ಸುದ್ದಿಗಳು

ಸಲಿಂಗ ಸಂಬಂಧ ಅರ್ಥ ಮಾಡಿಕೊಳ್ಳಲು ಮನಃಶಾಸ್ತ್ರಜ್ಞರೊಂದಿಗೆ ಭೇಟಿಗೆ ಮುಂದಾದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ

Bar & Bench

ಸಲಿಂಗ ಸಂಬಂಧಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ತಮ್ಮ ವಿಕಾಸಕ್ಕೆ ಅನುವು ಮಾಡಿಕೊಡಲು ಮನಶ್ಶಾಸ್ತ್ರಜ್ಞರೊಂದಿಗೆ ಶೈಕ್ಷಣಿಕ ಸಮಾಲೋಚನೆ ನಡೆಸಲು ಬಯಸುವುದಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಬುಧವಾರ ಹೇಳಿದ್ದಾರೆ. ಮನಶಾಸ್ತ್ರಜ್ಞರ ಭೇಟಿಗೆ ವ್ಯವಸ್ಥೆ ಮಾಡುವಂತೆಯೂ ಅವರು ಆದೇಶಿಸಿದ್ದಾರೆ .

ತಮ್ಮ ಪೋಷಕರು ತಾವುಗಳು ಕಾಣೆಯಾಗಿರುವ ಸಂಬಂಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸ್ತ್ರೀ ಸಲಿಂಗ ಜೋಡಿಯೊಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಹಿಂದೆ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು “ಪ್ರಕರಣವನ್ನು ಸೂಕ್ಷ್ಮತೆ ಮತ್ತು ಸಹಾನುಭೂತಿಯೊಂದಿಗೆ ನಿಭಾಯಿಸಬೇಕಿದ್ದು ಸಮಾಜವೂ ಹೇಗೆ ಈಗಲೂ ಸಲಿಂಗ ಸಂಬಂಧದೊಂದಿಗೆ ಮುಖಾಮುಖಿಯಾಗಲು ಕಷ್ಟಪಡುತ್ತಿದೆ ಎಂಬುದಕ್ಕೆಈ ಪ್ರಕರಣವು ಒಂದು ಉದಾಹರಣೆಯಾಗಿದೆ” ಎಂದಿದ್ದರು. ಅಲ್ಲದೆ ಒಂದು ಹಂತದಲ್ಲಿ ನ್ಯಾಯಾಮೂರ್ತಿಗಳು “ಸಲಿಂಗಕಾಮದ ಬಗ್ಗೆ ತಮಗೆ ಇರುವ ಪೂರ್ವಾಗ್ರಹದ ಪರಿಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳಲು ಸಹ ಪ್ರಯತ್ನಿಸುತ್ತಿರುವುದಾಗಿ ವಿವರಿಸಿದ್ದರು.

ಬುಧವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ನ್ಯಾಯಮೂರ್ತಿಗಳು ಮನಶ್ಶಾಸ್ತ್ರಜ್ಞರೊಂದಿಗೆ ಖುದ್ದಾಗಿ ಶೈಕ್ಷಣಿಕ ಸಮಾಲೋಚನೆ ನಡೆಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ತಮ್ಮ ಆದೇಶದಲ್ಲಿ ಅವರು “…ನಾನು ಮಂಥನ ಮಾಡಿಕೊಳ್ಳಲು ಇನ್ನೂ ಸ್ವಲ್ಪಸಮಯ ಬಯಸುತ್ತೇನೆ. ಅಂತಿಮವಾಗಿ ಈ ಪ್ರಕರಣದಲ್ಲಿ ಪದಗಳು (ತೀರ್ಪು) ನನ್ನ ಹೃದಯದಿಂದ ಬರಬೇಕೇ ವಿನಾ ತಲೆಯಿಂದಲ್ಲ. ನಾನು ಸಂಪೂರ್ಣ ಅರಿವು ಪಡೆಯದ ಹೊರತು ಇದು ಸಾಧ್ಯವಾಗದು… ಮನೋ-ಜ್ಞಾನ ಪಡೆದ ಬಳಿಕ ನಾನು ಬರೆಯುವ ಆದೇಶ ಹೃದಯದಿಂದ ಬರಲಿದೆ ಎಂದು ನಂಬುತ್ತೇನೆ" ಎಂಬುದಾಗಿ ತಿಳಿಸಿದ್ದಾರೆ.

ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯದ ಸಲಹೆಯಂತೆ ಸಲಿಂಗ ಜೋಡಿ ಹಾಗೂ ಅವರ ಪೋಷಕರು ಕೂಡ ಮನಶ್ಶಾಸ್ತ್ರಜ್ಞರೊಂದಿಗೆ ಸಮಾಲೋಚನೆಗೆ ಒಳಪಟ್ಟಿದ್ದರು. ಈ ವೇಳೆ ಸಲಿಂಗ ಜೋಡಿಗೆ ತಾವು ಪ್ರವೇಶಿಸಿರುವ ಸಂಬಂಧದ ಬಗ್ಗೆ ಯಾವುದೇ ಸಂಶಯವಿಲ್ಲ ಎನ್ನುವುದನ್ನು ಮನಶ್ಶಾಸ್ತ್ರಜ್ಞರು ಖಾತರಿ ಪಡಿಸಿದ್ದರು. ಅಲ್ಲದೆ, ಅವರು ತಮ್ಮ ಪೋಷಕರೆಡೆಗೆ ಅಪಾರ ಪ್ರೀತಿ, ಕಾಳಜಿಯನ್ನು ಹೊಂದಿದ್ದಾರೆ ಎನ್ನುವುದನ್ನೂ ಕೂಡ ತಿಳಿಸಲಾಗಿತ್ತು.

ಪೋಷಕರ ಮೇಲೆ ಈ ಸಮಾಲೋಚನೆಯು ಯಾವ ಪರಿಣಾಮ ಬೀರಿದೆ ಎನ್ನುವುದು ಹಾಗೂ ಮನವಿದಾರರನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು ಎಷ್ಟು ಸಫಲರಾಗಿದ್ದಾರೆ ಎನ್ನುವುದನ್ನು ಗಮನಿಸಬೇಕಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಈ ಬಗ್ಗೆ ನ್ಯಾಯಮೂರ್ತಿಗಳು, “ನಿಸ್ಸಂಶಯವಾಗಿ ವಿಕಾಸ ಎಂಬುದು ರಾತ್ರೋರಾತ್ರಿ ನಡೆಯುವಂತಹುದಲ್ಲ. ಸುಧಾರಣೆ ತರಲು ನಿರಂತರ ಪ್ರಯತ್ನ ಅಗತ್ಯವಿದೆ” ಎಂದರು.

ಪ್ರಕರಣವನ್ನು ಜೂನ್ 7ಕ್ಕೆ ಮುಂದೂಡಲಾಗಿದೆ. ಮತ್ತೊಂದೆಡೆ ರಾಜ್ಯ ಸರ್ಕಾರ, ಪೋಷಕರ ದೂರಿನ ಮೇಲೆ ದಾಖಲಿಸಿಕೊಳ್ಳಲಾಗಿದ್ದ ಎಫ್‌ಐಆರ್‌ಗಳನ್ನು ರದ್ದುಪಡಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.