School Fees 
ಸುದ್ದಿಗಳು

ಶೇ.70ರಷ್ಟು ಶಾಲಾ ಶುಲ್ಕ ಸಂಗ್ರಹ ಆದೇಶಕ್ಕೆ ರಾಜಸ್ಥಾನ ಹೈಕೋರ್ಟ್ ತಡೆ; ದಬ್ಬಾಳಿಕೆ ಮಾಡದಿರಲು ಸೂಚನೆ

ಕಳೆದ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ವಸೂಲಾತಿ ಮಾಡಿದ್ದ ದರದ ವಾರ್ಷಿಕ ಬೋಧನಾ ಶುಲ್ಕದ ಶೇ. 70ರಷ್ಟನ್ನು ಶಾಲೆಗಳು ಸಂಗ್ರಹಿಸಬಹುದು ಎಂದು ಏಕಸದಸ್ಯ ಪೀಠವು ಆದೇಶಿಸಿತ್ತು.

Siddesh M S

ಶಾಲಾ ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿವಿಧ ಹೈಕೋರ್ಟ್ ಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯಗಳು ವಿವಿಧ ನಿರ್ದೇಶನಗಳನ್ನು ಶಾಲೆಗಳ ಆಡಳಿತ ಮಂಡಳಿಗಳಿಗೆ ನೀಡುತ್ತಿವೆ. ಇದರ ಜೊತೆಗೆ ಮನವಿ, ಮೇಲ್ಮನವಿಗಳ ಹಗ್ಗಜಗ್ಗಾಟವೂ ಪೋಷಕರು ಮತ್ತು ಆಡಳಿತ ಮಂಡಳಿಗಳ ಪರವಾಗಿ ನಡೆಯುತ್ತಿದೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ರಾಜಸ್ಥಾನದ ಪ್ರಕರಣ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಸಂಗ್ರಹಿಸಿದ ದರದ ಪ್ರಮಾಣದಲ್ಲಿಯೇ ವಾರ್ಷಿಕ ಬೋಧನಾ ಶುಲ್ಕದ ಶೇ.70ರಷ್ಟನ್ನು ಶಾಲೆಗಳು ಸಂಗ್ರಹಿಸಬಹುದು ಎಂದು ಆದೇಶಿಸಿದ್ದ ರಾಜಸ್ಥಾನ ಹೈಕೋರ್ಟ್‌ ನ ಏಕಸದಸ್ಯ ಪೀಠದ ಆದೇಶವನ್ನು ಅಲ್ಲಿನ ವಿಭಾಗೀಯ ಪೀಠ ಈಗ ತಡೆ ಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಮತ್ತು ನ್ಯಾಯಮೂರ್ತಿ ಮಹೇಂದ್ರ ಕುಮಾರ್ ಗೋಯಲ್ ಅವರಿದ್ದ ವಿಭಾಗೀಯ ಪೀಠವು ಹೈಕೋರ್ಟ್ ನ ಏಕಸದಸ್ಯ ಪೀಠದ‌ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದು, ಅಕ್ಟೋಬರ್ 5ಕ್ಕೆ ವಿಚಾರಣೆ ಮುಂದೂಡಿದೆ.

ಆದೇಶದ ಪರಿಪಾಲನೆಗೆ ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯದ ಮುಂದಿನ ಆದೇಶಕ್ಕೆ ಕಾಯುವಂತೆ ಶಾಲೆಗಳಿಗೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಯಾವುದೇ ದಬ್ಬಾಳಿಕೆ ಕ್ರಮ ಕೈಗೊಳ್ಳಬಾರದು. ಈ ಆದೇಶವವು ಅಕ್ಟೋಬರ್ 9ರ ವರೆಗೆ ಜಾರಿಯಲ್ಲಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ರಾಜ್ಯ ಸರ್ಕಾರ ಹೊರಡಿಸಿದ ಎರಡು ಸುತ್ತೋಲೆಗಳ ಹಿನ್ನೆಲೆಯಲ್ಲಿ ದಾವೆ ಹೂಡಲಾಗಿದೆ. ಮೂರು ತಿಂಗಳವರೆಗೆ ಶುಲ್ಕ ವಿಧಿಸುವುದನ್ನು ತಡೆಹಿಡಿಯುವಂತೆ ಖಾಸಗಿ ಶಾಲೆಗಳಿಗೆ ನಿರ್ದೇಶಿಸಿದ್ದು ಮೊದಲ ಸುತ್ತೋಲೆಯಾಗಿದ್ದು, ಜುಲೈ 7ರಂದು ಹೊರಡಿಸಲಾದ ಎರಡನೇ ಆದೇಶವು ಮೊದಲ ಆದೇಶದ ಪರಿಪಾಲನೆಯನ್ನು ಮುಂದಿನ ಆದೇಶವರೆಗೆ ಮುಂದೂಡುವುದಾಗಿತ್ತು.

ಮೂಲಸೌಕರ್ಯ ವ್ಯವಸ್ಥೆ ಕಾಪಾಡುವುದು, ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿ, ಆನ್ ಲೈನ್ ತರಗತಿ ಹಾಗೂ ಬೋಧಕರ ವೇತನ ಪಾವತಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಶಾಲೆಗಳು ವಾದಿಸಿದ್ದವು.

ಏಕ ಸದಸ್ಯ ಪೀಠದ ಮಧ್ಯಂತರ ಆದೇಶ ಉಲ್ಲೇಖಿಸಿದ ನ್ಯಾಯಾಲಯವು ಹೆಚ್ಚು ಶಾಲಾ ಶುಲ್ಕದ ಮೂಲಕ ಪೋಷಕರ ಹೊರೆ ಹೆಚ್ಚಿಸಲಾಗದು. ಮತ್ತೊಂದು ಕಡೆ ಈಗಾಗಲೇ ಗುರುತಿಸಿರುವಂತೆ ಶಾಲೆಯ ಮೂಲಸೌಕರ್ಯ ನಿರ್ವಹಿಸುವ ಹೊಣೆಯನ್ನು ಏಕಪಕ್ಷೀಯವಾಗಿ ಶಾಲೆಗಳಿಗೆ ವರ್ಗಾಯಿಸಲಾಗದು ಎಂದಿತು.

ಅಧಿಸೂಚನೆ ಹೊರಡಿಸುವಾಗ ಉಭಯ ಕಡೆಯಿಂದಲೂ ಬಹುಮುಖ್ಯವಾದ ಹಿತಾಸಕ್ತಿಗಳನ್ನು ಸರ್ಕಾರ ಪರಿಗಣಿಸಿಲ್ಲ. ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಉಭಯ ಕಡೆಯವರ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೇ. 70ರಷ್ಟು ವಾರ್ಷಿಕ ಬೋಧನಾ ಶುಲ್ಕ ಸಂಗ್ರಹಿಸಲು ನ್ಯಾಯಾಲಯ ಅನುಮತಿಸಿತ್ತು. ಅಂತಿಮ ವಿಲೇವಾರಿಯ ಹಂತದಲ್ಲಿ ವಿವರವಾದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದ್ದರು. ಅಕ್ಟೋಬರ್ 5ರಂದು ವಿಭಾಗೀಯ ಪೀಠವು ಮತ್ತೆ ವಿಚಾರಣೆ ನಡೆಸಲಿದೆ.