ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿಯವರ ‘ಮುಹಮ್ಮದ್’ ಕೃತಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ನಿರ್ವಹಣೆಯ ಆಧಾರದಲ್ಲಿ ತಿರಸ್ಕರಿಸಿದೆ. (ಖಮರ್ ಹಸ್ನೈನ್ ಮತ್ತು ಸೈಯದ್ ವಸೀಮ್ ರಿಜ್ವಿ ಮತ್ತಿತರರ ನಡುವಣ ಪ್ರಕರಣ).
ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ರಿಜ್ವಿ, ಈಗ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂದು ತಮ್ಮನ್ನು ಗುರುತಿಸಿಕೊಂಡಿದ್ದು ಕೇಂದ್ರ ಶಿಯಾ ವಕ್ಫ್ ಮಂಡಳಿಯ ಮಾಜಿ ಸದಸ್ಯ ಮತ್ತು ಅಧ್ಯಕ್ಷರಾಗಿದ್ದವರು. ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಕುರಿತು ಪುಸ್ತಕ ಬರೆದಿದ್ದ ಅವರು ಅದನ್ನು ಖುದ್ದು ಪ್ರಕಟಿಸಿದ್ದರು.
ಶಿಯಾ ಧಾರ್ಮಿಕ ವಿದ್ವಾಂಸ ಎಂದು ಹೇಳಿಕೊಳ್ಳುವ ಖಮರ್ ಹಸ್ನೈನ್ ಎಂಬ ವ್ಯಕ್ತಿ ಈ ದೂರು ದಾಖಲಿಸಿದ್ದಾರೆ. ಪುಸ್ತಕದಲ್ಲಿ ಇಸ್ಲಾಂ, ಖುರಾನ್ ಹಾಗೂ ಪ್ರವಾದಿ ವಿರುದ್ಧ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದ್ದು ಇದರಿಂದ ಕೋಮು ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತದೆ ಎಂದು ಅವರು ಆರೋಪಿಸಿದ್ದರು. ಇಸ್ಲಾಂ ಧರ್ಮದ ಅನುಯಾಯಿಗಳಿಗಿರಲಿ, ಸಾಮಾನ್ಯ ಓದುಗರಿಗೆ ಕೂಡ ಪುಸ್ತಕದಲ್ಲಿ ಆಕ್ರಮಣಕಾರಿ, ದ್ವೇಷ ಮತ್ತು ಆತಂಕಕರ ವಿಚಾರಗಳು ಕಾಣಸಿಗುತ್ತವೆ. ಆದ್ದರಿಂದ ರಿಜ್ವಿ ಅವರಿಗೆ ಸಂವಿಧಾನದ 19 (1) (ಎ) ಅಡಿಯಲ್ಲಿ ರಕ್ಷಣೆ ನೀಡಬಾರದು ಎಂದು ಅವರು ಮನವಿಯಲ್ಲಿ ತಿಳಿಸಿದ್ದರು.
ಆದರೆ ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಏಕಸದಸ್ಯ ಪೀಠವು “ಅರ್ಜಿದಾರರು ಕೋರಿರುವ ಪರಿಹಾರಗಳು ಪ್ರಾತಿನಿಧಿಕ (ಸಮೂಹವನ್ನು ಪ್ರತಿನಿಧಿಸುವ ರೀತಿಯವು) ಸ್ವರೂಪದವಾಗಿದ್ದು ವೈಯಕ್ತಿಕವಾಗಿಲ್ಲ” ಹಾಗಾಗಿ ಅರ್ಜಿಗೆ ಸೂಕ್ತ ಆಧಾರವಿಲ್ಲ ಎಂದಿತು. ವೈಯಕ್ತಿಕ ಕಾನೂನು ಹಕ್ಕು, ವೈಯಕ್ತಿಕ ಕಾನೂನು ಹಾನಿ ಮತ್ತು ಅರ್ಜಿದಾರರಿಗೆ ಖುದ್ದು ಹಾಗೂ ಕಾನೂನಾತ್ಮಕ ಧಕ್ಕೆ ಉಂಟಾಗಿದ್ದರೆ ಮೊಕದ್ದಮೆಯನ್ನು ಕೈಗೆತ್ತಿಕೊಳ್ಳಹುದಿತ್ತು. ಆದರೆ ಧರ್ಮಕ್ಕೆ ವಿರುದ್ಧವಾಗಿರುವ ಕಾರಣಕ್ಕೆ ಪ್ರಕರಣ ಕೈಗೆತ್ತಿಕೊಳ್ಳಿ ಎನ್ನಲಾಗದು. ಇದನ್ನು ಕ್ರಿಮಿನಲ್ ಕಾನೂನಿನ ಅಡಿ ಮಾಡಬಹುದಾಗಿತ್ತು. ಆದರೆ ಇಲ್ಲಿ ಹಾಗೆ ಆಗಿಲ್ಲ ಎಂದು ನ್ಯಾಯಮೂರ್ತಿಗಳು ವಿವರಿಸಿದರು.
ದ್ವೇಷ ಭಾಷಣ ಕುರಿತು ಅಲಾಹಾಬಾದ್ ಹೈಕೋರ್ಟ್ 1918ರಲ್ಲಿ ನೀಡಿದ್ದ ತೀರ್ಪು ಮತ್ತು ಕಾನೂನು ಆಯೋಗದ ವರದಿಯ ಕುರಿತು ಅಸ್ಪಷ್ಟ ಉಲ್ಲೇಖಗಳನ್ನು ಮಾಡಲಾಗಿದೆ. ಆದರೆ ತೀರ್ಪಿನ ವಿವರವನ್ನು ಪ್ರಸ್ತಾಪಿಸದ ಹಿನ್ನೆಲೆಯಲ್ಲಿ ಅದು ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ನಿಯಮಗಳು ಅರ್ಜಿಯನ್ನು ಕೈಗೆತ್ತಿಕೊಳ್ಳುವಂತೆ ಹೇಳುತ್ತಿಲ್ಲ ಹೀಗಾಗಿ ಇದನ್ನು ತಿರಸ್ಕರಿಸಲಾಗುವುದು ಎಂದು ನ್ಯಾ. ನರುಲಾ ಹೇಳಿದರು. ಇಷ್ಟಾದರೂ ಪುಸ್ತಕದಲ್ಲಿರುವ ವಿಚಾರದ ಅರ್ಹತೆಯನ್ನು ನ್ಯಾಯಾಲಯ ಪ್ರಸ್ತಾಪಿಸಿಲ್ಲ. ಹೀಗಾಗಿ ಫಿರ್ಯಾದಿಯು ಕಾನೂನಿನ ಅಡಿಯಲ್ಲಿ ತನ್ನ ಹಕ್ಕು ಮತ್ತು ಕಾನೂನಾತ್ಮಕ ಹಕ್ಕುಗಳನ್ನು ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಅದು ಹೇಳಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: