Supreme Court, Same sex marriage 
ಸುದ್ದಿಗಳು

ಸಲಿಂಗ ವಿವಾಹ: ಎಲ್‌ಜಿಬಿಟಿಕ್ಯೂಐಎ ಅರ್ಜಿದಾರರ ಸಲಹೆ ಪರಿಗಣಿಸಲು ಸಮಿತಿ ರಚಿಸುವುದಾಗಿ ಸುಪ್ರೀಂಗೆ ತಿಳಿಸಿದ ಕೇಂದ್ರ

ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಚಾರ ತಿಳಿಸಿದರು.

Bar & Bench

ಸಲಿಂಗ ಮನೋಧರ್ಮದ ವ್ಯಕ್ತಿಗಳೊಂದಿಗೆ ಒಟ್ಟಿಗೆ ಬಾಳುವಿಕೆ ನಡೆಸುವಾಗ ಎಲ್‌ಜಿಬಿಟಿಕ್ಯೂಐಎ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಪರಿಗಣಿಸಿ ಪರಿಶೀಲಿಸಲು ಸಚಿವ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ದೇಶದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಚಾರ ತಿಳಿಸಿದರು.

ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಎಸ್‌ಜಿ ಮೆಹ್ತಾ, “ಸಮಸ್ಯೆ ನೈಜ ಮನುಷ್ಯ ಕಳಕಳಿಗೆ ಸಂಬಂಧಿಸಿದ್ದಾಗಿದ್ದು ಆಡಳಿತಾತ್ಮಕವಾಗಿ ಏನಾದರೂ ಮಾಡಬಹುದೇ ಎಂಬುದು ಚರ್ಚೆಯ ವಿಚಾರವಾಗಿದೆ. ಸರ್ಕಾರ ಸಕಾರಾತ್ಮಕವಾಗಿದೆ. ಇದಕ್ಕೆ ವಿವಿಧ ಸಚಿವಾಲಯಗಳ ಸಮನ್ವಯತೆಯ ಅಗತ್ಯವಿದೆ. ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗುವುದು ಮತ್ತು ಅರ್ಜಿದಾರರು ನೀಡಿದ ಸಲಹೆಗಳಿಗೆ ಉತ್ತರ ಕಂಡುಕೊಳ್ಳಲಾಗುವುದು” ಎಂದು ಹೇಳಿದರು.   

ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದೆ. ತಮ್ಮಿಷ್ಟದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಎಲ್‌ಜಿಬಿಟಿಕ್ಯೂಐಎ + ಸಮುದಾಯಕ್ಕೂ ಲಭ್ಯವಾಗಬೇಕು ಎಂಬುದು ಅರ್ಜಿದಾರರ ಬೇಡಿಕೆಯಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

ಏಪ್ರಿಲ್ 27ರಂದು ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಸಂಬಂಧಿಸಿದ  ವಿಚಾರವಾಗಿದೆ. ಆದರೆ ಸಲಿಂಗ ಜೋಡಿಗೆ ಸಾಮಾಜಿಕ ಮತ್ತಿತರ ಸೌಲಭ್ಯಗಳನ್ನು ಹಾಗೂ ಮದುವೆಯ ಹಣೆಪಟ್ಟಿ ಇಲ್ಲದೆ ಕಾನೂನು ಹಕ್ಕುಗಳು ದೊರಕಿಸಿಕೊಡುವಂತೆ ನೋಡಿಕೊಳ್ಳುವ ಸಲುವಾಗಿ ನ್ಯಾಯಾಲಯ ಸಲಿಂಗ ವಿವಾಹ ಪ್ರಕರಣದ ವಿಚಾರಣೆ ನಡೆಸಿದೆ ಎಂದು ಹೇಳಿತ್ತು. ನ್ಯಾಯಾಂಗ ಈ ಕ್ಷೇತ್ರವನ್ನು ಪ್ರವೇಶಿಸಿದರೆ ಅದು ಶಾಸಕಾಂಗದ ವಿಚಾರವಾಗುತ್ತದೆ ಎಂಬ ಕಾರಣದಿಂದ ಸಮಸ್ಯೆ ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿತ್ತು.

ಒಟ್ಟಿಗೆ ಬಾಳುವಿಕೆ ನಡೆಸುವ ಸಂಬಂಧದ ಕುರಿತಂತೆ  ಸರ್ಕಾರ ಏನು ಮಾಡಲು ಉದ್ದೇಶಿಸಿದೆ ಮತ್ತು ಅಂತಹ ಸಂಬಂಧಗಳಿಗೆ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣದ ಪ್ರಜ್ಞೆಯನ್ನು ಹೇಗೆ ಬೆಳೆಸಲು ಯೋಜಿಸಿದೆ ಎಂದು ಸಿಜೆಐ ಪ್ರಶ್ನಿಸಿದ್ದರು. ಅಂತಹ ಸಂಬಂಧದಲ್ಲಿರುವ ಜನರು ಬಹಿಷ್ಕಾರಕ್ಕೊಳಗಾಗದಂತೆ ನೋಡಿಕೊಳ್ಳುವ ಮಹತ್ವವನ್ನು ಸಿಜೆಐ ಒತ್ತಿ ಹೇಳಿದ್ದರು.