ಸುದ್ದಿಗಳು

ಜಗನ್‌ ನಡೆ ಖಂಡಿಸಿದ ಸುಪ್ರೀಂಕೋರ್ಟ್‌ ವಕೀಲರ ಪರಿಷತ್‌: ಆದರೆ ನಿರ್ಣಯದಿಂದ ದೂರ ಉಳಿದರೇಕೆ ಪರಿಷತ್ತಿನ ಅಧ್ಯಕ್ಷರು?

ಪರಿಷತ್ತಿನ ಅಧ್ಯಕ್ಷರೂ ಆಗಿರುವ ಹಿರಿಯ ವಕೀಲ ದುಶ್ಯಂತ್‌ ದವೆ ಅವರು ಖಂಡನಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅದಕ್ಕೆ ವಿವಿಧ ಕಾರಣಗಳನ್ನು ಅವರು ನೀಡಿದ್ದಾರೆ.

Bar & Bench

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎನ್‌ ವಿ ರಮಣ ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಾರ್ವಜನಿಕವಾಗಿ ಆರೋಪ ಮಾಡಿದ್ದನ್ನು ಸುಪ್ರೀಂಕೋರ್ಟ್‌ ವಕೀಲರ ಪರಿಷತ್ತು (ಎಸ್‌ಸಿಬಿಎ) ಖಂಡಿಸಿದೆ. ಆದರೆ ಈ ಖಂಡನಾ ನಿರ್ಣಯದ ಭಾಗವಾಗುವುದರಿಂದ ಪರಿಷತ್ತಿನ ಅಧ್ಯಕ್ಷ, ಹಿರಿಯ ವಕೀಲ ದುಶ್ಯಂತ್‌ ದವೆ ಅಂತರ ಕಾಯ್ದುಕೊಂಡಿದ್ದಾರೆ.

ತಾತ್ವಿಕ ನೆಲೆಯಲ್ಲಿ ಖಂಡನಾ ಸಭೆಯಲ್ಲಿ ಭಾಗವಹಿಸಲಾಗದ ಅಸಹಾಯಕತೆಯನ್ನು ದವೆ ಅವರು ಹಂಗಾಮಿ ಕಾರ್ಯದರ್ಶಿ ರೋಹಿತ್ ಪಾಂಡೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ʼರೆಡ್ಡಿ ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನುದ್ದೇಶಿಸಿ ಪತ್ರ ಬರೆದಿದ್ದು ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಕೆಲ ಆರೋಪ ಮಾಡಿದ್ದಾರೆ. ಈ ಆರೋಪಗಳ ಸತ್ಯಾಸತ್ಯತೆ ತಿಳಿದಿಲ್ಲವಾದರೂ, ಸೂಕ್ತ ವಿಚಾರಣೆಯ ನಂತರ ಸತ್ಯ ಹೊರಬೀಳಲಿದೆ ಎಂದು ಹೇಳಿದ್ದಾರೆ.

ಪಾಂಡೆ ಅವರಿಗೆ ಬರೆದ ಪತ್ರದಲ್ಲಿ ದವೆ ಹೇಳಿರುವ ಮಾತುಗಳು ಹೀಗಿವೆ:

"ಈ ಹಂತದಲ್ಲಿ ಪೂರ್ವಭಾವಿಯಾಗಿ ವಿಚಾರಣೆಯನ್ನು ಕೆದಕಿದಂತಾಗುತ್ತದೆ. ವಿಚಾರಣೆಯ ಕೊನೆಯಲ್ಲಿ ಸತ್ಯ ಹೊರಹೊಮ್ಮುತ್ತದೆ ಎಂದು ನನಗೆ ಖಾತ್ರಿಯಿದೆ ಮತ್ತು ಆರೋಪಗಳು ಸುಳ್ಳು ಎಂದು ಕಂಡುಬಂದಲ್ಲಿ, ಮುಖ್ಯಮಂತ್ರಿ ಅವರ ವಿರುದ್ಧ ಸುಪ್ರೀಂಕೋರ್ಟ್‌ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು. ನೀವೆಲ್ಲರೂ ಪ್ರಸ್ತಾಪಿಸುವ ರೀತಿಯ ನಿರ್ಣಯವನ್ನು ಈಗ ಅಂಗೀಕರಿಸುವುದು ಅವಸರದ ಸಂಗತಿಯಾಗುತ್ತದೆ”.

ಖಂಡನಾ ನಿರ್ಣಯದಿಂದ ದೂರ ಉಳಿಯುವುದನ್ನು ಆಯ್ಕೆ ಮಾಡಿಕೊಂಡಿರುವ ಅವರು ʼಹೇಳಲು ನ್ಯಾಯಾಧೀಶರಿಗೆ ಸಾಕಷ್ಟು ಸಂಗತಿಗಳಿವೆʼ ಎಂದಿದ್ದಾರೆ. ಪ್ರತಿದಿನವೂ ಸಾಕಷ್ಟು ಅನುಚಿತ ಬೆಳವಣಿಗೆಗಳು ನಡೆಯುತ್ತಿದ್ದರೂ ವಕೀಲ ಸಮುದಾಯ ಮೂಕಪ್ರೇಕ್ಷಕನಾಗಿ ಉಳಿದಿದೆ ಎಂಬುದಾಗಿ ತಿಳಿಸಿದ್ದಾರೆ. ಅರುಣಾಚಲ ಪ್ರದೇಶ ಮಾಜಿ ಮುಖ್ಯಮಂತ್ತಿ ಅವರ ಆತ್ಮಹತ್ಯೆಯ ಟಿಪ್ಪಣಿಯಲ್ಲಿ ನ್ಯಾಯಾಧೀಶರ ಹೆಸರು ಪ್ರಸ್ತಾಪವಾಗಿದೆ. ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಇರುವುದನ್ನು ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ.

"ನ್ಯಾಯಾಂಗ ಸಂಪೂರ್ಣವಾಗಿ ಅಪಾರದರ್ಶಕವಾಗಿದೆ. ತಪ್ಪಿತಸ್ಥ ನ್ಯಾಯಾಧೀಶರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭಾರತದ ಸುಪ್ರೀಂಕೋರ್ಟ್‌ ಕೂಡ ಮುಕ್ತ ಮತ್ತು ಪಾರದರ್ಶಕವಾಗಿಲ್ಲ" ಎಂದು ದವೆ ಅವರು ಪಾಂಡೆ ಅವರಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಖಂಡನಾ ನಿರ್ಣಯದಲ್ಲಿರುವುದೇನು?

ಅಕ್ಟೋಬರ್‌ 16ರಂದು ಆಯೋಜಿಸಲಾಗಿದ್ದ ಪರಿಷತ್‌ ಸಭೆಯಲ್ಲಿ ಜಗನ್‌ ನಡೆಯನ್ನು ಖಂಡಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಸಿಎಂ ಜಗನ್ ರೆಡ್ಡಿ ಅವರು ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವಂತಹ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ಎಸ್‌ಸಿಬಿಎ ಅಭಿಪ್ರಾಯಪಟ್ಟಿದೆ.

ಸಾಂವಿಧಾನಿಕ ಹುದ್ದೆಯಲ್ಲಿರುವವರ ಇಂತಹ ಕ್ರಮಗಳು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಗಂಭೀರ ಅತಿಕ್ರಮಣ ಎಸಗುವ ಕಾರಣಕ್ಕೆ ಇಂತಹ ನಡೆಯನ್ನು ವಿರೋಧಿಸಲಾಗುತ್ತಿದೆ ಎಂದು ಪಾಂಡೆ ಅವರ ಸಹಿ ಇರುವ ಎಸ್‌ಸಿಬಿಎ ನಿರ್ಣಯ ಹೇಳುತ್ತದೆ.

ಕೆಲ ದಿನಗಳ ಹಿಂದೆ ದೆಹಲಿ ಹೈಕೋರ್ಟ್‌ ವಕೀಲರ ಪರಿಷತ್‌, ಭಾರತೀಯ ವಕೀಲರ ಮಂಡಳಿ ಹಾಗೂ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ ಮತ್ತು ಮೇಲ್ಮನವಿ ನ್ಯಾಯಾಧಿಕರಣದ ವಕೀಲರ ಸಂಘ ಕೂಡ ಇದೇ ಬಗೆಯ ನಿರ್ಣಯ ಅಂಗೀಕರಿಸಿದ್ದವು. ಅಲ್ಲದೆ ನ್ಯಾಯಾಂಗದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಜಗನ್‌ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿಯೊಂದನ್ನು ಕೂಡ ಸಲ್ಲಿಸಲಾಗಿದೆ.