Justice (Rtrd.) H N Nagamohan Das
Justice (Rtrd.) H N Nagamohan Das Youtube
ಸುದ್ದಿಗಳು

ರಾಷ್ಟ್ರದ್ರೋಹ ಕಾನೂನು ವಜಾಗೊಳಿಸುವ ಸುವರ್ಣಾವಕಾಶ ಕಳೆದುಕೊಂಡ ಸುಪ್ರೀಂ ಕೋರ್ಟ್‌: ನ್ಯಾ. ನಾಗಮೋಹನ್‌ ದಾಸ್‌

Siddesh M S

“ಕಳೆದ ವರ್ಷ ಏಕಾಏಕಿ ಲಾಕ್‌ಡೌನ್‌ ಘೋಷಿಸಿದ್ದ‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ವಿಮರ್ಶಿಸಿದ್ದ ಹಿರಿಯ ಪತ್ರಕರ್ತ ವಿನೋದ್‌ ದುವಾ ಅವರ ವಿರುದ್ಧದ ದೇಶದ್ರೋಹ ಪ್ರಕರಣವನ್ನು ವಜಾಗೊಳಿಸುವ ಮಹತ್ವದ ಕೆಲಸವನ್ನು ಈಚೆಗೆ ಸುಪ್ರೀಂ ಕೋರ್ಟ್‌ ಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ದೇಶದ್ರೋಹ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಹಾಗೂ ಭಾರತದ ಕಾನೂನು ವ್ಯವಸ್ಥೆಯಿಂದ ರಾಷ್ಟ್ರದ್ರೋಹವನ್ನು ವಜಾಗೊಳಿಸುವ ಸುವರ್ಣಾವಕಾಶವನ್ನು ಸುಪ್ರೀಂ ಕೋರ್ಟ್‌ ಕಳೆದುಕೊಂಡಿತು” ಎಂದು ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ವಕೀಲರ ಸಂಘ “ದೇಶದ್ರೋಹ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವಿನ ಸಂಘರ್ಷ” ಎಂಬ ವಿಷಯದ ಕುರಿತು ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ವಿಸ್ತೃತವಾಗಿ ಮಾತನಾಡಿದರು.

ಭಾರತದ ಸ್ವಾತಂತ್ರ್ಯದ ನಂತರ ದೇಶದ್ರೋಹ ಕಾನೂನು ಬಳಕೆಯಾಗಿರುವುದಕ್ಕಿಂತ ದುರ್ಬಳಕೆಯಾಗಿರುವುದೇ ಹೆಚ್ಚು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಸುಮಾರು 9 ಸಾವಿರ ಮಂದಿಯ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗಿದೆ. ಮೂರು ವಿವಾದಿತ ಕೃಷಿ ಕಾಯಿದೆಗಳನ್ನು ವಿರೋಧಿಸಿ ಆರು ತಿಂಗಳಿಂದ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ವಿವಿಧೆಡೆ 3,300 ದೇಶದ್ರೋಹದ ದೂರು ದಾಖಲಿಸಲಾಗಿದೆ. ಕೋವಿಡ್‌ ನಿರ್ವಹಿಸಲು ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಲೋಪದೋಷಗಳನ್ನು ಎತ್ತಿ ತೋರಿದ ಪತ್ರಕರ್ತರು, ಹೋರಾಟಗಾರ ವಿರುದ್ಧ 55 ರಾಷ್ಟ್ರದ್ರೋಹದ ಪ್ರಕರಣ ಹೂಡಲಾಗಿದೆ. ದೇಶದ ಆತ್ಮಸಾಕ್ಷಿ ಬಡಿದೆಬ್ಬಿಸಿದ್ದ ಉತ್ತರ ಪ್ರದೇಶದ ಹಾಥ್‌ರಸ್‌ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಭುತ್ವದ ವಿರುದ್ಧ ಗುಡುಗಿದವರ ವಿರುದ್ಧ 22 ದೇಶದ್ರೋಹದ ದೂರುಗಳನ್ನು ದಾಖಲಿಸಿ, ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾ. ನಾಗಮೋಹನ್ ದಾಸ್‌ ಆರೋಪಿಸಿದರು.

