ಸಲಿಂಗ ವಿವಾಹಿತರು ದತ್ತು ಪಡೆಯುವ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ವಾದ ಸರಿಯಲ್ಲ: ಸುಪ್ರೀಂ ಕೋರ್ಟ್

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ದಾರಿ ಮಾಡಿಕೊಡುವುದಕ್ಕಾಗಿ ವಿಶೇಷ ವಿವಾಹ ಕಾಯಿದೆಯಲ್ಲಿ ಲಿಂಗ ತಟಸ್ಥ ನಿಯಮಗಳನ್ನು ಅಳವಡಿಸಬೇಕು ಎಂದು ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಮನವಿ ಮಾಡಿದರು.
Same sex marriage case: DAY 2
Same sex marriage case: DAY 2

ಸಲಿಂಗ ವಿವಾಹವಾದ ದಂಪತಿ ದತ್ತುಪಡೆದ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ವಾದ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌ ಪುರುಷ ಮತ್ತು ಮಹಿಳಾ ಸಲಿಂಗ ಮನೋಧರ್ಮದ ವ್ಯಕ್ತಿಗಳು ಈಗಾಗಲೇ ಮಕ್ಕಳನ್ನು ದತ್ತುಪಡೆಯಲು ಅವಕಾಶವಿದೆ ಎಂದು ಹೇಳಿದೆ [ಸುಪ್ರಿಯೋ ಇನ್ನಿತರರು ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಲಿಂಗ ವಿವಾಹವಾದವರು ದತ್ತು ಪಡೆಯುವ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಈ ರೀತಿ ಹೇಳಿದೆ: "ಪ್ರಾಸಂಗಿಕವಾಗಿ ಹೇಳುವುದಾದರೆ, ಜೋಡಿಯು, ಪುರುಷ ಸಲಿಂಗ (ಗೇ) ಅಥವಾ ಸ್ತ್ರೀ ಸಲಿಂಗ (ಲೆಸ್ಬಿಯನ್‌) ಸಂಬಂಧದಲ್ಲಿದ್ದರೂ ಕೂಡ, ಅವರಲ್ಲಿ ಒಬ್ಬರು ದತ್ತುಪಡೆಯಬಹುದಾಗಿದೆ. ಹಾಗಾಗಿ, ಇದು ಮಗುವಿನ ಮೇಲೆ ಮಾನಸಿಕ ಪ್ರಭಾವ ಉಂಟುಮಾಡುತ್ತದೆ ಎಂಬ ಇಡೀ ವಾದ, ಕಾನೂನಿನಲ್ಲಿ ದತ್ತು ಪಡೆಯಲು ಅವಕಾಶವಿದೆ ಎಂಬ ವಾಸ್ತವದಿಂದಾಗಿ ಸುಳ್ಳಾಗುತ್ತದೆ. ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದ ಬಳಿಕ ಜನ ಸಹಜೀವನ ನಡೆಸಲು ಮುಕ್ತ ಅವಕಾಶ ದೊರೆತಿದ್ದು ಸಲಿಂಗ ಸಂಬಂಧದಲ್ಲಿರುವವರು ದತ್ತು ಪಡೆಯಬಹುದು….” ಎಂದಿತು.

Also Read
ಸಲಿಂಗ ವಿವಾಹ ನಗರ-ಗಣ್ಯರ ಕಲ್ಪನೆ ಎಂದು ಸಾಬೀತುಪಡಿಸುವ ಮಾಹಿತಿ ಸರ್ಕಾರದ ಬಳಿ ಇಲ್ಲ: ಸುಪ್ರೀಂ ಕೋರ್ಟ್

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಒಂದು ವಿಷಯ ಸಮವರ್ತಿ ಪಟ್ಟಿಯಲ್ಲಿದ್ದ ಮಾತ್ರಕ್ಕೆ ರಾಜ್ಯಗಳು ಈ ಪ್ರಕರಣದಲ್ಲಿ ಪಕ್ಷಕಾರರಾಗಬೇಕು ಎಂದೇನೂ ಅಲ್ಲ ಎಂದು ಹಳೆಯ ಪ್ರಕರಣವೊಂದರಲ್ಲಿ ರಾಜ್ಯಗಳು ಪಕ್ಷಕಾರರಾಗದೇ ಇರುವುದನ್ನು ಉಲ್ಲೇಖಿಸಿದರು.

ಭಿನ್ನಲಿಂಗೀಯ ದಂಪತಿಗೆ ದೊರೆಯುತ್ತಿರುವ ಎಲ್ಲಾ ಕಾನೂನು ಸೌಲಭ್ಯಗಳು ಕೂಡ ಸಲಿಂಗ ಮನೋಧರ್ಮದ ದಂಪತಿಗೆ ಲಭಿಸಬೇಕು ಎಂದು ಅವರು ವಾದಿಸಿದರು.

Also Read
ಸಲಿಂಗ ವಿವಾಹ: ಪುರುಷ, ಮಹಿಳೆ, ಜನನಾಂಗಗಳ ಪರಿಕಲ್ಪನೆ ಲಿಂಗವನ್ನು ಸಂಪೂರ್ಣ ಅರ್ಥದಲ್ಲಿ ವ್ಯಾಖ್ಯಾನಿಸದು ಎಂದ ಸುಪ್ರೀಂ

ಆಗ ನ್ಯಾಯಮೂರ್ತಿ ಕೌಲ್ "ಎಲ್ಲವನ್ನೂ ಒಂದೇ ಬಾರಿಗೆ ಬದಲಾಯಿಸಲು ಸಾಧ್ಯವಿಲ್ಲ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಬಳಿಕ ಆ ರೀತಿ ಮದುವೆಯಾದವರಿಗೆ ಜನ ಮಾನ್ಯತೆ ನೀಡದಿದ್ದರೆ ನಿಮ್ಮ ಮಾತಿನ ಪ್ರಕಾರ ಆ ನಡೆ ನಮ್ಮ ಆದೇಶದ ಉಲ್ಲಂಘನೆ ಎಂದಾಗುತ್ತದೆ” ಎಂದರು.

ಸಂಸತ್ತಿನಲ್ಲಿ ಸಲಿಂಗ ಮನೋಧರ್ಮದವರಿಗೆ ಯಾವುದೇ ಪ್ರಾತಿನಿಧ್ಯ ಇಲ್ಲದೇ ಇರುವುದರಿಂದ ಬಹುಮತದ ಕೊರತೆಯ ಕಾರಣಕ್ಕೆ ಅವರು ನ್ಯಾಯಾಲಯದ ಮೊರೆ ಹೋಗಬೇಕಿದೆ ಎಂದು ರೋಹಟ್ಗಿ ಈ ಸಂದರ್ಭದಲ್ಲಿ ತಿಳಿಸಿದರು.

Also Read
ಸುಪ್ರೀಂನಲ್ಲಿ ಎಸ್‌ಜಿ ಮತ್ತು ಸಿಜೆಐ ನಡುವೆ ಬಿರುಸಿನ ಮಾತುಗಳಿಗೆ ಸಾಕ್ಷಿಯಾದ ಸಲಿಂಗ ವಿವಾಹ ಪ್ರಕರಣದ ವಿಚಾರಣೆ

“ಜನಪ್ರಿಯ ನೈತಿಕತೆ ಎಂಬುದು ಶಾಸಕಾಂಗ ಪ್ರಕ್ರಿಯೆಗಾಗಿ ನ್ಯಾಯಾಲಯದ ತೀರ್ಪುಗಳನ್ನು ಮುಂದೂಡಲಾಗದು. ಸಾಂವಿಧಾನಿಕ ನೈತಿಕತೆಯನ್ನು ನ್ಯಾಯಾಲಯ ಎತ್ತಿ ಹಿಡಿದಾಗ ಜನರಿಗೆ ಅದು (ಸಾಂವಿಧಾನಿಕ ನೈತಿಕತೆ) ಅಭ್ಯಾಸವಾಗುತ್ತದೆ” ಎಂದು ಅವರು ಹೇಳಿದರು.

