ವೃತ್ತಿ ದುರ್ನಡತೆ: ಕೆಎಸ್‌ಬಿಸಿ ಮಾಜಿ ಅಧ್ಯಕ್ಷ ಕೆ ಬಿ ನಾಯಕ್‌ ಅಮಾನತು ಮಾಡಿ ಆದೇಶಿಸಿದ ಭಾರತೀಯ ವಕೀಲರ ಪರಿಷತ್‌

ಕೆಎಸ್‌ಬಿಸಿ ನಿರ್ಧಾರವನ್ನು ಪ್ರತಿವಾದಿ ನಾಯಕ್‌ ಪ್ರಭಾವಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ ಎಂದು ಬಿಸಿಐ ಹೇಳಿದ್ದು, ಕೆಎಸ್‌ಬಿಎಸ್‌ ಮತ್ತು ನಾಯಕ್‌ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಆದೇಶಿಸಿ, ನೋಟಿಸ್‌ ಜಾರಿ ಮಾಡಿದೆ.
BCI and B K Naik
BCI and B K Naik
Published on

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಬಿ ನಾಯಕ್‌ ಅವರು ಪರಿಶೀಲನಾ ಅರ್ಜಿ ಇತ್ಯರ್ಥವಾಗುವವರಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡದಂತೆ ಅಮಾನತು ಮಾಡಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಈಚೆಗೆ ಆದೇಶ ಮಾಡಿದೆ.

ಬೆಳಗಾವಿಯ ವಕೀಲ ಬಸವರಾಜ ಜರಳಿ ಅವರು ಕೆ ಬಿ ನಾಯಕ್‌ ವಿರುದ್ಧ ವೃತ್ತಿ ದುರ್ನಡತೆ ಕುರಿತು ನೀಡಿದ್ದ ದೂರನ್ನು ಕೆಎಸ್‌ಬಿಸಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಬಿಸಿಐನ ಮೂವರು ಸದಸ್ಯರ ನೇತೃತ್ವದ ಶಿಸ್ತುಪಾಲನಾ ಸಮಿತಿಯು ಈ ಆದೇಶ ಮಾಡಿದೆ.

“ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳು, ವಿಚಾರಣಾಧೀನ ಮತ್ತು ಮೇಲ್ಮನವಿ ನ್ಯಾಯಾಲಯಗಳಲ್ಲಿನ ಅಭಿಪ್ರಾಯವನ್ನು ಗಮನಿಸಿ, ನ್ಯಾಯದಾನದ ದೃಷ್ಟಿಯಿಂದ ಪ್ರಕರಣದ ವಾಸ್ತವಿಕ ವಿಚಾರಗಳನ್ನು ವಿಶ್ಲೇಷಣೆ ನಡೆಸುವುದರೊಂದಿಗೆ ನಾಯಕ್‌ ಅವರ ನಡತೆಯನ್ನು ಪರಿಗಣಿಸಿ, ಪ್ರಕರಣ ಇತ್ಯರ್ಥವಾಗುವವರೆಗೆ ಅವರು ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡದಂತೆ ಅಮಾನತು ಮಾಡಲಾಗಿದೆ” ಎಂದು ಬಿಸಿಐ ಆದೇಶದಲ್ಲಿ ಹೇಳಿದೆ.

ಕೆಎಸ್‌ಬಿಸಿ ನಿರ್ಧಾರವನ್ನು ಪ್ರತಿವಾದಿ ನಾಯಕ್‌ ಅವರು ಪ್ರಭಾವಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ಸಮಿತಿಯ ಮೇಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಅಲ್ಲದೇ, ಕೆಎಸ್‌ಬಿಎಸ್‌ ಹಾಗೂ ನಾಯಕ್ ಅವರಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಆದೇಶಿಸಿ, ನೋಟಿಸ್‌ ಜಾರಿ ಮಾಡಲಾಗಿದೆ.

ವಕೀಲರ ಕಾಯಿದೆ ಸೆಕ್ಷನ್‌ 48ಎ (2) ಅನುಸಾರ ನಾಯಕ್‌ ಅವರಿಗೆ ನೋಟಿಸ್‌ ಕಳುಹಿಸಿಲಾಗಿದೆ. ಅಲ್ಲದೇ, ವಿಚಾರಣೆಗೆ ಹಾಜರಾಗಲು ಅನುಕೂಲವಾಗುವಂತೆ ವಿಡಿಯೊ ಕಾನ್ಫರೆನ್ಸ್‌ ಲಿಂಕ್‌ ಸಹ ಹಂಚಿಕೊಳ್ಳಲಾಗಿದೆ. ಆದರೂ ನಾಯಕ್‌ ಅವರು ಸಮಿತಿಯಿಂದ ಅಂತರ ಕಾಯ್ದುಕೊಂಡಿದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಾಯಕ್‌ ಅವರು ಪ್ರಭಾವಿಯಾಗಿದ್ದು, ಕೆಎಸ್‌ಬಿಸಿಯ ಹಾಲಿ ಸದಸ್ಯರಾಗಿರುವುದರಿಂದ ಸಾಮಾನ್ಯ ಸಭೆಯಲ್ಲಿ ತಮ್ಮ ವಿರುದ್ಧದ ದೂರನ್ನು ವಜಾಗೊಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮಗಳನ್ನು ಪರಿಗಣಿಸದೇ ಕೆಎಸ್‌ಬಿಸಿಯು ತನ್ನ ಸದಸ್ಯರೊಬ್ಬರ ವಿರುದ್ಧದ ದೂರನ್ನು ಸಾಮಾನ್ಯ ಸಭೆಯಲ್ಲಿ ವಜಾ ಮಾಡಿರುವುದರು ಆಘಾತಕಾರಿಯಾಗಿದೆ. ಕೆಎಸ್‌ಬಿಸಿಯು ಪ್ರಕರಣವನ್ನು ಬಿಸಿಐಗೆ ವರ್ಗಾಯಿಸಬಹುದಿತ್ತು. ನಿರಾಶಾದಾಯಕ ಸಂಗತಿಯೆಂದರೆ ಅದು ದೂರನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಸ್ವಾಭಾವಿಕ ನ್ಯಾಯದಾನದ ಮೂಲ ತತ್ವಗಳನ್ನು ಪಾಲಿಸದೇ ಕೆಎಸ್‌ಬಿಸಿಯು ದೂರನ್ನು ವಜಾ ಮಾಡಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತಮ್ಮ ಕಕ್ಷಿದಾರ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಕಾಗದಾಳ್‌ ಗ್ರಾಮದ ಬಸವರೆಡ್ಡಿ ವೆಂಕರೆಡ್ಡಿ ಚುಳಕಿ ಅವರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಲಾಭ ಮಾಡಿಕೊಳ್ಳಲು ನಾಯ್ಕ್‌ ಅವರು ಪ್ರಯತ್ನಿಸಿದ್ದಾರೆ. ನ್ಯಾಯಾಂಗ ವಶದಲ್ಲಿದ್ದಾಗ ಚುಳಕಿ ಅವರಿಂದ ಸಹಿ ಪಡೆದು ವಕೀಲರಾಗಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಕ್ಷಿದಾರನಿಗೆ ಅಸಮರ್ಪಕ ಸಲಹೆ ನೀಡುವ ಮೂಲಕ ಕರ್ತವ್ಯ ಲೋಪ ಮತ್ತು ವಾಸ್ತವಿಕ ಸಂಗತಿಗಳನ್ನು ಬಚ್ಚಿಟ್ಟಿರುವುದು ಕಂಡು ಬಂದಿದ್ದು ಮೇಲ್ನೋಟಕ್ಕೆ ಪ್ರಕರಣವಿದೆ ಎಂದು ಬಿಸಿಐ ಹೇಳಿದೆ. ಅರ್ಜಿದಾರರಾದ ಬಸವರಾಜ ಜರಳಿ ಅವರನ್ನು ವಕೀಲರಾದ ಕೆ ವೈಜಯಂತಿ ಮತ್ತು ನಾಗೇಂದರ್‌ ಅವರು ಪ್ರತಿನಿಧಿಸಿದ್ದರು.

ಪ್ರಕರಣದ ಹಿನ್ನೆಲೆ: ಕೆಎಸ್‌ಬಿಸಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ ಬಿ ನಾಯಕ್ ಅವರು ನಕಲಿ ಜಿಪಿಎ (ಜನರಲ್‌ ಪವರ್‌ ಆಫ್‌ ಅಟಾರ್ನಿ - ಸಾಮಾನ್ಯ ಮುಖ್ತ್ಯಾರನಾಮೆ) ಸೃಷ್ಟಿಸಿ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಕಾಗದಾಳ್‌ ಗ್ರಾಮದ ಬಸವರೆಡ್ಡಿ ವೆಂಕರೆಡ್ಡಿ ಚುಳಕಿ ಅವರಿಗೆ ಸೇರಿದ ಜಮೀನಿನ ಕ್ರಯ ಮಾಡಿದ್ದಾರೆ. ಆ ಮೂಲಕ ವೃತ್ತಿ ದುರ್ನಡತೆ ತೋರಿದ್ದು, ಅವರ ವಿರುದ್ಧ ಸ್ವಯಂಪ್ರೇರಿತ ಕ್ರಮಕೈಗೊಳ್ಳಬೇಕು ಎಂದು ಕೋರಿ ಚುಳಕಿ ಅವರ ವಕೀಲರಾದ ಬಸವರಾಜ್‌ ಮುರಗೇಶ್‌ ಜರಳಿ ಅವರು ಕೆಎಸ್‌ಬಿಸಿಗೆ ದೂರು ನೀಡಿದ್ದರು.

Also Read
ಮಾಜಿ ಅಧ್ಯಕ್ಷರ ವಿರುದ್ಧದ ದೂರು ಮುಕ್ತಾಯದ ಪ್ರಮಾಣೀಕೃತ ಗೊತ್ತುವಳಿ ಕೋರಿಕೆ: ಕೆಎಸ್‌ಬಿಸಿಗೆ ಹೈಕೋರ್ಟ್‌ ನೋಟಿಸ್‌

2006ರಲ್ಲಿ ಚುಳಕಿ ಮತ್ತು ಕುಟುಂಬ ಸದಸ್ಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ನಡೆಸಲು ಕೆ ಬಿ ನಾಯಕ್‌ ಅವರಿಗೆ ಪ್ರಕರಣ ವಹಿಸಲಾಗಿತ್ತು. ಬೆಳಗಾವಿಯ ಫಾಸ್ಟ್‌ ಟ್ರ್ಯಾಕ್‌ ನ್ಯಾಯಾಲಯವು ತೀರ್ಪು ಪ್ರಕಟಿಸುವವರೆಗೂ ಆರೋಪಿಗಳು ಜೈಲಿನಲ್ಲಿದ್ದರು. ಬಂಧನ ಅವಧಿಯಲ್ಲಿ ವಕೀಲ ನಾಯಕ್‌ ಅವರು ಜೈಲಿಗೆ ಭೇಟಿ ನೀಡಿ ಆರೋಪಿಗಳಿಂದ ಕೆಲವು ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ 2008ರ ಮಾರ್ಚ್‌ 28ರಂದು ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಲಗತ್ತಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

Kannada Bar & Bench
kannada.barandbench.com