ಸ್ವಾತಂತ್ರ್ಯ ನಂತರದಿಂದ ಇದುವರೆಗೆ ದೇಶದ್ರೋಹ ಪ್ರಕರಣಗಳ ಸಂಬಂಧ ನಿರ್ಧಾರ ಕೈಗೊಳ್ಳುವಾಗ ಸುಪ್ರೀಂ ಕೋರ್ಟ್‌ ಹಲವು ಬಾರಿ ದ್ವಂದ್ವ ನಿಲುವು ತಳೆದಿದೆ. ರಮೇಶ್‌ ಥಾಪರ್‌, ಬ್ರಿಜ್‌ ಭೂಷಣ್‌, ಸಕಾಲ ಮತ್ತು ಇಂಡಿಯನ್‌ ಎಕ್ಸ್‌ಪ್ರೆಸ್‌ ಪ್ರಕರಣಗಳು ಸೇರಿದಂತೆ ಹಲವು ದಾವೆಗಳಲ್ಲಿ ಸಂವಿಧಾನದತ್ತವಾಗಿ 19(1) (ಎ) ಅಡಿ ದೊರೆತಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಮೂಲಕ ನ್ಯಾಯಾಂಗದ ಗೌರವವನ್ನು ಸುಪ್ರೀಂ ಕೋರ್ಟ್‌ ಅತ್ಯುನ್ನತ ಸ್ಥಾನಕ್ಕೇರಿಸಿದೆ. 1950ರಲ್ಲಿ ಎ ಕೆ ಗೋಪಾಲನ್‌, ಎ ಎಂ ಎಸ್‌ ನಂಬೂದರಿ ಪ್ರಕರಣಗಳಿಂದ ಹಿಡಿದು ತುರ್ತು ಪರಿಸ್ಥಿತಿ, ಇತ್ತೀಚೆಗಿನ ಭೀಮಾ ಕೊರೆಗಾಂವ್‌ ಪ್ರಕರಣ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನಾಕಾರರು ದೇಶದ್ರೋಹ ಆರೋಪ ಎದುರಿಸುತ್ತಿದ್ದಾರೆ. ಈ ಪೈಕಿ ಹಲವು ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿದೆ. ಬಹುಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯ ರದ್ದತಿಯ ನಂತರ ಕೇಂದ್ರ ಸರ್ಕಾರ ಕಣಿವೆ ರಾಜ್ಯದ ಸುಮಾರು 70 ಲಕ್ಷ ಜನರ ಜನರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಿತ್ತು. ಅದೇ ರೀತಿ ಗೃಹ ಬಂಧನ, ಲಾಕ್‌ಡೌನ್‌ಗಳನ್ನು ಘೋಷಿಸಿದಾಗ ಪ್ರಜೆಗಳ ಹಕ್ಕುಗಳ ರಕ್ಷಣೆಗೆ ಮುಂದಾಗದೇ ಇರುವ ಮೂಲಕ ಸರ್ವೋಚ್ಚ ನ್ಯಾಯಾಲಯ ದ್ವಿಮುಖ ನೀತಿ ಅನುಸರಿಸಿದೆ ಎಂದು ನ್ಯಾ. ನಾಗಮೋಹನ್ ದಾಸ್‌ ವಿವರಿಸಿದರು.

1962ರಲ್ಲಿ ಕೇದಾರನಾಥ್‌ ಸಿಂಗ್‌ ವರ್ಸಸ್‌ ಬಿಹಾರ ರಾಜ್ಯ ಪ್ರಕರಣದ ತೀರ್ಪಿನಲ್ಲಿ ಬ್ರಿಟಿಷರು ತಮ್ಮ ವಿರುದ್ಧದ ಹೋರಾಟಗಳನ್ನು ಹತ್ತಿಕ್ಕಲು ಜಾರಿಗೊಳಿಸಿದ್ದ ದೇಶದ್ರೋಹ, ಕ್ರಿಮಿನಲ್‌ ನಿಂದನೆ ಮತ್ತು ಕ್ರಿಮಿನಲ್‌ ಮಾನಹಾನಿ ಎಂಬ ಈ ಮೂರೂ ಕಾನೂನುಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ದೇಶದ್ರೋಹ ಕಾನೂನಿನ ಅಡಿ ದೂರು ದಾಖಲಿಸುವಾಗ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಉಲ್ಲೇಖಿಸಿರುವ ಕಾರಣಗಳನ್ನು ಅನುಸರಿಸದ ಸರ್ಕಾರಗಳ ವಿರುದ್ದ ಸರ್ವೋಚ್ಚ ನ್ಯಾಯಾಲಯ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಿತ್ತು. ಆದರೆ, ಹಾಗೆ ಮಾಡದ ಸುಪ್ರೀಂ ಕೋರ್ಟ್‌ ಸಂವಿಧಾನ, ಮೂಲಭೂತ ಹಕ್ಕು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ತನ್ನ ಹೊಣೆಗಾರಿಕೆ ನಿರ್ವಹಿಸುವಲ್ಲಿ ಹಲವು ಬಾರಿ ವಿಫಲವಾಗಿದೆ ಎಂದು ಆಪಾದಿಸಿದರು.

ಭಾರತದಲ್ಲಿ ದೇಶದ್ರೋಹ ಕಾನೂನು ಜಾರಿಗೆ ತಂದ ಇಂಗ್ಲೆಂಡ್‌, ಅಮೆರಿಕ, ನ್ಯೂಜಿಲೆಂಡ್‌ ಸೇರಿದಂತೆ ಹಲವು ರಾಷ್ಟ್ರಗಳು ದೇಶದ್ರೋಹ ಕಾನೂನನ್ನು ವಜಾ ಮಾಡಿವೆ. ಇದೇ ನಿರ್ಧಾರವನ್ನು ನಮ್ಮ ದೇಶದಲ್ಲಿ ಮಾಡಬೇಕಿದೆ. ಇತ್ತೀಚಿಗಿನ ಮಾಧ್ಯಮ ವರದಿಯೊಂದರ ಪ್ರಕಾರ ದೇಶದ್ರೋಹ ಕಾನೂನಿನ ಅಡಿ ದಾಖಲಿಸಲಾದ ಪ್ರಕರಣಗಳ ಪೈಕಿ ಶೇ.1ರಷ್ಟು ಮಂದಿ ಮಾತ್ರ ದೋಷಿಗಳಾಗಿದ್ದಾರೆ. ಆಳುವ ಸರ್ಕಾರಗಳು ದೇಶದ್ರೋಹ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬುದಕ್ಕೆ ಇದಕ್ಕಿಂತ ಯಾವ ಪುರಾವೆ ಬೇಕಿದೆ ಎಂದು ಅವರು ಪ್ರಶ್ನಿಸಿದರು.

ವೆಬಿನಾರ್‌ನಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪೊ. ಲಿಂಗರಾಜ ಗಾಂಧಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹೇಮಂತ್‌ ಕುಮಾರ್‌, ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ. ಕೆ. ನರಸಿಂಹಮೂರ್ತಿ, ಮೈಸೂರು ವಿವಿ ಪತ್ರಿಕೋದ್ಯಮದ ಮುಖ್ಯಸ್ಥ ಪ್ರೊ. ನಿರಂಜನ್‌ ವಾನಳ್ಳಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಮತ್ತಿತರರು ಭಾಗವಹಿಸಿದ್ದರು.