School children 
ಸುದ್ದಿಗಳು

ಶುಲ್ಕ ಪಾವತಿಸದ ವಿದ್ಯಾರ್ಥಿಗಳ ತಡೆಗೆ ಬೌನ್ಸರ್‌ಗಳ ನೇಮಕ: ಡಿಪಿಎಸ್ ದ್ವಾರಕಾ ನಡೆ ಬಗ್ಗೆ ದೆಹಲಿ ಹೈಕೋರ್ಟ್ ಅಸಮಾಧಾನ

ಶಾಲೆಗಳು ಬರೀ ವ್ಯಾಪಾರ ಸಂಸ್ಥೆಗಳಲ್ಲ, ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಅವು ಬೆದರಿಕೆ ಹಾಕುವಂತಿಲ್ಲ ಎಂದು ಪೀಠ ನುಡಿದಿದೆ.

Bar & Bench

ಶೈಕ್ಷಣಿಕ ಶುಲ್ಕ ಪಾವತಿಸದ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಅವಮಾನಿಸುವುದು ಅಥವಾ ಬೆದರಿಸುವುದು ಮಾನಸಿಕ ಕಿರುಕುಳ ಮಾತ್ರವೇ ಅಲ್ಲದೆ, ಮಗುವಿನ ಮಾನಸಿಕ ಯೋಗಕ್ಷೇಮ ಮತ್ತು ಸ್ವಾಭಿಮಾನವನ್ನು ದುರ್ಬಲಗೊಳಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ [ದೆಹಲಿ ಪಬ್ಲಿಕ್ ಶಾಲೆ ದ್ವಾರಕಾ ಮತ್ತು  ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡುವಣ ಪ್ರಕರಣ].

ದೆಹಲಿಯ ದ್ವಾರಕಾದಲ್ಲಿರುವ ದೆಹಲಿ ಪಬ್ಲಿಕ್‌ ಶಾಲೆಯಲ್ಲಿ ಕೆಲ ವಿದ್ಯಾರ್ಥಿಗಳು ಶಾಲಾ ಆವರಣ ಪ್ರವೇಶಿಸದಂತೆ ತಡೆಯಲು ಬೌನ್ಸರ್‌ಗಳನ್ನು ನೇಮಿಸಿಕೊಂಡ ಆರೋಪ ಕುರಿತಂತೆ ನ್ಯಾಯಮೂರ್ತಿ ಸಚಿನ್ ದತ್ತ ಅವರು ದಿಗ್ಭ್ರಮೆ ವ್ಯಕ್ತಪಡಿಸಿದರು.

“ಇಂತಹ ಖಂಡನೀಯ ವರ್ತನೆ ಕಲಿಕಾ ಸಂಸ್ಥೆಯಲ್ಲಿ ಇರಬಾರದು. ಇದು ಮಗುವಿನ ಘನತೆಗೆ ಧಕ್ಕೆ ತರುವುದಲ್ಲದೆ ಸಮಾಜದಲ್ಲಿ ಶಾಲೆಯ ಪಾತ್ರದ ಕುರಿತು ಮೂಲಭೂತವಾಗಿ ತಪ್ಪು ತಿಳಿವಳಿಕೆ ಮೂಡಿಸುತ್ತದೆ. ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಯನ್ನು ಸಾರ್ವಜನಿಕವಾಗಿ ಅಪಮಾನಿಸುವುದು, ಬೆದರಿಸುವುದು ಅದರಲ್ಲಿಯೂ ಬಲವಂತ ಮಾಡುವುದು ಮಾನಸಿಕ ಕಿರುಕುಳ ಮಾತ್ರವಲ್ಲದೆ ಮಗುವಿನ ಮಾನಸಿಕ ಸ್ವಾಸ್ಥ್ಯ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ. ಬೌನ್ಸರ್‌ಗಳ ಬಳಕೆ ಭಯ, ಅವಮಾನ ಹಾಗೂ ಬಹಿಷ್ಕಾರದ ವಾತಾವರಣ ಬೆಳೆಸುತ್ತದೆ. ಇದು ಶಾಲೆಯ ಮೂಲಭೂತ ನೀತಿಗೆ ಹೊಂದಿಕೆಯಾಗುವಂಥದ್ದಲ್ಲ” ಎಂದು ಪೀಠ ವಿವರಿಸಿತು.

ಶಾಲೆಗಳ ಪ್ರಾಥಮಿಕ ಉದ್ದೇಶ ಶಿಕ್ಷಣ ನೀಡುವುದು ಮೌಲ್ಯಗಳನ್ನು ಬೆಳೆಸುವುದಾಗಿದೆ. ಬದಲಿಗೆ ವ್ಯಾಪಾರ ಮಾಡುವುದಲ್ಲ ಎಂದು ಏಕಸದಸ್ಯ ಪೀಠ ಹೇಳಿತು.

ಶುಲ್ಕ ಪಾವತಿಸದ ಕಾರಣ ಡಿಪಿಎಸ್ ದ್ವಾರಕಾ ಶಾಲೆಯ 31 ವಿದ್ಯಾರ್ಥಿಗಳನ್ನು ಶಾಲೆಯಿಂದ ಬಹಿಷ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪೋಷಕರು ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಹಿತ ಕಾಯುವ ಹೈಕೋರ್ಟ್‌ನ ಹಿಂದಿನ ಆದೇಶಕ್ಕೆ ಶಾಲೆಯ ನಿರ್ಧಾರ ವಿರುದ್ಧವಾಗಿದೆ. ವಿದ್ಯಾರ್ಥಿಗಳು ಶಾಲೆ ಪ್ರವೇಶಿಸದಂತೆ ಬೌನ್ಸರ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಶಾಲೆ ಉದ್ದೇಶಪೂರ್ವಕವಾಗಿ ತಾವು ನೀಡಿದ ಚೆಕ್‌ಗಳನ್ನು ನಗದೀಕರಿಸುತ್ತಿಲ್ಲ ಎಂದು ಪೋಷಕರು ವಾದಿಸಿದ್ದರು .

ಶಾಲೆಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ  ಆದೇಶ ಪ್ರಶ್ನಿಸಿ ಶಾಲೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪೋಷಕರು ಪ್ರಸ್ತುತ ಮನವಿ ಸಲ್ಲಿಸಿದ್ದರು.

ಹೆಚ್ಚಿಸಲಾದ ಶಾಲಾ ಶುಲ್ಕದ ಶೇಕಡಾ 50 ರಷ್ಟು ಹಣವನ್ನು ಠೇವಣಿ ಇಟ್ಟು ವಿದ್ಯಾರ್ಥಿಗಳನ್ನು ಮತ್ತೆ ತರಗತಿಗಳಿಗೆ ಸೇರಿಸಿಕೊಳ್ಳಲು ಮೇ 16 ರಂದು ಹೈಕೋರ್ಟ್‌ನ ಸಮನ್ವಯ ಪೀಠ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ತನ್ನ ಆದೇಶ ಹಿಂಪಡೆದಿದ್ದ ಡಿಪಿಎಸ್‌ ನ್ಯಾಯಾಲಯದ ಆದೇಶದಂತೆ ಹೆಚ್ಚಿಸಲಾದ ಶುಲ್ಕವನ್ನು ಪಾವತಿಸಬೇಕೆಂಬ ಷರತ್ತಿನ ಮೇಲೆ ಶಾಲೆಯ ವಿದ್ಯಾರ್ಥಿಗಳನ್ನು ಮತ್ತೆ ಸೇರಿಸಿಕೊಂಡಿತ್ತು.

ಗುರುವಾರ ಈ ಬೆಳವಣಿಗೆಯ ಬಗ್ಗೆ ನ್ಯಾಯಮೂರ್ತಿ ದತ್ತಾ ಅವರಿಗೆ ತಿಳಿಸಲಾಯಿತು. ಪರಿಣಾಮ, ಏಕಸದಸ್ಯ ಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು. ವಿದ್ಯಾರ್ಥಿಗಳ ಬಗ್ಗೆ ಶಾಲೆ ವಿಶಾಸಾರ್ಹವಾಗಿ ಮತ್ತು ನೈತಿಕ ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಅದು ಹೇಳಿತು. ಜೊತೆಗೆ ಶಾಲೆಗೆ ಅಗತ್ಯವಾದ ಶುಲ್ಕವನ್ನು ಪಾವತಿಸುವ ಕುರಿತು ಹೈಕೋರ್ಟ್ ನೀಡಿದ ಆದೇಶಗಳನ್ನು ಸಂಬಂಧಪಟ್ಟ ಪೋಷಕರು ಪಾಲಿಸಬೇಕು ಎಂದು ನುಡಿಯಿತು.