ನಿವೃತ್ತ ಸಿಜೆಐ ಗೊಗೊಯ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅನುಮತಿ ನಿರಾಕರಿಸಿದ ಎಜಿ ಕೆ ಕೆ ವೇಣುಗೋಪಾಲ್

“ನ್ಯಾ. ಗೊಗೊಯ್ ಅವರ ಹೇಳಿಕೆ ತೀಕ್ಷ್ಣವಾಗಿದ್ದು ನ್ಯಾಯಾಂಗ ಅವ್ಯವಸ್ಥೆ ಬಗ್ಗೆ ಹತಾಶೆ ವ್ಯಕ್ತಪಡಿಸಿದರೂ ಅದನ್ನು ಸಂಸ್ಥೆಯ ಒಳಿತಿಗಾಗಿ ಹೇಳಲಾಗಿದ್ದು ನ್ಯಾಯಾಂಗವನ್ನು ಅಪಮಾನಕ್ಕೀಡು ಮಾಡುವುದಿಲ್ಲ” ಎಂದು ಎಜಿ ಅಭಿಪ್ರಾಯಪಟ್ಟಿದ್ದಾರೆ.
Ranjan Gogoi and K K Venugopal
Ranjan Gogoi and K K Venugopal
Published on

ನ್ಯಾಯಾಂಗ ಮತ್ತು ಸುಪ್ರೀಂಕೋರ್ಟ್‌ ವಿರುದ್ಧದ ಹೇಳಿಕೆಗಳಿಗಾಗಿ ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವ ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಗೋಖಲೆ ಅವರ ಕೋರಿಕೆಯನ್ನು ಸುಪ್ರೀಂಕೋರ್ಟ್‌ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಲ್‌ ತಳ್ಳಿಹಾಕಿದ್ದಾರೆ.

“ಭಾರತೀಯ ನ್ಯಾಯಾಂಗ ವ್ಯವಸ್ಥೆ ಶಿಥಿಲವಾಗಿದ್ದು ಸೂಕ್ತ ಸಮಯಕ್ಕೆ ನ್ಯಾಯಾಲಯಗಳಿಂದ ತೀರ್ಪು ದೊರೆಯುವ ಸಾಧ್ಯತೆಗಳಿಲ್ಲ” ಎಂದು ಇಂಡಿಯಾ ಟುಡೇ ಕಾರ್ಯಕ್ರಮವೊಂದರಲ್ಲಿ ಗೊಗೊಯ್‌ ಹೇಳಿದ್ದರು. ನ್ಯಾ. ಗೊಗೊಯ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಗೋಖಲೆ ಫೆಬ್ರವರಿ 23 ರಂದು ವೇಣುಗೋಪಾಲ್‌ ಅವರಿಗೆ ಪತ್ರ ಬರೆದಿದ್ದರು.

Also Read
ನಿವೃತ್ತ ಸಿಜೆಐ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್

“ನ್ಯಾ. ಗೊಗೊಯ್‌ ಅವರು ನೀಡಿರುವ ಹೇಳಿಕೆ ತೀಕ್ಷ್ಣವಾಗಿದ್ದು ನ್ಯಾಯಾಂಗದ ಅನಿಷ್ಟಗಳ ಬಗ್ಗೆ ಹತಾಶೆ ವ್ಯಕ್ತಪಡಿಸಿದರೂ ಅದನ್ನು ಸಂಸ್ಥೆಯ ಒಳಿತಿಗಾಗಿ ಹೇಳಲಾಗಿದ್ದು ಅದು ನ್ಯಾಯಾಂಗವನ್ನು ಅಪಮಾನಕ್ಕೀಡು ಮಾಡುವುದಿಲ್ಲ” ಎಂದು ಅಟಾರ್ನಿ ಜನರಲ್‌ ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನವನ್ನು ಇಡಿಯಾಗಿ ನೋಡುವ ಸಂದರ್ಭ ನನಗೆ ಒದಗಿಬಂದಿತ್ತು. ಹೇಳಿಕೆ ನೀಡಿರುವುದು ಸಂಸ್ಥೆಯ ಒಳತಿಗಾಗಿ. ಅದು ಯಾವುದೇ ರೀತಿಯಲ್ಲಿ ನ್ಯಾಯಾಲಯಕ್ಕೆ ಅವಮಾನ ಮಾಡಿಲ್ಲ. ಅಲ್ಲದೆ ಸಾರ್ವಜನಿಕರ ದೃಷ್ಟಿಯಲ್ಲಿ ಸಂಸ್ಥೆಯ ಘನತೆಯನ್ನು ಕಡಿಮೆ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ," ಎಂದು ವೇಣುಗೋಪಾಲ್‌ ತಿಳಿಸಿದ್ದಾರೆ.

ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್ 15 ಮತ್ತು ಸುಪ್ರೀಂಕೋರ್ಟ್‌ ಅವಹೇಳನ ಮಾಡಿದಕ್ಕಾಗಿ ಕ್ರಮ ಕೈಗೊಳ್ಳುವ ನಿಯಮ 3ರ ಪ್ರಕಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಾಗಿ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸುವ ಮೊದಲು ಅಟಾರ್ನಿ ಜನರಲ್‌ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆ ಪಡೆಯಬೇಕಿದೆ.

Kannada Bar & Bench
kannada.barandbench.com