Himachal Pradesh High Court  
ಸುದ್ದಿಗಳು

ಭಾರತವನ್ನು ಖಂಡಿಸದೆ ʼಪಾಕಿಸ್ತಾನ ಜಿಂದಾಬಾದ್ʼ ಎಂದರೆ ಅದು ದೇಶದ್ರೋಹವಲ್ಲ: ಹಿಮಾಚಲ ಪ್ರದೇಶ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿಯವರ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಿತ್ರವನ್ನು 'ಪಾಕಿಸ್ತಾನ ಜಿಂದಾಬಾದ್' ಎಂಬ ಪದಗಳೊಂದಿಗೆ ಹಂಚಿಕೊಂಡ ಆರೋಪ ಹೊತ್ತ ವ್ಯಕ್ತಿಗೆ ಆಗಸ್ಟ್ 19ರಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

Bar & Bench

ಭಾರತವನ್ನು ಖಂಡಿಸದೆ ಬೇರೆ ದೇಶವನ್ನು ಹೊಗಳಿದರೆ ಅದು ದೇಶದ್ರೋಹವಲ್ಲ ಏಕೆಂದರೆ ಅದು ಪ್ರತ್ಯೇಕತಾವಾದ ಅಥವಾ ವಿಧ್ವಂಸಕ ಚಟುವಟಿಕೆಗೆ ಕುಮ್ಮಕ್ಕು ನೀಡುವುದಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸುಲೇಮಾನ್ ಮತ್ತು ಹಿಮಾಚಲ ಪ್ರದೇಶ ಸರ್ಕಾರ ನಡುವಣ ಪ್ರಕರಣ] .

ಪ್ರಧಾನಿ ನರೇಂದ್ರ ಮೋದಿಯವರ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಿತ್ರವನ್ನು 'ಪಾಕಿಸ್ತಾನ ಜಿಂದಾಬಾದ್' ಎಂಬ ಪದಗಳೊಂದಿಗೆ ಹಂಚಿಕೊಂಡ ಆರೋಪ ಹೊತ್ತ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ರಾಕೇಶ್ ಕೈಂತ್ಲಾ ಈ ವಿಚಾರ ತಿಳಿಸಿದರು.

ಆರೋಪಿತ ವ್ಯಕ್ತಿ ವಿರುದ್ಧ ಭಾರತದಲ್ಲಿ ಕಾನೂನುರೀತ್ಯ ಸ್ಥಾಪಿತವಾದ ಸರ್ಕಾರದ ಬಗ್ಗೆ ದ್ವೇಷ ಅಥವಾ ಅಸಮಾಧಾನ ಉಂಟಾದ ಯಾವುದೇ ಆರೋಪ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ತಾಯ್ನಾಡನ್ನು ಖಂಡಿಸದೆಯೇ ಇನ್ನೊಂದು ದೇಶವನ್ನು ಹೊಗಳುವುದು ದ್ರೋಹವಲ್ಲ, ಏಕೆಂದರೆ ಅದು ಸಶಸ್ತ್ರ ದಂಗೆ, ಪ್ರತ್ಯೇಕತಾವಾದಿ ಇಲ್ಲವೇ ವಿಧ್ವಂಸಕ ಚಟುವಟಿಕೆಗೆ ಪ್ರೇರೇಪಿಸುವುದಿಲ್ಲ. ಆದ್ದರಿಂದ, ಆರೋಪಿಯನ್ನು ಅಪರಾಧದೊಂದಿಗೆ ನಂಟು ಕಲ್ಪಿಸಲು ಸಾಕಷ್ಟು ಸಾಕ್ಷ್ಯವಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.

ಆರೋಪಿ ಸುಲೇಮಾನ್  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಎಂದು ಪರಿಗಣಿಸಿ ಕಳೆದ ಮೇನಲ್ಲಿ  ಸಿರ್ಮೌರ್ ಜಿಲ್ಲೆಯ ಪೌಂಟಾ ಸಾಹಿಬ್ ಪೊಲೀಸರು ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿ ಜುಲೈ 8 ರಂದು ಪೊಲೀಸರ ಮುಂದೆ ಶರಣಾಗಿದ್ದರು.

ದೇಶದ್ರೋಹವನ್ನು ಅಪರಾಧೀಕರಿಸುತ್ತಿದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) 124ಎ ಬದಲು ಜಾರಿಗೆ ಬಂದಿರುವ ಹೊಸ ಕಾನೂನು ಬಿಎನ್ಎಸ್ ಸೆಕ್ಷನ್ 152ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು

ಸುಲೇಮಾನ್ ಅವರನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದ್ದು ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿರುವುದರಿಂದ, ಅವರನ್ನು ಕಸ್ಟಡಿಯಲ್ಲಿ ಇಡುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಅವರ ವಕೀಲರು ನ್ಯಾಯಾಲಯದೆದುರು ವಾದಿಸಿದರು.

ಆದರೆ, ಪೋಸ್ಟ್ ಹಂಚಿಕೊಂಡಾಗ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿತ್ತು. ಅಂತಹ ಸಂದರ್ಭದಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಬರೆಯುವುದು ರಾಷ್ಟ್ರವಿರೋಧಿ ಕೃತ್ಯ ಎಂದು ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ವಾದ ಆಲಿಸಿದ ನ್ಯಾಯಾಲಯ ʼಆರೋಪಿಗೂ. ನಡೆದಿದೆ ಎನ್ನಲಾದ ಕೃತ್ಯಕ್ಕೂ ನಂಟು ಕಲ್ಪಿಸಲು ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ತಿಳಿಸಿತು. ಪೊಲೀಸರು ಈಗಾಗಲೇ ಎಲೆಕ್ಟ್ರಾನಿಕ್ ಸಾಧನವನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಹೀಗಾಗಿ ಅವರನ್ನು ಪೊಲೀಸರ ವಶದಲ್ಲಿ ಇರಿಸುವುದರಿಂದ ಯಾವುದೇ ಉದ್ದೇಶ ಇಡೇರುವುದಿಲ್ಲ ಎಂದು ತಿಳಿಸಿ ಜಾಮೀನು ನೀಡಿತು.