ತಮ್ಮ ನೆರೆಯ ವ್ಯಕ್ತಿಯಾದ ಕೇತನ್ ಕಕ್ಕಡ್ ಎಂಬುವವರ ವಿರುದ್ಧ ಬಾಲಿವುಡ್ ನಟ ಸಲ್ಮಾನ್ ಖಾನ್ ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಸಿ ವಿ ಭಡಂಗ್ ಅವರು ತಮ್ಮ ನಿವೃತ್ತಿಯ ಮೊದಲು ಪ್ರಕರಣದ ಕುರಿತು ತೀರ್ಪು ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಗುರುವಾರ ತಿಳಿಸಿದ್ದಾರೆ [ಸಲ್ಮಾನ್ ಖಾನ್ ಮತ್ತಿತರರು ಹಾಗೂ ಕೇತನ್ ಕಕ್ಕಾಡ್ ಇನ್ನಿತರರ ನಡುವಣ ಪ್ರಕರಣ].
ನಾಳೆ (ನವೆಂಬರ್ 4, 2022) ಅವರು ನ್ಯಾಯಮೂರ್ತಿಗಳು ನಿವೃತ್ತರಾಗುತ್ತಿದ್ದಾರೆ. ಹೀಗಾಗಿ, ಪ್ರಕರಣವನ್ನು ನೂತನ ನ್ಯಾಯಮೂರ್ತಿಗಳು ಆಲಿಸಬೇಕಾಗುತ್ತದೆ.
ಸುದೀರ್ಘ ವಿಚಾರಣೆಯ ನಂತರ ನ್ಯಾ. ಭಡಂಗ್ ಅಕ್ಟೋಬರ್ 11ರಂದು ತೀರ್ಪನ್ನು ಕಾಯ್ದಿರಿಸಿದ್ದರು. ಬಳಿಕ ಇಂದಿನ ದಿನವನ್ನು ತೀರ್ಪು ಪ್ರಕಟಿಸಲು ನಿಗದಿಪಡಿಸಿದ್ದರು. ಆದರೆ ಆಡಳಿತಾತ್ಮಕ ಮತ್ತು ಇತರೆ ಕಾರ್ಯಗಳಿಂದಾಗಿ ತೀರ್ಪನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಕೀಲರಿಗೆ ತಿಳಿಸಿ ಎಲ್ಲಾ ಕಕ್ಷಿದಾರರ ಕ್ಷಮೆ ಕೋರಿದರು.
ತಮ್ಮ ನೆರೆಯ ವ್ಯಕ್ತಿಯಾದ ಕೇತನ್ ಕಕ್ಕಡ್ ತನ್ನ ಮತ್ತು ತನ್ನ ಕುಟುಂಬದ ವ್ಯಾಪಾರ ವಹಿವಾಟುಗಳಿಗೆ ಧಕ್ಕೆ ತರುವಂತೆ ವೀಡಿಯೊ, ಪೋಸ್ಟ್ ಹಾಗೂ ಟ್ವೀಟ್‌ಗಳ ಮೂಲಕ ಸುಳ್ಳು, ಅವಹೇಳನಕಾರಿ ಹಾಗೂ ಮಾನಹಾನಿಕರ ಆರೋಪ ಮಾಡಿದ್ದಾರೆ ಎಂದು 2021ರಲ್ಲಿ ನಟ ಸಲ್ಮಾನ್ ಖಾನ್ ಮುಂಬೈನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಕಕ್ಕಡ್ ಅವರನ್ನು ನಿರ್ಬಂಧಿಸಬೇಕು, ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಮಧ್ಯಂತರ ಪರಿಹಾರ ಕೋರಿದ್ದರು.
ಆದರೆ, ಇದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲದೆ ಅತಿಕ್ರಮಣ ಮತ್ತು ಅರಣ್ಯ ಕಾಯಿದೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರ ವಿರುದ್ಧ ಸಾಕ್ಷ್ಯಗಳಿರುವುದನ್ನು ನ್ಯಾಯಾಲಯ ಗಮನಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಟ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲಿ ಸಲ್ಮಾನ್ ಅವರ ಪರವಾಗಿ ಹಿರಿಯ ನ್ಯಾಯವಾದಿ ರವಿ ಕದಂ ಹಾಗೂ ಕಕ್ಕಡ್ ಪರವಾಗಿ ಅಭಾ ಸಿಂಗ್ ಮತ್ತು ಆದಿತ್ಯ ಪ್ರತಾಪ್ ಸಿಂಗ್ ವಾದ ಮಂಡಿಸಿದ್ದರು.