A1
A1
ಸುದ್ದಿಗಳು

ಮುಂಬೈನ ಘನತೆ ಕುಗ್ಗಿದೆ: ಸಾಕಿ ನಾಕಾ ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

Bar & Bench

ನಿರ್ಭಯಾ ಪ್ರಕರಣದಂತೆಯೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮುಂಬೈನ ಸಾಕಿ ನಾಕಾ ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಮರಣದ ದಂಡನೆ ವಿಧಿಸಿರುವ ಪೋಕ್ಸೊ ವಿಶೇಷ ನ್ಯಾಯಾಲಯ ʼಈ ಹೀನ ಕೃತ್ಯದಿಂದಾಗಿ ಎಂದೆಂದಿಗೂ ನಿದ್ರಿಸದ ನಗರಿ ಎನಿಸಿಕೊಂಡ ಮುಂಬೈನ ಘನತೆ ಕುಗ್ಗಿದೆʼ ಎಂದು ಹೇಳಿದೆ [ಮಹಾರಾಷ್ಟ್ರ ಸರ್ಕಾರ ಮತ್ತು ಮೋಹನ್‌ ಕತ್ವಾರು ಚೌಹಾಣ್‌ ನಡುವಣ ಪ್ರಕರಣ].

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಬರ್ಬರವಾಗಿ ಕೊಂದು ಹಾಕಿದ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ನಿವಾಸಿ ಮೋಹನ್ ಚೌಹಾಣ್ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ್ದ ಪ್ರಕರಣದ ವಿಚಾರಣೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನ ತಂದೆಯಾಗಿರುವ ಆರೋಪಿಯು ಮುಂಬೈನ ಸಾಕಿ ನಾಕಾ ಪ್ರದೇಶದ ರಸ್ತೆಯಲ್ಲಿ ನಿಲ್ಲಿಸಿದ್ದ ಟೆಂಪೋವೊಂದರಲ್ಲಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಹರಿತ ಆಯುಧ ತುರುಕಿ ಆಕೆಯ ಕರಳು ಬಗೆದಿದ್ದ. ಬಳಿಕ ಆಕೆ ಮೃತಪಟ್ಟಿದ್ದಳು.

ಅತ್ಯಾಚಾರ, ಕೊಲೆ ಮತ್ತು ಬಾಂಬೆ ಪೊಲೀಸ್ ಕಾಯಿದೆ ಹಾಗೂ ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಗಳಡಿ ಆತ ದೋಷಿ ಎಂದು ನ್ಯಾಯಾಲಯ ಘೋಷಿಸಿದೆ.

“ರಾಷ್ಟ್ರವೊಂದರ ಪ್ರಗತಿಯ ಉತ್ತಮ ಉಷ್ಣಮಾಪಕ ಎಂದರೆ ಅದು ಮಹಿಳೆಯನ್ನು ನಡೆಸಿಕೊಳ್ಳುವ ರೀತಿ” ಎಂಬ ಸ್ವಾಮಿ ವಿವೇಕಾನಂದರ ಮಾತುಗಳನ್ನು ತೀರ್ಪು ನೀಡುವ ಸಂದರ್ಭದಲ್ಲಿ ನೆನೆದ ನ್ಯಾಯಾಧೀಶೆ ಎಚ್‌ ಸಿ ಶೆಂಡೆ “ಆದರೆ ಈ ಮಹಿಳೆಯ ವಿರುದ್ಧ ಎಸಗಿದ ಘೋರ ಅಪರಾಧದಿಂದಾಗಿ ಸಮಾಜ ಆಘಾತಕ್ಕೊಳಗಾಗಿದೆ” ಎಂದು ಅಭಿಪ್ರಾಯಪಟ್ಟರು. ʼಘಟನೆ ಸಮಾಜದ ಮತ್ತು ಎಂದೆಂದಿಗೂ ನಿದ್ರಿಸದ ನಗರಿ ಎಂದೇ ಕರೆಯಲ್ಪಡುವ ಮುಂಬೈನ ಘನತೆ ಕುಗ್ಗಿಸಿದೆ” ಎಂದು ಬೇಸರಿಸಿದರು.