High Court of Karnataka
High Court of Karnataka 
ಸುದ್ದಿಗಳು

ವಕೀಲರ ಗುಮಾಸ್ತರ ಕಲ್ಯಾಣಕ್ಕೆ ಯೋಜನೆ: ರಾಜ್ಯ ಸರ್ಕಾರ, ಕೆಎಸ್‌ಬಿಸಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

Bar & Bench

ವಕೀಲರ ಕಚೇರಿಯಲ್ಲಿ ಕೆಲಸ ಮಾಡುವ ವಕೀಲ ಗುಮಾಸ್ತರುಗಳು (ಅಡ್ವೊಕೇಟ್ ಕ್ಲರ್ಕ್ಸ್) ಅಕಾಲಿಕ ಮರಣ ಹೊಂದಿದಾಗ ಮತ್ತು ಅವರ ಕುಟುಂಬದ ಸದಸ್ಯರ ಕಲ್ಯಾಣಕ್ಕಾಗಿ ಸೂಕ್ತ ಯೋಜನೆ ರೂಪಿಸುವಂತೆ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ರಾಜ್ಯ ಮಟ್ಟದ ವಕೀಲರ ಗುಮಾಸ್ತರ ಸಂಘದ ಅಧ್ಯಕ್ಷ ಡಿ ಶಿವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಕಾನೂನು ಇಲಾಖೆಯ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ವಕೀಲರ ನೋಂದಾಯಿತ ಗುಮಾಸ್ತರ ಕಲ್ಯಾಣ ನಿಧಿ ಸಮಿತಿಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸುವಂತೆ ಮತ್ತು ಕೆಎಸ್‌ಬಿಸಿ ಕಾರ್ಯದರ್ಶಿಗೆ ಹ್ಯಾಂಡ್‌ ಸಮನ್ಸ್‌ಗೆ ಆದೇಶಿಸಿದ ಪೀಠವು ವಿಚಾರಣೆಯನ್ನು 2023ರ ಜನವರಿ 9ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ಜಿ ಮಹೇಂದ್ರ ವಾದ ಮಂಡಿಸಿದರು.

“ನಿಧಿಗೆ ಮಾರ್ಗಸೂಚಿ ರೂಪಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಆಯಾ ರಾಜ್ಯ ಸರ್ಕಾರಗಳು ರೂಪಿಸಿರುವ ಮಾರ್ಗಸೂಚಿಗಳು ನಮ್ಮ ಕಣ್ಣಮುಂದಿವೆ. ಆದರೆ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ” ಎಂದು ಹೈಕೋರ್ಟ್‌ ಏಕಸದಸ್ಯ ಪೀಠವು ಉಲ್ಲೇಖಿಸಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಕೀಲರ ಕಚೇರಿಯಲ್ಲಿ ದುಡಿಯುವ ಗುಮಾಸ್ತರ ಕಲ್ಯಾಣ ನಿಧಿಯನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಯೋಜನೆ ರೂಪಿಸಬೇಕು ಎಂದು ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರ ನೇತೃತ್ವದ ಏಕಸದಸ್ಯ ಪೀಠವು 2008ರ ಏಪ್ರಿಲ್‌ 16ರಂದು ನೀಡಿರುವ ತೀರ್ಪಿನ 8ನೇ ಖಂಡಿಕೆಯನ್ನು ಜಾರಿಗೊಳಿಸಲು ನಿರ್ದೇಶಿಸಬೇಕು ಎಂದು ಕೋರಲಾಗಿದೆ.

ಹೈಕೋರ್ಟ್ ವಿಭಾಗೀಯ ಪೀಠವು 2022ರ ಮಾರ್ಚ್‌ 15ರಂದು ನೀಡಿರುವ ತೀರ್ಪಿನ ಅನುಸಾರ ಪರಿಣಾಮಕಾರಿ ಯೋಜನೆ ರೂಪಿಸಲು ಮತ್ತು ಅವುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ರಾಜ್ಯ ಕಾನೂನು ಇಲಾಖೆ ಮತ್ತು ರಾಜ್ಯ ವಕೀಲರ ಪರಿಷತ್‌ಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಪರಿಗಣಿಸಿ ಶೀಘ್ರವೇ ಸೂಕ್ತ ಯೋಜನೆ ರೂಪಿಸಲು ನಿರ್ದೇಶಿಸಬೇಕು ಎಂದು ಕೋರಲಾಗಿದೆ.

ವಕೀಲರ ಕಲ್ಯಾಣ ನಿಧಿ ಕಾಯಿದೆಯ ಕಲಂ 3 (ಎ) ಅನುಸಾರ ಸದಸ್ಯರು ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬದ ಸದಸ್ಯರಿಗೆ ಒದಗಿಸಲಾಗುವ ನೆರವಿನ ಬಗ್ಗೆ ಸೂಕ್ತ ಯೋಜನೆ ಅಥವಾ ಮಾರ್ಗಸೂಚಿ ರೂಪಿಸುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ.