Same Sex Marriage Day 05 
ಸುದ್ದಿಗಳು

ಲಿಂಗವಿಲ್ಲದ ಮಂದಿ, ಭಾವಪಲ್ಲಟದಂತೆ ಲಿಂಗತ್ವದ ಬದಲಾವಣೆ ಬಗ್ಗೆ ಗಮನಸೆಳೆದ ಎಸ್‌ಜಿ; ಕಾನೂನು ಸಮನ್ವಯ ಅಸಾಧ್ಯ ಎಂದು ವಾದ

Bar & Bench

ಲಿಂಗವು ಅಸ್ಥಿರವಾಗಿದ್ದು, ಅದು ಹಲವು ರೂಪ ಪಡೆದಿದ್ದು, ಅದನ್ನು ಶಾಸನಾತ್ಮಕವಾಗಿ ಒಳಗೊಳ್ಳುವುದು ಅಸಾಧ್ಯ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು [ಸುಪ್ರಿಯೊ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ].

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ವಿಷಯದ ಕುರಿತು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಎಸ್‌ ರವೀಂದ್ರ ಭಟ್‌, ಹಿಮಾ ಕೊಹ್ಲಿ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಐದನೇ ದಿನ ಕೇಂದ್ರ ಸರ್ಕಾರದ ವಾದ ಆಲಿಸಿತು.

ಯಾವುದೇ ನಿರ್ದಿಷ್ಟ ಲಿಂಗದೊಂದಿಗೆ ಗುರುತಿಸಿಕೊಳ್ಳದ ವ್ಯಕ್ತಿಗಳ ವಿವಾಹದ ಮಾನ್ಯತೆಯನ್ನು ಕಾನೂನುಗಳ ಮೂಲಕ ಸಮನ್ವಯಗೊಳಿಸುವುದಾದರೂ ಹೇಗೆ ಎಂದು ಎಸ್‌ಜಿ ಮೆಹ್ತಾ ಪ್ರಶ್ನಿಸಿದರು.

“ಯಾವುದೇ ಲಿಂಗದ ಜೊತೆ ಗುರುತಿಸಿಕೊಳ್ಳದ ವ್ಯಕ್ತಿಯನ್ನು ಲಿಂಗರಹಿತ ಎನ್ನಲಾಗುವುದು… ಅದನ್ನು ತೀರ್ಪಿನ ಮೂಲಕ ಸಮನ್ವಯಗೊಳಿಸುವುದು ಅಸಾಧ್ಯ… ಅವರು ಯಾವುದೇ ಲಿಂಗದ ವಿಭಾಗದಲ್ಲಿ ಗುರುತಿಸಿಕೊಳ್ಳಲು ನಿರಾಕರಿಸುತ್ತಾರೆ… ತಮ್ಮ ಸುತ್ತಲಿನ ಆಧಾರದ ಮೇಲೆ ಲಿಂಗ ಬದಲಾಯಿಸುವ ಜನರೂ ಇದ್ದಾರೆ.. ಭಾವಪಲ್ಲಟದಂತೆ ಲಿಂಗ ಬದಲಾವಣೆಯೂ ಇದೆ... ಯಾವ ಸ್ನೇಹಿತ ಅಥವಾ ಸಮೂಹದೊಂದಿಗೆ ಇದ್ದಾರೆ (ಅಮಿಕಾಜೆಂಡರ್‌) ಎಂಬುದನ್ನು ಆಧರಿಸಿ ಮನೋಭಾವ ಬದಲಾಗುತ್ತದೆ. ಅನೋಜೆಂಡರ್‌ನಲ್ಲಿ ಲಿಂಗತ್ವವು ಭಾವತೀವ್ರತೆಯ ಆಧಾರದಲ್ಲಿ ಮರೆಯಾಗುವುದು, ಮರುಕಳಿಸುವುದು ನಡೆಯುತ್ತದೆ... ಇವು ಮೌಲ್ಯ ನಿರ್ಧರಿಸಲಾಗದ ವಾಸ್ತವಿಕ ವಿಚಾರಗಳು… ಅವರಿಗೆ ನ್ಯಾಯಾಲಯವು ವಿವಾಹ ಸ್ಥಾನಮಾನ ಕಲ್ಪಿಸಿದರೂ ನಿಯಮಾವಳಿ ರೂಪಿಸುವುದು ವಿವೇಕಯುತವೇ? ಇದು ಊಹೆಗೆ ನಿಲುಕದ್ದು” ಎಂದರು.

ತಮ್ಮ ವಾದದ ಮೂಲದ ಕುರಿತು ಸಿಜೆಐ ಚಂದ್ರಚೂಡ್‌ ಅವರು ಕೇಳಿದಾಗ ಎಸ್‌ಜಿ ಅವರು ವೆಬ್‌ಎಂಡಿ  (WebMD) ವಿಸ್ತೃತ ನೆಟ್‌ವರ್ಕ್‌ನಲ್ಲಿನ ಮೆಡಿಸಿನ್‌ ನೆಟ್‌ ವೆಬ್‌ಪೇಜ್‌ನಲ್ಲಿ ಮಾಹಿತಿ ಪಡೆದಿರುವುದಾಗಿ ತಿಳಿಸಿದರು.

“ಮದುವೆಯ ನಿಷೇಧದ ವಿರುದ್ಧ ನ್ಯಾಯಾಲಯ ನಿರ್ಣಯ ಮಾಡುತ್ತಿಲ್ಲ… ಎಲ್‌ಜಿಬಿಟಿಕ್ಯು ಸಮುದಾಯದವರು ಮದುವೆಯಾಗಲು ಯಾವುದೇ ನಿಷೇಧವಿಲ್ಲ. ಆದರೆ, ಎಲ್ಲ ಧರ್ಮಗಳು ಒಂದು ಸಾಂಸ್ಥಿಕ ರಚನೆ ಎಂದು ಪರಿಗಣಿಸಿರುವ ಮದುವೆಗೆ ಕಾನೂನಿನ ಮಾನ್ಯತೆ ನೀಡಲು ಈ ನ್ಯಾಯಾಲಯ ಮುಂದಾಗಿದೆ” ಎಂದು ಮೆಹ್ತಾ ಹೇಳಿದರು.

ವಿಶೇಷ ವಿವಾಹ ಕಾಯಿದೆ ಜಾರಿ ಸಂದರ್ಭದಲ್ಲಿನ ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆ ಉಲ್ಲೇಖಿಸಿದ ಮೆಹ್ತಾ ಅವರು ಅಂದು ಸಂಸದರಿಗೆ ಸಲಿಂಗತ್ವದ ಬಗ್ಗೆ ಗೊತ್ತಿತ್ತು. ಆದರೂ ಅವರು ಅದನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟಿದ್ದರು ಎಂದರು.

ಇದಕ್ಕೆ ನ್ಯಾ. ರವೀಂದ್ರ ಭಟ್‌ ಅವರು “ಪ್ರಪಂಚದ ಯಾವುದೇ ಭಾಗದಲ್ಲಿ ಆಗ ಸಲಿಂಗ ವಿವಾಹ ಕಾನೂನು ಇತ್ತೇ? ಕಾನೂನಿನಲ್ಲಿ ಆ ಮದುವೆಗೆ ಮಾನ್ಯತೆ ಕಲ್ಪಿಸಲು ಅದಕ್ಕೆ ಯಾವುದೇ ತಳಹದಿ ಇರಲಿಲ್ಲ” ಎಂದರು.

ಇದಕ್ಕೆ ಮೆಹ್ತಾ ಅವರು “ಮಹಿಳೆ ಮತ್ತು ಪುರುಷರಷ್ಟೇ ಅಲ್ಲದೆ (ಲಿಂಗತ್ವದ) ಇತರ ವಿಶಾಲವಲಯದ ಬಗ್ಗೆ ಅವರಿಗೆ ಗೊತ್ತಿತ್ತು ಎಂಬುದು ಚರ್ಚೆಯಿಂದ ತಿಳಿದು ಬರುತ್ತದೆ. ಅಂದು ಕಾನೂನು ರೂಪಿಸಿದವರಿಗೆ ಸಲಿಂಗತೆ ಬಗ್ಗೆ ಅರಿವಿತ್ತು. ಆದರೆ ಅವರು ಪ್ರಜ್ಞಾಪೂರ್ವಕವಾಗಿ ವಿಚ್ಛೇದನದ ಕಾರಣವಾಗಿ ಅದನ್ನು ಒಳಗೊಳ್ಳುವದನ್ನೂ ಸಹ ತಪ್ಪಿಸಿದ್ದಾರೆ” ಎಂದು ವಾದಿಸಿದರು.