಠದ ಮುಂದೆ ಮಲ್ಹೋತ್ರಾ ಅವರು ವಾದಿಸಿದ್ದರು… ನಾವು ಆಲಿಸಿದ್ದರೂ ಸಹ ಅವರು ವಿರಮಿಸಲು ಸಿದ್ಧರಿರಲಿಲ್ಲ. ತಾನು ಅಧ್ಯಯನ ಮಾಡಿದ್ದೆಲ್ಲವನ್ನೂ ಹೇಳುವವರೆಗೂ ಅವರು ವಾದ ನಿಲ್ಲಿಸುವುದಿಲ್ಲ ಎಂಬುದು ನನಗೆ ತಿಳಿದಿದೆ. ಅಷ್ಟರ ಮಟ್ಟಿಗೆ ಅವರು ಸಿದ್ಧತೆ ನಡೆಸುತ್ತಾರೆ. ಅವರಿಗಿಂತ ಉತ್ತಮ ನ್ಯಾಯಮೂರ್ತಿ ಬಗ್ಗೆ ನನಗೆ ತಿಳಿದಿಲ್ಲ. ಕೆಲವು ಪ್ರಮುಖ ಪ್ರಕರಣಗಳಲ್ಲಿ ಆಕೆಯ ಜೊತೆ ನಾನು ಪೀಠ ಹಂಚಿಕೊಂಡಿದ್ದೇನೆ” ಎಂದರು. ನ್ಯಾಯಮೂರ್ತಿ ಮಲ್ಹೋತ್ರಾ ಅವರ ಸದ್ಗುಣಗಳನ್ನು ಉಲ್ಲೇಖಿಸಿದ ಸಿಜೆಐ ಅವರು ಆದರ್ಶಪ್ರಾಯವಾಗಿದ್ದಾರೆ ಎಂದು ಶ್ಲಾಘಿಸಿದರು.

“ನ್ಯಾ. ಇಂದೂ ಮಲ್ಹೋತ್ರಾ ಅವರ ಜೊತೆ ನನ್ನ ವಕೀಲೆ ಪುತ್ರಿ ಕೆಲಸ ಮಾಡಿದ್ದಾರೆ. ಆಕೆ ನನಗೆ ಇಂದೂ ಅವರ ಬಗ್ಗೆ ವಿಶೇಷವಾದ ಸಂಗತಿಯನ್ನು ಹೇಳಿದ್ದರು. ನಾನು ನಂತರ ನ್ಯಾ. ಮಲ್ಹೋತ್ರಾ ಅವರನ್ನು ಆಲಿಸಿದಾಗ ಅವರು ಸಹ ಅದೇ ಅಂಶವನ್ನು ಹೇಳಿದರು. ಅದುವೇ ಆದರ್ಶದ ಸಂಕೇತ” ಎಂದು ಸಿಜೆಐ ಬೊಬ್ಡೆ ಹೇಳಿದರು.

“ನ್ಯಾ. ಮಲ್ಹೋತ್ರಾ ಅವರ ತೀರ್ಪುಗಳು ಜ್ಞಾನ, ವಿವೇಚನೆ ಮತ್ತು ದೃಢತೆಯಿಂದ ತುಂಬಿವೆ. ಅವರ ನ್ಯಾಯಿಕ ಕುಶಾಗ್ರಮತಿತ್ವದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಅವರು ಪರಿಷತ್ತಿಗೆ (ಬಾರ್‌) ಹೋಗುತ್ತಿಲ್ಲ. ನಮ್ಮೊಂದಿಗೆ ಉಳಿಯಲಿದ್ದಾರೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಇಂದೂ ಮಲ್ಹೋತ್ರಾ ಅವರು “ಸುಪ್ರೀಂ ಕೋರ್ಟ್‌ ಪೀಠದ ಭಾಗವಾಗಿರುವುದು ನನ್ನ ಪಾಲಿನ ಭಾಗ್ಯ. ಸುಪ್ರೀಂ ಕೋರ್ಟ್ ನ್ಯಾಯಿಕ‌ ವ್ಯಾಪ್ತಿಗೆ ನನ್ನ ಕಿರುಕಾಣಿಕೆ ಸಲ್ಲಿಸಿದ್ದೇನೆ. ಇದೇ ನನ್ನ ಸಂದೇಶ” ಎಂದರು.

ನ್ಯಾ. ಮಲ್ಹೋತ್ರಾ ನಿವೃತ್ತಿ ಹೊಂದುವುದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಉಳಿದಿರುವ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರಾಗಿದ್ದಾರೆ. ನ್ಯಾ. ಮಲ್ಹೋತ್ರಾ ಅವರಿಗೆ ಸುಪ್ರೀಂ ಕೋರ್ಟ್‌ ಹುಲ್ಲುಹಾಸಿನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಶುಕ್ರವಾರ ಸಂಜೆ ನೀಡಲಾಯಿತು.