PMLA 
ಸುದ್ದಿಗಳು

ಶಾರದಾ ಚಿಟ್‌ಫಂಡ್‌ ಹಗರಣ: ನ್ಯಾಯವಾದಿ ನಳಿನಿ ಚಿದಂಬರಂ ವಿರುದ್ಧದ ಪ್ರಕರಣ ವಜಾಗೊಳಿಸಿದ ಪಿಎಂಎಲ್ಎ ನ್ಯಾಯಾಲಯ

ಕಳಂಕದ ಆರೋಪ ಹೊತ್ತ ವ್ಯಕ್ತಿಗಳಿಂದ ವಕೀಲರು ಶುಲ್ಕ ಪಡೆಯುವುದು ಅಸಾಮಾನ್ಯ ಸಂಗತಿಯೇನೂ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಿಚವ ಪಿ ಚಿದಂಬರಂ ಅವರ ಪತ್ನಿ ಹಾಗೂ ವಕೀಲೆ ನಳಿನಿ ಚಿದಂಬರಂ ಅವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ರೂಪುಗೊಂಡಿರುವ ಕೊಲ್ಕತ್ತಾದ ನ್ಯಾಯಾಲಯ ಈಚೆಗೆ ವಜಾಗೊಳಿಸಿದೆ.

ನಳಿನಿ ಅವರು ಪಡೆದಿರುವ ₹ 1.35 ಕೋಟಿ ಮೊತ್ತದ ಕಾನೂನು ಶುಲ್ಕದ ತೆರಿಗೆ ಇನ್‌ವಾಯ್ಸ್‌ ಅಥವಾ ಬಿಲ್‌ ನೀಡದೆ ಇರುವುದು ಅಪರಾಧ ಎಂದು ಪರಿಗಣಿಸಲಾಗದು ಎಂಬುದಾಗಿ ನ್ಯಾ. ಪ್ರಶಾಂತ ಮುಖೋಪಾಧ್ಯಾಯ ಹೇಳಿದರು.

ಸುಮಾರು ರೂ. 2000 ಕೋಟಿ, ನಿರ್ದಿಷ್ಟವಾಗಿ 1983,02,37,713.00/- ಸಾಮೂಹಿಕ ಹೂಡಿಕೆ ಯೋಜನೆ ಹಗರಣದಲ್ಲಿ ರೂ.1.349 ಕೋಟಿ ಎಷ್ಟು ಅಲ್ಪಮೊತ್ತವೆಂದರೆ ಆ ಹಣವು ಯಾವುದೇ ಊಹಾತೀತ ಕಲ್ಪನೆಯ ಅಡಿಯಲ್ಲಿಯೂ ಅಕ್ರಮವನ್ನು ಮರೆಮಾಚುವ ಅಥವಾ ಅಕ್ರಮ ಮೂಲವನ್ನು ಮರೆಮಾಚುವ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುವುದಿಲ್ಲ. ಇನ್ನು ತಮ್ಮ ವಿರುದ್ಧ ಗಂಭೀರ ಕಾನೂನು ಸಮಸ್ಯೆಗಳು ಎದುರಾದಾಗ ಕಳಂಕಿತ ವ್ಯಕ್ತಿಗಳು ವಕೀಲರನ್ನು ಸಂಪರ್ಕಿಸುವುದು ತಮ್ಮ ಸೇವೆಗೆ ವಕೀಲರು ಶುಲ್ಕ ಪಡೆಯುವುದು ಅಸಾಮಾನ್ಯವೇನಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.

ನಳಿನಿ ಅವರು 2010ರಿಂದ 2012ರ ಅವಧಿಯಲ್ಲಿ ಶಾರದಾ ಗ್ರೂಪ್‌ನ ಹಿಂದಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ್ ಸುದೀಪ್ತೋ ಸೇನ್‌ ಅವರ ಕಂಪೆನಿಗಳ ಮೂಲಕ ಒಟ್ಟು ₹1.349 ಕೋಟಿ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ ಡಿ) ದೂರಿತ್ತು. ಹಾಗೆ ಪಡೆದ ಹಣಕ್ಕೆ ಅವರು ಯಾವುದೇ ಬಿಲ್‌ ನೀಡಿಲ್ಲ ಎಂದಿತ್ತು.

ಹಗರಣದ ಬಗ್ಗೆ ಸೆಬಿ ನಡೆಸುತ್ತಿರುವ ತನಿಖೆ ಸ್ಥಗಿತಗೊಳಿಸುವಂತೆ ಅಂದಿನ ಹಣಕಾಸು ಸಚಿವ ಪ್ರಣಬ್‌ ಮುಖರ್ಜಿ ಅವರನ್ನು ನಳಿನಿ ಮತ್ತು ಸೇನ್‌ ಕೇಳಿದ್ದರು ಎಂಬುದು ಅವರಿಬ್ಬರ ನಡುವಿನ ಇಮೇಲ್‌ ವಿನಿಮಯದಿಂದ ತಿಳಿದುಬಂದಿತ್ತು ಎಂದು ತನಿಖಾ ಸಂಸ್ಥೆ ಇ ಡಿ ದೂರಿತ್ತು.

ಆದರೆ ಅಕ್ರಮ ಮೂಲಗಳಿಂದ ಅಥವಾ ಅಂತಹ ಚಟುವಟಿಕೆಗಳನ್ನು ನಡೆಸದೆ ಪಡೆದಿರುವ ಹಣ ಇಲ್ಲವೇ ಆಸ್ತಿ ಕಳಂಕಿತವಲ್ಲ ಎಂದು ನ್ಯಾಯಾಲಯ ನುಡಿಯಿತು. ನಳಿನಿ ಅವರು ಟಿಡಿಎಸ್‌ ಮೊತ್ತ ಕಡಿತಗೊಳಿಸಿ ಬ್ಯಾಂಕ್‌ ಮೂಲಕವೇ ಹಣ ಪಡೆದಿದ್ದಾರೆ. ಒಮ್ಮೆಗೆ ₹ 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿತು.

ಅಲ್ಲದೆ ಸೆಬಿ ನಡೆಸುತ್ತಿರುವ ತನಿಖೆ ಸ್ಥಗಿತಗೊಳಿಸುವಂತೆ ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರನ್ನು ನಳಿನಿ ಮತ್ತು ಸೇನ್ ಕೇಳಿದ್ದರು ಎಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ ಎಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.