Hathras Gang Rape 
ಸುದ್ದಿಗಳು

ಹಾಥ್‌ರಸ್ ಅತ್ಯಾಚಾರ: ಸಂತ್ರಸ್ತೆ ಕುಟುಂಬ ಸದಸ್ಯರ ಮಂಪರು ಪರೀಕ್ಷೆಗೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಗೋಖಲೆ

ಹಾಥ್ ರಸ್ ಸಂತ್ರಸ್ತೆಯ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಅಕ್ಟೋಬರ್ 12ಕ್ಕೆ ನಿಗದಿಗೊಳಿಸಿದ್ದು, ಅಂದು ಹೇಳಿಕೆ ದಾಖಲಿಸಲು ಸಂತ್ರಸ್ತೆ ಕುಟುಂಬದವರು ಅಲಾಹಾಬಾದ್ ಹೈಕೋರ್ಟ್‌ ಮುಂದೆ ಹಾಜರಾಗುವ ಸಾಧ್ಯತೆ ಇದೆ.

Bar & Bench

ಹಾಥ್‌ರಸ್ ಘೋರ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬ ಸದಸ್ಯರ ಮಂಪರು ಪರೀಕ್ಷೆ ನಡೆಸಲು ಪ್ರಸ್ತಾಪಿಲಾಗಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಂತ್ರಸ್ತೆಯ ಕುಟುಂಬ ಸದಸ್ಯರ ಒಪ್ಪಿಗೆ ಪಡೆಯದೇ ಮತ್ತು ಆಕೆಯ ಕುಟುಂಬದ ಸದಸ್ಯರನ್ನು ಬಲವಂತಾಗಿ ಹೊರಗಿಟ್ಟು ಮಧ್ಯರಾತ್ರಿಯಲ್ಲಿ ಯುವತಿಯ ಶವಸಂಸ್ಕಾರ ನಡೆಸಿದ್ದನ್ನು ಪರಿಗಣಿಸಿ ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಬೆನ್ನಿಗೇ ಈ ಮನವಿ ದಾಖಲಾಗಿದೆ.

ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ನಿಗದಿಗೊಳಿಸಲಾಗಿದ್ದು, ಅಂದು ಸಂತ್ರಸ್ತ ಯುವತಿಯ ಪೋಷಕರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಲು ಹಾಜರಾಗುವ ಸಾಧ್ಯತೆ ಇದೆ. ಅಕ್ಟೋಬರ್ 1ರಂದು ನ್ಯಾಯಾಲಯ ಆದೇಶಿಸಿದ ಬೆನ್ನಿಗೇ ಅಕ್ಟೋಬರ್ 2ರಂದು ಮಂಪರು ಪರೀಕ್ಷೆ ನಡೆಸುವ ಬಗ್ಗೆ ಆಡಳಿತಶಾಹಿಯು ಮಾಧ್ಯಮ ಪ್ರಕಟಣೆಯ ಮೂಲಕ ಘೋಷಿಸಿದೆ.

ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸುವುದಕ್ಕೂ ಮುನ್ನ ಪ್ರಸ್ತಾಪಿತ ಮಂಪರು ಪರೀಕ್ಷೆಯು ಕುಟುಂಬ ಸದಸ್ಯರನ್ನು ಒತ್ತಾಯಿಸುವ ಮತ್ತು ಪ್ರಚೋದಿಸುವ ಕೃತ್ಯವಾಗಿದೆ ಎಂದು ಸಾಕೇತ್ ಗೋಖಲೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 12ರಂದು ನಿಗದಿಯಾಗಿರುವಂತೆ ಸಂತ್ರಸ್ತೆಯ ಕುಟುಂಬ ಸದಸ್ಯರು ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸುವವರೆಗೆ ಮಂಪರು ಪರೀಕ್ಷೆ ನಡೆಸುವ ಉತ್ತರ ಪ್ರದೇಶ ಆಡಳಿತದ ನಿರ್ಧಾರಕ್ಕೆ ತಡೆ ನೀಡುವಂತೆ ಅವರು ಕೋರಿದ್ದಾರೆ.

ಉತ್ತರ ಪ್ರದೇಶ ಆಡಳಿತದ ಒತ್ತಾಯದ ಕ್ರಮವು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಗೋಖಲೆ ಹೇಳಿದ್ದಾರೆ. “ಸಂತ್ರಸ್ತೆಯ ಕುಟುಂಬದವರು ಪ್ರಕರಣದಲ್ಲಿ ಆರೋಪಿಗಳೂ ಅಲ್ಲ ಹಾಗೂ ಅವರ ವಿರುದ್ಧ ಯಾವುದೇ ನಿರ್ದಿಷ್ಟ ಪ್ರಕರಣವನ್ನೂ ದಾಖಲಿಸಲಾಗಿಲ್ಲ. ಹೀಗಿರುವಾಗ ಸಂತ್ರಸ್ತೆಯ ಕುಟುಂಬಸ್ಥರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಕ್ರಮವು ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರ ಮೇಲೆ ವಿಚಾರಣಾ ಕ್ರಮ ಅನುಸರಿಸುವುದು ಒತ್ತಾಯವಾಗಿದೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಲಯ ದಾಖಲಿಸಿಕೊಂಡಿರುವ ಸ್ವಯಂಪ್ರೇರಣಾ ಪ್ರಕರಣದ ವಿಚಾರಣೆ ಮುಕ್ತಾಯವಾಗುವವರೆಗೆ ಹಾಥ್‌ರಸ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಅಥವಾ ಕಡ್ಡಾಯ ರಜೆಯ ಮೇಲೆ ಕಳುಹಿಸಬೇಕು ಎಂದು ಗೋಖಲೆ ಮನವಿ ಮಾಡಿದ್ದಾರೆ.