Hathras Gang-rape case 
ಸುದ್ದಿಗಳು

ಹಾಥ್‌ರಸ್‌ ಪ್ರಕರಣ: ಅಲಾಹಾಬಾದ್‌ ಹೈಕೋರ್ಟ್‌ ಹೆಗಲಿಗೆ ತನಿಖೆಯ ಮೇಲ್ವಿಚಾರಣೆ?!

ʼನಾವು ಅಂತಿಮ ಮೇಲ್ವಿಚಾರಕರು ಮತ್ತು ಮೇಲ್ಮನವಿ ಸಂಸ್ಥೆ ಎಂಬರ್ಥದಲ್ಲಿ ಮೇಲ್ವಿಚಾರಣೆ ಮಾಡುತ್ತೇವೆʼ ಎಂದು ಸಿಜೆಐ ಬೊಬ್ಡೆ ವಿಚಾರಣೆ ವೇಳೆ ಸ್ಪಷ್ಟಪಡಿಸಿದರು.

Bar & Bench

ಹಾಥ್‌ರಸ್‌ ಪ್ರಕರಣದ ಮೇಲ್ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಅಲಾಹಾಬಾದ್‌ ಹೈಕೋರ್ಟಿಗೆ ವಹಿಸುವ ಸಾಧ್ಯತೆಗಳಿವೆ. ಈ ಕುರಿತಂತೆ ಗುರುವಾರ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಸುಳಿವು ನೀಡಿದ್ದಾರೆ. ಇಷ್ಟಾದರೂ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ. ತನಿಖೆಯ ಮೇಲ್ವಿಚಾರಣೆಯನ್ನು ನೇರವಾಗಿ ಸುಪ್ರೀಂಕೋರ್ಟ್‌ ನಡೆಸಬೇಕೆಂದು ಅರ್ಜಿದಾರರು ಮತ್ತು ಮಧ್ಯಪ್ರವೇಶಗಾರರು ಕೋರಿದ್ದರು.

ಮುಖ್ಯ ನ್ಯಾಯಮೂರ್ತಿ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ, ವಿ ಎಸ್‌ ರಾಮಸುಬ್ರಮಣಿಯನ್‌ ಪ್ರಕರಣದ ಕೆಲ ಅರ್ಜಿಗಳ ವಿಚಾರಣೆ ನಡೆಸಿದರು. ಆಗ ನ್ಯಾ. ಬೊಬ್ಡೆ, “ಈ ವಿಚಾರ ಅಲಾಹಾಬಾದ್‌ ಹೈಕೋರ್ಟಿಗೆ ಹೋಗಬೇಕು ಎಂದು ಕಳೆದ ಬಾರಿ ವಕೀಲರು ಸೂಕ್ತ ಸಲಹೆ ನೀಡಿದ್ದರು ಎನಿಸುತ್ತದೆ” ಎಂಬುದಾಗಿ ಹೇಳಿದರು.

ಇದಕ್ಕೂ ಮೊದಲು ಮೃತ ಸಂತ್ರಸ್ತೆಯ ಕುಟುಂಬದ ಪರವಾಗಿ ವಾದ ಮಂಡಿಸಿದ ವಕೀಲೆ ಸೀಮಾ ಕುಶ್ವಾಹಾ ಅವರು ʼವಿಚಾರಣೆಯನ್ನು ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸಬೇಕುʼ ಎಂದು ಕೋರಿದ್ದರು.

“ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಸಂತ್ರಸ್ತೆಯ ಕುಟುಂಬ ಬಯಸುತ್ತಿದೆ. ಅದರಿಂದ ಸರ್ಕಾರಕ್ಕೇನೂ ತೊಂದರೆ ಇಲ್ಲ…” ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು. ಆಗ ನ್ಯಾ. ಬೊಬ್ಡೆ, ʼನಾವು ಅಂತಿಮ ಮೇಲ್ವಿಚಾರಕರು ಮತ್ತು ಮೇಲ್ಮನವಿ ಸಂಸ್ಥೆ ಎಂಬರ್ಥದಲ್ಲಿ ಮೇಲ್ವಿಚಾರಣೆ ಮಾಡುತ್ತೇವೆʼ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮೆಹ್ತಾ ʼಅಲಾಹಾಬಾದ್‌ ಹೈಕೋರ್ಟಿನಲ್ಲಿ ಸಂತ್ರಸ್ತೆಯ ಗುರುತು ಬಹಿರಂಗಗೊಂಡಿದೆ. ಅಪರಾಧ ದಂಡ ಸಂಹಿತೆ ಪ್ರಕಾರ ಇದಕ್ಕೆ ಅನುಮತಿ ಇಲ್ಲʼ ಎಂದು ವಾದಿಸಿದರು. ಆಗ ನ್ಯಾ. ಬೊಬ್ಡೆ, ʼಆ ಸ್ವಯಂಪ್ರೇರಿತ ಅರ್ಜಿಯನ್ನು ತೆಗೆದುಹಾಕೋಣʼ ಎಂದರು.

ಪ್ರಕರಣದಲ್ಲಿ ಮಧ್ಯಪ್ರವೇಶಕಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, “ನ್ಯಾಯಾಲಯ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರನ್ನು ನೇಮಿಸಬೇಕೆಂದು ನಾವು ಕೋರುತ್ತೇವೆ. ಉತ್ತರಪ್ರದೇಶ ಸರ್ಕಾರ ಸಾಕ್ಷಿಗಳಿಗೆ ಒದಗಿಸಿರುವ ರಕ್ಷಣೆ ತೃಪ್ತಿಕರವಾಗಿಲ್ಲ. ಪ್ರಕರಣ ಉತ್ತರಪ್ರದೇಶ ಸರ್ಕಾರ ವಿರುದ್ಧ ಇದೆ. ಉನ್ನಾವ್‌ ಪ್ರಕರಣದಂತೆಯೇ (ಸಾಕ್ಷಿಗಳ ರಕ್ಷಣೆಗೆ) ಸಿಆರ್‌ಪಿಎಫ್‌ ಪಡೆಯನ್ನು ನಿಯೋಜಿಸಬಹುದು” ಎಂದು ಹೇಳಿದರು.

ಆರೋಪಿಗಳ ಪರ ವಾದ ಮಂಡಿಸಿದ ಸಿದ್ಧಾರ್ಥ್‌ ಲೂಥ್ರಾ “ವಿಚಾರಣೆ ನಡೆಯುತ್ತಿರುವಾಗ ಸಂತ್ರಸ್ತೆಯ ಕುಟುಂಬ ತನಿಖೆಯ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುವಂತಿಲ್ಲ” ಎಂದು ಕೋರಿದರು. ಆಗ ನ್ಯಾ. ಬೊಬ್ಡೆ ಈ ಕುರಿತು ಅಲಾಹಾಬಾದ್‌ ಹೈಕೋರ್ಟಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು.

ಡಿಜಿಪಿ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, “ಕೋರ್ಟ್‌ ಬಯಸುವ ಭದ್ರತೆಯನ್ನು ನಿಯೋಜಿಸಬೇಕು, ಆದರೆ ಯಾವುದೇ ನಿಟ್ಟಿನಲ್ಲೂ ಈ ಕ್ರಮ ಉತ್ತರಪ್ರದೇಶ ಪೊಲೀಸರ ಮೇಲಿನ ಪ್ರತಿಬಿಂಬ ಆಗಿರಬಾರದು” ಎಂದು ಹೇಳಿದರು.

ಮಧ್ಯಪ್ರವೇಶಗಾರ ಸಂಸ್ಥೆಯೊಂದರ ಪರ ವಾದ ಮಂಡಿಸುವ ವಕೀಲೆ ಅರ್ಪಣಾ ಭಟ್‌ ಅವರ ಯತ್ನಕ್ಕೆ ಸಾಲಿಸಿಟರ್‌ ಜನರಲ್‌ ಮೆಹ್ತಾ, ಆಕ್ಷೇಪ ವ್ಯಕ್ತಪಡಿಸಿದರು. "ಸಂತ್ರಸ್ತೆಯ ಹೆಸರಿನಲ್ಲಿ ಹಣ ಸಂಗ್ರಹಿಸಲು ಯಾರಿಗೂ ಅವಕಾಶ ನೀಡಬಾರದು" ಎಂದು ಹೇಳಿದರು. ಅಲ್ಲದೆ ʼಸಿಆರ್‌ಪಿಎಫ್ ಕೂಡ ಅಗತ್ಯವಿಲ್ಲ, ಉತ್ತರ ಪ್ರದೇಶ ಸರ್ಕಾರ ನಿಸ್ಪಕ್ಷಪಾತವಾಗಿದೆʼ ಎಂದು ಅವರು ವಾದಿಸಿದರು. ವಿವಿಧ ಮಧ್ಯಪ್ರವೇಶಗಾರರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದೆ.