ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕಾನೂನುಬಾಹಿರ ಒತ್ತುವರಿ ನಡೆಸಿದ್ದು, ಅರಣ್ಯ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಾಕ್ಷ್ಯ ಇದೆ ಎಂದು ಮುಂಬೈ ಸಿಟಿ ಸಿವಿಲ್ ನ್ಯಾಯಾಲಯ ಹೇಳಿದ್ದು, ಖಾನ್ ಅವರಿಗೆ ಮಧ್ಯಂತರ ಪರಿಹಾರ ನಿರಾಕರಿಸಿದೆ.
ಕೇತನ್ ಕಕ್ಕಡ್ ಎನ್ನುವವರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ವಿರುದ್ಧ ಕಾನೂನುಬಾಹಿರವಾಗಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿರುವುದರಿಂದ ಅವರ ಸಾಮಾಜಿಕ ಜಾಲತಾಣ ಖಾತೆ ಅಮಾನತು ಅಥವಾ ನಿರ್ಬಂಧಿಸುವಂತೆ ಕೋರಿ ಸಲ್ಮಾನ್ ಖಾನ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ 50 ಪುಟಗಳ ಆದೇಶದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ ಎಚ್ ಲದ್ಧದ್ ಅವರು ವಿಸ್ತೃತವಾಗಿ ವಿವರಿಸಿದ್ದಾರೆ.
ಕಕ್ಕಡ್ ಅವರು ಅವರದೇ ಜಮೀನಿಗೆ ಪ್ರವೇಶಿಸದಂತೆ ಸಲ್ಮಾನ್ ಖಾನ್ ಅವರು ತಡೆಯುತ್ತಿರುವುದಕ್ಕೆ ಪೂರಕವಾಗಿ ಕಕ್ಕಡ್ ದಾಖಲೆ ಸಾಕ್ಷ್ಯಗಳನ್ನು ಒದಗಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಅರಣ್ಯ ಕಾಯಿದೆ ಉಲ್ಲಂಘಿಸಿ ಖಾನ್ ಅವರು ಒತ್ತುವರಿ ಮಾಡಿದ್ದು, ಮಥೇರನ್ ಸೂಕ್ಷ್ಮ ಪ್ರದೇಶ ಅಧಿಸೂಚನೆಯನ್ನು ಖಾನ್ ಉಲ್ಲಂಘನೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿಗೆ ನೀಡಿರುವ ಮನವಿ ಮತ್ತು ಅರಣ್ಯ ಇಲಾಖೆ ಸಲ್ಲಿಸಿರುವ ಷೋಕಾಸ್ ನೋಟಿಸ್ ಅನ್ನು ಪೀಠದ ಮುಂದೆ ಇಡಲಾಗಿದೆ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
“ಖಾನ್ ಅವರು ನಡೆಸಿರುವ ಅಕ್ರಮ ಚಟುವಟಿಕೆಯನ್ನು ಬಹಿರಂಗಪಡಿಸುವ ಶಿಳ್ಳೆಗಾರ (ವಿಷಲ್ ಬ್ಲೋಯರ್) ತಾವು ಎಂದು ಕಕ್ಕಡ್ ವಾದಿಸಿದ್ದು, ತಮ್ಮ ಸಮರ್ಥನೆಗಾಗಿ ಅವರು ದಾಖಲೆಗಳನ್ನು ಸಲ್ಲಿಸಿದ್ದಾರೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಮೇಲ್ನೋಟಕ್ಕೆ ಕಕ್ಕಡ್ ಅವರ ಮನವಿಯು ಖಾನ್ ಅವರ ಕೋರಿಕೆಗಿಂತ ಹೆಚ್ಚು ಸಮರ್ಥನೀಯವಾಗಿದೆ” ಎಂದು ನ್ಯಾಯಾಧೀಶರು ಹೇಳಿದ್ದು, ಖಾನ್ ಮನವಿಯನ್ನು ವಜಾ ಮಾಡಿದ್ದಾರೆ.
ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ಅನಿವಾಸಿ ಭಾರತೀಯರಾದ ಕಕ್ಕಡ್ ಮತ್ತು ಇತರರು ತಮ್ಮ ಹಾಗೂ ಕುಟುಂಬದ ವಿರುದ್ದ ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ ಎಂದು ಖಾನ್ ಅವರು ಮುಂಬೈನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್ ಪಕ್ಕ ಭೂಮಿಯನ್ನು ಖರೀದಿಸುವ ಪ್ರಯತ್ನವನ್ನು ಕಕ್ಕಡ್ ಮಾಡಿದ್ದರು. ಇದು ಅಕ್ರಮ ಎಂದು ಸರ್ಕಾರ ರದ್ದುಪಡಿಸಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿದೆ. ಆದರೆ, ಕಕ್ಕಡ್ ಅವರು ತಮ್ಮ ಭೂಮಿಗೆ ತೆರಳುವ ಹಾದಿಯನ್ನು ಖಾನ್ ಕಬ್ಬಿಣದ ಗೇಟ್ ಅಳವಡಿಸುವ ಮೂಲಕ ಬಂದ್ ಮಾಡಿದ್ದಾರೆ ಎಂದಿದ್ದಾರೆ.