ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇ ಡಿ) ತನಿಖೆಗೆ ಆದೇಶ ಮಾಡಿರುವುದನ್ನು ಹಿಂಪಡೆಯುವಂತೆ ಕೋರಿ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಕಲ್ಕತ್ತಾ ಹೈಕೋರ್ಟ್ ಅವರಿಗೆ ಬರೋಬ್ಬರಿ ₹25 ಲಕ್ಷ ದಂಡ ವಿಧಿಸಿದೆ [ಅಭಿಷೇಕ್ ಬ್ಯಾನರ್ಜಿ ವರ್ಸಸ್ ಸೌಮೆನ್ ನಂದಿ].
ಹಗರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರದ ಕುರಿತು ತನಿಖೆ ನಡೆಸಲು ಏಪ್ರಿಲ್ 13ರಂದು ಆದೇಶಿಸಿದ್ದ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರ ಆದೇಶ ಪ್ರಶ್ನಿಸಿ ಬ್ಯಾನರ್ಜಿ ಮತ್ತು ಬಂಧಿತ ಆರೋಪಿ ಕುಂತಾಲ್ ಘೋಷ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರ ಏಕಸದಸ್ಯ ಪೀಠವು ವಜಾ ಮಾಡಿದೆ.
“₹50 ಲಕ್ಷ ರೂಪಾಯಿ ದಂಡ ವಿಧಿಸಿ ಎರಡೂ ಅರ್ಜಿಗಳನ್ನು ವಜಾ ಮಾಡಲಾಗಿದೆ. ಬ್ಯಾನರ್ಜಿ ಮತ್ತು ಘೋಷ್ ಇಬ್ಬರೂ ತಲಾ ₹25 ಲಕ್ಷ ದಂಡ ಪಾವತಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಪ್ರಕರಣದಲ್ಲಿ ಬ್ಯಾನರ್ಜಿ ಅವರನ್ನು ಸಿಲುಕಿಸಲು ಪೂರಕವಾದ ಹೇಳಿಕೆ ನೀಡುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಘೋಷ್ ಅರ್ಜಿಯಲ್ಲಿ ಆರೋಪಿಸಿದ್ದನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.
ಅಲ್ಲದೇ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಮೂರ್ತಿಗಳು “ಮುಚ್ಚಿದ ಲಕೋಟೆಯಲ್ಲಿ ಉಲ್ಲೇಖಿಸಿರುವ ವಿಚಾರಗಳು ಇತಿಹಾಸ ಪೂರ್ವ ಕಾಲಕ್ಕೆ ಸಂಬಂಧಿಸಿದ್ದಾಗಿದೆ. ತನಿಖಾ ಸಂಸ್ಥೆಗಳು 2022ರಲ್ಲಿ ನಡೆದಿದ್ದರ ಮಾಹಿತಿ ನೀಡಿವೆ. ಆದರೆ, ನಾವು 2023ರಲ್ಲಿ ಇದ್ದೇವೆ. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ದಾಖಲೆಯಲ್ಲಿ ಹೊಸ ಮತ್ತು ಇತ್ತೀಚಿನ ಬೆಳವಣಿಗೆಯ ಮಾಹಿತಿ ನೀಡಲಾಗಿಲ್ಲ. ಸಾಕ್ಷ್ಯ ನಾಶವಾಗಲು ಈ ತನಿಖಾ ಸಂಸ್ಥೆಗಳು ಕಾಯುತ್ತಿವೆಯೇ? ಎಂದು ಕೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸೂಕ್ತ ನಿಯಮ ಪಾಲಿಸದೆ 2016ರಲ್ಲಿ ನೇಮಕ ಮಾಡಲಾಗಿದ್ದ 36,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಈಚೆಗೆ ರದ್ದುಪಡಿಸಿದ್ದರು.
"ಪಶ್ಚಿಮ ಬಂಗಾಳದಲ್ಲಿ ಈ ಪ್ರಮಾಣದ ಭ್ರಷ್ಟಾಚಾರ ಎಂದಿಗೂ ನಡೆದಿರಲಿಲ್ಲ. ಮಾಜಿ ಶಿಕ್ಷಣ ಸಚಿವರು, ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಲವು ಮಧ್ಯವರ್ತಿಗಳ ಮೂಲಕ ಉದ್ಯೋಗಗಳನ್ನುಸರಕಿನಂತೆ ಮಾರಾಟ ಮಾಡಲಾಯಿತು, ಅವರೀಗ ಕಂಬಿ ಎಣಿಸುತ್ತಿದ್ದಾರೆ. ಸಿಬಿಐ ಮತ್ತು ಇ ಡಿ ತನಿಖೆಯನ್ನು ಈಗ ಪೂರ್ಣ ಪ್ರಮಾಣದಲ್ಲಿ ಮುಂದುವರೆಸಬಹುದು”ಎಂದು ನ್ಯಾಯಮೂರ್ತಿಗಳು ಹೇಳಿದ್ದರು.
"ಈ ನೇಮಕಾತಿ ಹಗರಣ ಸಮಾಜದ ವಿರುದ್ಧದ ಅಪರಾಧವಾಗಿದೆ ಮತ್ತು ಮಂಡಳಿ ಮತ್ತು ಅದರ ಮಾಜಿ ಅಧ್ಯಕ್ಷರು ನೇಮಕಾತಿ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಎಳ್ಳಷ್ಟೂ ಕಾಳಜಿ ವಹಿಸದೆ ಮಾಡಿದ ತಂತ್ರ ಮತ್ತು ವಂಚನೆಯಿಂದಾಗಿ ನಿರುದ್ಯೋಗಿ ಯುವಜನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ವಂಚನೆ ಎಲ್ಲವನ್ನೂ ಬಿಚ್ಚಿಡುತ್ತದೆ ಎಂದಷ್ಟೇ ನಾನು ಹೇಳುತ್ತೇನೆ” ಎಂದು ಆದೇಶದಲ್ಲಿ ತಿಳಿಸಿದ್ದರು.