ಸಂಜಯ್ ರಾವತ್
ಸಂಜಯ್ ರಾವತ್  
ಸುದ್ದಿಗಳು

ಕಂಗನಾ ಬಂಗಲೆ ಧ್ವಂಸ ಪ್ರಕರಣ: ಪಕ್ಷಕಾರರಾಗಿ ಶಿವಸೇನೆ ವಕ್ತಾರ ಸಂಜಯ್ ರಾವತ್ ಸೇರ್ಪಡೆಗೆ ಬಾಂಬೆ ಹೈಕೋರ್ಟ್ ಅನುಮತಿ

Bar & Bench

ಬೃಹತ್ ಮುಂಬೈ ಮಹಾನಗರ ಪಾಲಿಕೆ (ಎಂಸಿಜಿಎಂ / ಬಿಎಂಸಿ) ತನ್ನ ಬಂಗಲೆ ಕೆಡವಲು ಮುಂದಾಗಿದ್ದನ್ನು ವಿರೋಧಿಸಿ ನಟಿ ಕಂಗನಾ ರನೌತ್ ಈ ಹಿಂದೆ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಶಿವಸೇನೆ ವಕ್ತಾರ ಸಂಜಯ್ ರಾವತ್ ಅವರನ್ನು ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಲು ಬಾಂಬೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್ ಜೆ ಕಥಾವಲ್ಲಾ ಮತ್ತು ಆರ್ ಐ ಚಾಗ್ಲಾ ಅವರಿದ್ದ ನ್ಯಾಯಪೀಠ ‘ಕಟ್ಟಡ ತೆರವುಗೊಳಿಸಲು ಆದೇಶಿಸಿದ್ದ ಬಿಎಂಸಿ ಅಧಿಕಾರಿಯನ್ನು ಕೂಡ ಪ್ರಕರಣದಲ್ಲಿ ಪಕ್ಷಕಾರನಾಗುವಂತೆ ಸೂಚಿಸಿ ಬುಧವಾರ ಬೆಳಿಗ್ಗೆಗೆ ವಿಚಾರಣೆ ಮುಂದೂಡಿದೆ. ಕೆಲದಿನಗಳ ಹಿಂದೆ ಕಂಗನಾ ರನೌತ್ ಅವರು ಪ್ರಕರಣದ ಸಂಬಂಧ ಪ್ರತ್ಯುತ್ತರ ಅರ್ಜಿ ಸಲ್ಲಿಸಿದ್ದರು.

ಕಂಗನಾ ಸಲ್ಲಿಸಿರುವ ಪ್ರತ್ಯುತ್ತರ ಅರ್ಜಿಗೆ ಪ್ರತಿಕ್ರಿಯೆ ನೀಡಲು ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ ಸಮಾಯವಕಾಶದ ಅಗತ್ಯ ಇದೆ ಎಂದು ಪಾಲಿಕೆ ಪರ ವಕೀಲ ಆಸ್ಪಿ ಚಿನೊಯ್ ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ‘ಬಿಎಂಸಿ ಪ್ರತಿದಿನ ಪ್ರಕರಣವನ್ನು ದಾರಿತಪ್ಪಿಸುತ್ತಿದೆ” ಎಂದರು.

ಅರ್ಜಿಗೆ ಪ್ರತ್ಯುತ್ತರ ಸಲ್ಲಿಸಲು ಗುರುವಾರದವರೆಗೆ ಕಾಲಾವಕಾಶ ನೀಡಿದ ನ್ಯಾಯಾಲಯ ಸಂಜಯ್ ರಾವತ್ ಮತ್ತಿತರರನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವ ಬಗ್ಗೆ ಕಂಗನಾ ಅವರ ಅಭಿಪ್ರಾಯವನ್ನು ತಿಳಿಸಲು ಸೂಚಿಸಿತು. ಕಟ್ಟಡ ಧ್ವಂಸದ ಹಿಂದೆ ದುರುದ್ದೇಶವಿರುವುದಾಗಿ ರಾವುತ್‌ ಅವರಿಗೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷ್ಯಗಳನ್ನು ಕಂಗನಾ ನಿರೂಪಿಸಲು ಮುಂದಾದರೆ ಆಗ ರಾವತ್‌ ಅವರಿಗೆ ಆರೋಪದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವಕಾಶ ಕಲ್ಪಿಸಬೇಕಾಗುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ರಾವುತ್ ಮತ್ತು ಬಿಎಂಸಿ ಅಧಿಕಾರಿಯನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವ ಕುರಿತ ವಿಚಾರಣೆ ಬುಧವಾರ ಬೆಳಿಗ್ಗೆ 11.30ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ. ಬಿಎಂಸಿ ಪ್ರತಿಕ್ರಿಯೆಯನ್ನು ಗುರುವಾರದಂದು ಸಲ್ಲಿಸಬಹುದಾಗಿದ್ದು ಅದರ ವಿಚಾರಣೆ ಶುಕ್ರವಾರ ನಡೆಯಲಿದೆ.