Bombay HC, Nawab Malik and Sameer Wankhede
Bombay HC, Nawab Malik and Sameer Wankhede  
ಸುದ್ದಿಗಳು

[ವಾಂಖೆಡೆ ಮೊಕದ್ದಮೆ] "ಟ್ವಿಟರ್‌ನಲ್ಲಿ ಉತ್ತರಿಸುವಿರಾದರೆ, ಇಲ್ಲಿಯೂ ಉತ್ತರ ನೀಡಿ" ನವಾಬ್ ಮಲಿಕ್‌ಗೆ ಬಾಂಬೆ ಹೈಕೋರ್ಟ್

Bar & Bench

ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಅರ್ಜಿಗೆ ಉತ್ತರ ನೀಡುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರ ಸರ್ಕಾರದ ಸಂಪುಟ ದರ್ಜೆ ಸಚಿವ ನವಾಬ್ ಮಲಿಕ್‌ ಅವರಿಗೆ ಸೂಚನೆ ನೀಡಿದೆ.

ವಾಂಖೆಡೆ ಪರ ವಾದ ಮಂಡಿಸಿದ ವಕೀಲ ಅರ್ಷದ್ ಶೇಖ್ ಅವರು “ಮಾನನಷ್ಟ ಪ್ರಕರಣಗಳಲ್ಲಿ ಉತ್ತರಗಳನ್ನು ಸಲ್ಲಿಸುವುದು ಮುಖ್ಯವಾಗಿದ್ದರೂ, ಪ್ರಕರಣವನ್ನು ಹೈಕೋರ್ಟ್ ವಿಚಾರಣೆ ನಡೆಸುವವರೆಗೆ ಮಲಿಕ್ ಅವರು ಯಾವುದೇ ಮಾಧ್ಯಮಗಳಲ್ಲಿ ಮಾನಹಾನಿಕರವಾಗಿ ಏನನ್ನೂ ಪ್ರಕಟಿಸದಂತೆ ಹೇಳಿಕೆ ನೀಡಬಹುದು” ಎಂದರು.

ಪ್ರತಿದಿನ ಏನಾದರೊಂದನ್ನು ಪೋಸ್ಟ್‌ ಮಾಡುತ್ತಲೇ ಇರುವುದರಿಂದ ನಾನಿಲ್ಲಿದ್ದೇನೆ. ಇಂದು ಬೆಳಿಗ್ಗೆ ಮಲಿಕ್‌ ಅವರೇ ಸಮೀರ್ ವಾಂಖೆಡೆ ಅವರ ಅತ್ತಿಗೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದು ಶೇಖ್‌ ತಿಳಿಸಿದರು.

ಆದರೆ ಮಲಿಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅತುಲ್ ದಾಮ್ಲೆ, ನ್ಯಾಯಾಲಯದಲ್ಲಿ ಯಾವುದೇ ಹೇಳಿಕೆ ನೀಡಲು ಅಥವಾ ಲಿಖಿತ ಹೇಳಿಕೆ ಸಲ್ಲಿಸಲು ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ಇಲ್ಲ ಎಂದರು, ತನ್ನ ಮಗ ಮತ್ತು ಮಗಳ ಪರವಾಗಿ ತಂದೆ ಅಹವಾಲು ಸಲ್ಲಿಸುತ್ತಿರುವ ಔಚಿತ್ಯವೇನು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಮೊಕದ್ದಮೆಗೆ ಉತ್ತರ ನೀಡಲು ಇನ್ನೂ 2-3 ದಿನಗಳ ಕಾಲಾವಕಾಶ ಕೋರಿದರು..

ಕುಟುಂಬ ಸದಸ್ಯರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುವುದರ ಕುರಿತಾಗಿ ಮೊಕದ್ದಮೆ ಇದೆ ಎನ್ನುವುದನ್ನು ಪರಿಗಣಿಸಿದ ರಜಾಕಾಲೀನ ಪೀಠದ ನ್ಯಾಯಮೂರ್ತಿ ಮಾಧವ್ ಜಾಮ್‌ದಾರ್ ಅವರು ನಾಳೆಯೊಳಗೆ ಉತ್ತರ ಸಲ್ಲಿಸುವಂತೆ ಮಲಿಕ್ ಅವರಿಗೆ ಸೂಚಿಸಿದರು.

"ನೀವು ಟ್ವಿಟರ್‌ನಲ್ಲಿ ಪ್ರತ್ಯುತ್ತರ ನೀಡಬಹುದಾದರೆ, ಇಲ್ಲಿಯೂ ಸಹ ಉತ್ತರಿಸಿ" ಎಂದು ನ್ಯಾ. ಜಾಮ್ದಾರ್ ಅವರು ಆದೇಶ ನೀಡುವ ಮೊದಲು ಹೇಳಿದರು. ದಾವೆಯ ವಿಚಾರಣೆಯನ್ನು ನವೆಂಬರ್ 10, 2021 ಕ್ಕೆ ಮುಂದೂಡಲಾಯಿತು.

ತಮ್ಮ ಮಗ ಹಾಗೂ ಕುಟುಂಬದ ವಿರುದ್ಧ ಪತ್ರಿಕಾಗೋಷ್ಠಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪದ ಮೇರೆಗೆ ಧ್ಯಾನದೇವ್ ಕಚ್ರುಜಿ ವಾಂಖೆಡೆ ಅವರು ₹ 1.25 ಕೋಟಿ ಮಾನನಷ್ಟ ಪರಿಹಾರ ಕೋರಿದ್ದಾರೆ.