Advocate Prashant Bhushan
Advocate Prashant Bhushan 
ಸುದ್ದಿಗಳು

ನ್ಯಾಯಾಂಗ ನಿಂದನಾ ತೀರ್ಪು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ, ಪರಿಷತ್ತು ಸ್ಪಷ್ಟನಿಲುವು ತಳೆಯಲಿ: ಭೂಷಣ್ ಪ್ರತಿಕ್ರಿಯೆ

Bar & Bench

ನ್ಯಾಯಾಂಗವನ್ನು ವಿಮರ್ಶಿಸಿದ್ದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂ‍ಷಣ್ ಅವರನ್ನು ಅಪರಾಧಿ ಎಂದು ಘೋಷಿಸಿರುವುದನ್ನು ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ವೃತ್ತಿಪರ ದುರ್ನಡತೆಯಡಿ ಏಕೆ ಕ್ರಮಕೈಗೊಳ್ಳಬಾರದು ಎಂದು ಕಾರಣಕೇಳಿ ನೋಟಿಸ್ ಜಾರಿಗೊಳಿಸಿರುವ ದೆಹಲಿ ವಕೀಲರ ಪರಿಷತ್ತಿಗೆ (ಬಿಸಿಡಿ) ಭೂಷಣ್ ಪ್ರತಿಕ್ರಿಯಿಸಿದ್ದಾರೆ.

ಬಿಸಿಡಿ ನೋಟಿಸ್‌ಗೆ ಸೆಪ್ಟೆಂಬರ್ 30ರಂದು ಪ್ರತಿಕ್ರಿಯಿಸಿರುವ ಭೂಷಣ್ ಅವರು ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ತನ್ನನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿರುವುದು “ವಾಕ್ ಸ್ವಾತಂತ್ರ್ಯ ಮತ್ತು ವಕೀಲರ ಪರಿಷತ್ತಿನ ಸ್ವಾತಂತ್ರ್ಯದ ಮೇಲೆ ನಡೆಸಿರುವ ಮೂಲಭೂತ ದಾಳಿಯಾಗಿದೆ. ಈ ಸಂದರ್ಭದಲ್ಲಿ ಕಾನೂನು ವೃತ್ತಿಯಲ್ಲಿರುವ ಸದಸ್ಯರ ಪರವಾಗಿ ವಕೀಲರ ಪರಿಷತ್ತು ನಿಲ್ಲಬೇಕು” ಎಂದು ಭೂಷಣ್ ಆಗ್ರಹಿಸಿದ್ದಾರೆ.

“ಸುಪ್ರೀಂ ಕೋರ್ಟ್ ತೀರ್ಪು ವಕೀಲರ ಪರಿಷತ್ತಿನ ಸದಸ್ಯ ಮತ್ತು ಸಾಮಾನ್ಯ ಪ್ರಜೆಯ ಸ್ವಾತಂತ್ರ್ಯ, ಹಕ್ಕು ಮತ್ತು ಘನತೆಗೆ ತಡೆಯೊಡ್ಡಿದ್ದು, ಅದನ್ನು ಸೀಮಿತಗೊಳಿಸಿದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು” ಎಂದು ವಕೀಲರ ಪರಿಷತ್ತನ್ನು ಭೂಷಣ್ ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರ ಪರಿಷತ್ತು ವರ್ಸಸ್ ಭಾರತ ಸರ್ಕಾರ ಪ್ರಕರಣವನ್ನು ಪ್ರಸ್ತಾಪಿಸಿರುವ ಭೂಷಣ್ ಅವರು ವೃತ್ತಿಪರ ದುರ್ನಡತೆಗೆ ಸಂಬಂಧಿಸಿದಂತೆ ವಕೀಲರ ಪರವಾನಗಿ ರದ್ದುಗೊಳಿಸುವುದು ಅಥವಾ ರಾಜ್ಯ ವಕೀಲರ ಪರಿಷತ್ತಿನಿಂದ ಅವರನ್ನು ಕೈಬಿಡುವ ಮೂಲಕ ಶಿಕ್ಷಿಸುವ ವಿಶೇಷ ಅಧಿಕಾರ ವಕೀಲರ ಕಾಯಿದೆ-1961 ಅಡಿ ಸ್ಥಾಪಿತವಾಗಿರುವ ಶಾಸನಬದ್ಧವಾದ ವಕೀಲರ ಪರಿಷತ್ತಿನ ಅಧಿಕಾರಿಗಳದ್ದಾಗಿರುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ.

“ವಕೀಲರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಂತ ಮುಖ್ಯವಾಗಿದ್ದು, ಇದರಿಂದ ವಕೀಲಿಕೆಯಲ್ಲಿರುವವರು ಸ್ವತಂತ್ರವಾಗಿ ನ್ಯಾಯಾಲಯದ ಕಾರ್ಯಚಟುವಟಿಕೆಯ ಬಗ್ಗೆ ಮುಕ್ತವಾಗಿ, ಯಾವುದೇ ರೀತಿಯ ಅಳುಕಿಲ್ಲದೇ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ. ಇದೇ ಕಾರಣಕ್ಕಾಗಿ ನ್ಯಾಯಾಂಗ ಮತ್ತು ಸರ್ಕಾರದ ಹಿಡಿತದಿಂದ ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತುಗಳ ಆಡಳಿತಾತ್ಮಕ ಹಾಗೂ ಕಾರ್ಯಚಟುವಟಿಕೆಗಳನ್ನು ಮುಕ್ತವಾಗಿರಿಸಲಾಗಿದೆ.”
ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ

ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಆಧರಿಸಿ ತಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ ಭೂಷಣ್ ಅವರು 11 ಕಾರಣಗಳನ್ನು ನೀಡಿದ್ದಾರೆ.

ವಕೀಲರ ಪರಿಷತ್ತಿನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಸ್ಪಷ್ಟ ನಿಲುವು ತಳೆಯುವಂತೆ ದೆಹಲಿ ವಕೀಲರ ಪರಿಷತ್ತಿಗೆ ಮನವಿ ಮಾಡಿರುವ ಭೂಷಣ್ ಅವರು “ಸ್ವಾತಂತ್ರ್ಯ, ಘನತೆ, ಹಕ್ಕುಗಳು ಮತ್ತು ವಕೀಲರ ಪರಿಷತ್ತಿನ ಸ್ವಾತಂತ್ರ್ಯಕ್ಕೆ ಹೊಡೆತ ಬಿದ್ದಿದೆ” ಎಂದು ಹೇಳಿದ್ದಾರೆ.

“ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ವಕೀಲರ ಪರಿಷತ್ತು ಮತ್ತು ವಕೀಲಿಕೆಯಲ್ಲಿರುವವರ ಸ್ವಾತಂತ್ರ್ಯ ಅತ್ಯಗತ್ಯ” ಎಂದು ಒತ್ತಿ ಹೇಳಿದ್ದಾರೆ. ಒಂದೊಮ್ಮೆ ಪ್ರಕ್ರಿಯೆಗೆ ತಡೆ ನೀಡಲು ಬಿಸಿಡಿ ನಿರಾಕರಿಸಿದರೆ, ಈಗಾಗಲೇ ನ್ಯಾಯಾಂಗ ನಿಂದನೆ ತೀರ್ಪು ಮತ್ತು ಶಿಕ್ಷೆ ಎರಡೂ ಪ್ರಕರಣಗಳಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದು, ಅದು ನಿರ್ಧಾರವಾಗುವವರೆಗೆ ಪ್ರಕ್ರಿಯೆ ನಿಲ್ಲಿಸುವಂತೆ ಭೂಷಣ್ ಕೋರಿದ್ದಾರೆ. ಇಷ್ಟೆಲ್ಲದರ ನಡುವೆಯೂ ವಕೀಲರ ಪರಿಷತ್ತು ಪ್ರಕ್ರಿಯೆ ಮುಂದುವರಿಸಿದರೆ ಹೆಚ್ಚಿನ ಪ್ರತಿಕ್ರಿಯೆಯನ್ನು ಪರಿಸ್ಥಿತಿ ಅವಲೋಕಿಸಿ ದಾಖಲಿಸುವುದಾಗಿ ತಿಳಿಸಿದ್ದಾರೆ.