RBI 
ಸುದ್ದಿಗಳು

ಸಾಲ ಮರುಪಾವತಿ ಅವಧಿ ವಿಸ್ತರಣೆಯ ಮಧ್ಯಂತರ ಆದೇಶವನ್ನು ಸೆ.28ರವರೆಗೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಮೊರೆಟೊರಿಯಂ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದ ನ್ಯಾಯಪೀಠವು ಅಲ್ಲಿಯವರೆಗೆ ಈ ಹಿಂದಿನ ವಿಚಾರಣೆಯ ವೇಳೆ ನೀಡಿದ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ ಎಂದಿತು.

Bar & Bench

ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಅವಧಿಯಲ್ಲಿ (ಮೊರೆಟೊರಿಯಂ) ಬಡ್ಡಿ ಮನ್ನಾ ಮಾಡುವಂತೆ ಕೋರಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಡ್ಡಿಗೆ ಸಂಬಂಧಿಸಿದಂತೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದರ ಸಂಬಂಧ ಹಾಗೆ ಮಾಡಲಾಗದು ಎಂದು ಆದೇಶಿಸುವ ಯೋಚನೆಯಲ್ಲಿರುವುದಾಗಿ ಗುರುವಾರ ಹೇಳಿತು.

ಎಲ್ಲರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ಅವರಿದ್ದ ಪೀಠವು ಸೆಪ್ಟೆಂಬರ್ 28ಕ್ಕೆ ಮೊರೆಟೊರಿಯಂ ವಿಚಾರಣೆ ಮುಂದೂಡಿತು. ಅಲ್ಲಿಯವರೆಗೆ ಈ ಹಿಂದಿನ ವಿಚಾರಣೆಯ ವೇಳೆ ನೀಡಿದ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ ಎಂದು ಹೇಳಿತು.

ಕೇಂದ್ರ ಸರ್ಕಾರವು ಯೋಜಿತ ಮತ್ತು ಸಮಗ್ರ ವಿಧಾನವನ್ನು ಅನುಸರಿಸಬೇಕು. ಇದಕ್ಕೆ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗುವುದು. ವಿಭಿನ್ನ ಸಂದರ್ಭದಲ್ಲಿ ಪರಿಹಾರ ನಿರೀಕ್ಷಿಸುವಂತೆ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಸಾಲಗಾರರಿಗೆ ಹೇಳಲಾಗದು. ಬಡ್ಡಿಯ ವೆಚ್ಚ ಕಡಿತ ಮಾಡುವುದು ಹಾಗೂ ಖಾತೆಯನ್ನು ಕೆಳದರ್ಜೆಗಿಳಿಸುವ ಆತಂಕಗಳಿಗೆ ಸರ್ಕಾರ ಪ್ರತಿಕ್ರಿಯಿಸಬೇಕು ಎಂದಿರುವ ನ್ಯಾಯಾಲಯವು ಸಮಂಜಸವಾದ ದಾಖಲೆ ಮತ್ತು ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತು.

ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಎರಡು ಮೂರು ಸುತ್ತಿನ ಮಾತುಕತೆಗಳು ಸಂಬಂಧಪಟ್ಟ ಭಾಗೀದಾರ ಸಂಸ್ಥೆಗಳೊಂದಿಗೆ ನಡೆದಿದೆ” ಎಂದರು. ಆಗ ಮಧ್ಯಪ್ರವೇಶಿಸಿದ ನ್ಯಾಯಪೀಠವು “ಎಲ್ಲಾ ಕ್ಷೇತ್ರಗಳನ್ನೂ ಒಳಗೊಳ್ಳುವ ನಿರ್ದಿಷ್ಟ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು” ಎಂದಿತು.

ಬ್ಯಾಂಕುಗಳ ಒಕ್ಕೂಟದ ಪರವಾದಿಸಿದ ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಅವರು “ವೈಯಕ್ತಿಕ ಸಾಲಗಾರರಿಗೆ ಸಂಬಂಧಿಸಿದ ಸವಾಲುಗಳು ತಕ್ಷಣದ ತುರ್ತಾಗಿದೆ. ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕಿರುವುದು ಅರ್ಥಿಕ ಸಚಿವಾಲಯವೇ ಹೊರತು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಲ” ಎಂದರು.

ರಿಯಲ್‌ ಎಸ್ಟೇಟ್‌ ಒಕ್ಕೂಟಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್‌ “ಸಾಲಗಾರರನ್ನು ಕೆಳದರ್ಜೆಗಿಳಿಸುವುದು ಈಗಲೂ ನಡೆಯುತ್ತಿದೆ. ಈ ರೀತಿ ಅವರನ್ನು ವಿತ್ತೀಯ ಮೌಲ್ಯಮಾಪನದ ಮೂಲಕ ಕೆಳದರ್ಜೆಗೆ ಇಳಿಸುವ ಕ್ರಮದಿಂದ ರಕ್ಷಣೆ ನೀಡಬೇಕು” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

“ಬಡ್ಡಿಯ ಮೇಲೆ ಬಡ್ಡಿ ವಿಧಿಸುವ ಕೆಲಸವನ್ನು ಬ್ಯಾಂಕುಗಳು ಈಗಲೂ ಮಾಡುತ್ತಿವೆ” ಎಂದು ಹಿರಿಯ ವಕೀಲ ರಾಜೀವ್ ದತ್ತ ಪೀಠದ ಗಮನಸೆಳೆದರು. ಈ ವಿಚಾರವಾಗಿ ಸರ್ಕಾರ ಸ್ಪಷ್ಟ ನಿರ್ಧಾರವನ್ನು ತಿಳಿಸಬೇಕು. ಸಾಲಗಳ ಮರುಸಂಯೋಜನೆಯನ್ನು ಮುಂಚಿತವಾಗಿಯೇ ಮಾಡಬಹುದಿತ್ತು ಎಂದು ವಾದಿಸಿದರು.

ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದೂ ಸೇರಿದಂತೆ ಇಂದಿನ ವಿಚಾರಣೆಯ ಎಲ್ಲ ಅಂಶಗಳ ಕುರಿತು ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯವು ಕಟ್ಟುನಿಟ್ಟಿನ ಸೂಚನೆ ನೀಡಿತು.