<div class="paragraphs"><p>Sarojini Nagar Market</p><p></p></div>

Sarojini Nagar Market

 
ಸುದ್ದಿಗಳು

ದೆಹಲಿ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ಕಾಲ್ತುಳಿತ ಉಂಟಾದರೆ ನೂರಾರು ಮಂದಿ ಸಾಯಬಹುದು: ದೆಹಲಿ ಹೈಕೋರ್ಟ್ ಕಳವಳ

Bar & Bench

ಸರೋಜಿನಿ ನಗರ ಮಾರುಕಟ್ಟೆಯಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಇರುವ ವೀಡಿಯೊ ವೈರಲ್‌ ಆಗಿರುವದನ್ನು ಗಮನಿಸಿದ ದೆಹಲಿ ಹೈಕೋರ್ಟ್‌ ಇಂತಹ ಸ್ಥಿತಿಯನ್ನು ಭಯಾನಕ ಎಂದು ಕರೆದಿದ್ದು ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. [ಕುಲದೀಪ್ ಸಿಂಗ್ ಸಹಾನಿ ಮತ್ತಿತರರು ಮತ್ತು ದೆಹಲಿಯ ಎನ್‌ಸಿಟಿ ಸರ್ಕಾರ ಹಾಗೂ ಇನ್ನಿತರರ ನಡುವಣ ಪ್ರಕರಣ].

ಈ ಪ್ರದೇಶವು ಈಗಾಗಲೇ 2005ರಲ್ಲಿ ಭಯೋತ್ಪಾದಕ ದಾಳಿಯನ್ನು ಕಂಡಿದ್ದು ಮಾರುಕಟ್ಟೆಯಲ್ಲಿ ಸಣ್ಣ ಬಾಂಬ್ ಸ್ಫೋಟಗೊಂಡರೆ ಅಥವಾ ನೂಕುನುಗ್ಗಲು ಉಂಟಾದರೆ ನೂರಾರು ಜನರು ಸಾಯುತ್ತಾರೆ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರ ವಿಭಾಗೀಯ ಪೀಠ ಹೇಳಿತು.

“ಕೋವಿಡ್‌ ಇರಲಿ ಅಥವಾ ಇಲ್ಲದಿರಲಿ. ಅಲ್ಲಿನ ಸ್ಥಿತಿ ಭಯ ಹುಟ್ಟಿಸುವಂತಿದೆ. ಕಾಲ್ತುಳಿತ ಸಂಭವಿಸಬಹುದು. ಸಣ್ಣ ಬಾಂಬ್ ಸ್ಫೋಟಿಸಿದರೂ ಆ ಪ್ರದೇಶದಲ್ಲಿ ಸಾಕಷ್ಟು ಜನ ಸಾಯುತ್ತಾರೆ” ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ಮಾರುಕಟ್ಟೆ ಕಿಕ್ಕಿರಿದಿರುವ ವೀಡಿಯೊ ಪ್ರದರ್ಶಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಠಾಣಾಧಿಕಾರಿ ಹಾಗೂ ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ (ಎನ್‌ಡಿಎಂಸಿ) ಜಾರಿ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಕರೆಸಿತು. ವೀಡಿಯೊ ಚಿತ್ರೀಕರಣಗೊಂಡ ದಿನ ಸುಮಾರು 80,000 ಮಂದಿ ಮಾರುಕಟ್ಟೆಗೆ ಭೇಟಿ ನೀಡಿದ್ದು ಮುಂದಿನ ದಿನಗಳಲ್ಲಿಯೂ ಇಷ್ಟೇ ಜನಜಂಗುಳಿ ಸೇರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜನರು ನದಿಯಂತೆ ಹರಿಯುತ್ತಿದ್ದು, ಕೋವಿಡ್ ಸಾಂಕ್ರಾಮಿಕ ಹರಡಿ ಅಥವಾ ಕಾಲ್ತುಳಿತದಿಂದ ಒಬ್ಬ ವ್ಯಕ್ತಿ ಸತ್ತರೂ ಕೂಡ ಅದರ ಜವಾಬ್ದಾರಿಯನ್ನು ಪೊಲೀಸರು ಮತ್ತಿತರ ಅಧಿಕಾರಿಗಳ ಮೇಲೆ ಹೊರಿಸಲಾಗುವುದು. ಅವರು ವ್ಯಾಪಾರಿಗಳು, ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಎಂದು ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದರು.

ಸಂಚಾರದ ಸ್ಥಳವನ್ನು ಅತಿಕ್ರಮಿಸದಂತೆ ಕಂಬ ಮತ್ತು ಸರಪಳಿ ಅಳವಡಿಸಬೇಕು. ಅತಿಕ್ರಮಿತ ಪ್ರದೇಶಗಳನ್ನು ಬಣ್ಣದಿಂದ ಗುರುತು ಹಾಕಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪಾರಿಗಳು ಮತ್ತು ಅತಿಕ್ರಮಣಕಾರರಿಂದ ವಶಪಡಿಸಿಕೊಂಡ ವಸ್ತುಗಳನ್ನು ಅವರಿಗೆ ಹಿಂತಿರುಗಿಸಬಾರದು ಎಂದು ಪೀಠ ಸೂಚಿಸಿದೆ. ಸರೋಜಿನಗರ ಪ್ರದೇಶದಲ್ಲಿ ಒತ್ತುವರಿ ಕುರಿತು ಅಧಿಕಾರಿಗಳು ನಿಷ್ಕ್ರಿಯವಾಗಿರುವ ಬಗ್ಗೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿರುವುದು ಇದೇ ಮೊದಲಲ್ಲ.