ಈ ವೇಳೆ ವಿಶೇಷ ವಿವಾಹ ಕಾಯಿದೆಯ ಸೆಕ್ಷನ್ 2(ಬಿ)ಯನ್ನು ನ್ಯಾಯಾಲಯ ಪ್ರಸ್ತಾಪಿಸಿತು. ಈ ಸೆಕ್ಷನ್‌ ಅಡಿ ಮದುವೆಯಾಗುವ ಪುರುಷ ಮತ್ತು ಮಹಿಳೆಯರಿಗೆ ನಿಷೇಧಿತ ಸಂಬಂಧಗಳ ಮಾನದಂಡಗಳನ್ನು ಹೇಳುತ್ತದೆ. ಕೆಲವು ಸಲಿಂಗ ಸಂಬಂಧಗಳನ್ನು ಅದು ನಿಷೇಧಿಸುವ ಹಿನ್ನೆಲೆಯಲ್ಲಿ ಸಿಜೆಐ ಹೀಗೆ ಹೇಳಿದರು: “ವಿಶೇಷ ವಿವಾಹ ಕಾಯಿದೆಯು ಸಲಿಂಗ ವಿವಾಹವನ್ನು ಆಲೋಚಿಸಲಿಲ್ಲ ಎಂಬುದಕ್ಕೆ ಇದು ಮೌನ ಸೂಚನೆಯಾಗಿದೆ.”

 ಆಗ ನ್ಯಾಯಮೂರ್ತಿ ಕೌಲ್ "ಇಲ್ಲಿ (ಈ ಕಾಯಿದೆಯಲ್ಲಿ) ಸಹೋದರಿಯರು-ಮಗಳ ನಡುವಿನ ನಿಷೇಧಿತ ಸಂಬಂಧವನ್ನು ಪ್ರಸ್ತಾಪಿಸಲಾಗಿದೆ. ಆದರೆ ಅನೇಕ ಸಮುದಾಯಗಳಲ್ಲಿ ಇದಕ್ಕೆ ಅನುಮತಿ ಇದೆ. ಹೀಗಾಗಿ ನಮ್ಮದು ವೈವಿಧ್ಯಮಯ ದೇಶವಾಗಿದೆ."

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ದಾರಿ ಮಾಡಿಕೊಡುವುದಕ್ಕಾಗಿ ವಿಶೇಷ ವಿವಾಹ ಕಾಯಿದೆಯಲ್ಲಿ ಲಿಂಗ ತಟಸ್ಥ ನಿಯಮಗಳನ್ನು ಅಳವಡಿಸಬೇಕು ಎಂದು ರೋಹಟ್ಗಿ ಈ ಸಂದರ್ಭದಲ್ಲಿ ಹೇಳಿದರು.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ  ವಿಶೇಷ ವಿವಾಹ ಕಾಯಿದೆಯು ಧರ್ಮಾತೀತವಾಗಿ ವಿವಾಹಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದರು.

ಸಲಿಂಗ ದಂಪತಿಗೆ ಕಾನೂನಿಡಿ ವಸ್ತುನಿಷ್ಢ ನ್ಯಾಯಪರತೆ ಒದಗಿಸುವುದಕ್ಕಾಗಿ ಸಾಮಾಜಿಕ ಕಲ್ಯಾಣ ಸಂಸ್ಥೆಗಳಿಂದ ರಕ್ಷಣೆ ಪಡೆಯಲು ಅವರು ಅರ್ಹರಾಗಿದ್ದಾರೆ ಎಂದರು. ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಈ ಸಂದರ್ಭದಲ್ಲಿ ವಾದ ಮಂಡಿಸಿದರು. ಎರಡು ದಿನಗಳಿಂದ ಸತತವಾಗಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ಇಂದು ಕೂಡ ಮುಂದುವರೆದಿದೆ.

Related Stories

No stories found.
Kannada Bar & Bench
kannada.barandbench.com